ಬೆಂಗಳೂರು: ಬೆಂಗಳೂರಿನಲ್ಲಿ ಮಿತಿ ಮೀರುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತು ಸಿಗ್ನಲ್ ಜಂಪ್ ಮಾಡುವ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದು ಇದಕ್ಕಾಗಿ ಕೃತಕ ಬುದ್ಧಿಮತ್ತೆ (Artificial Intelligence)ಯ ಮೊರೆ ಹೋಗಿದ್ದಾರೆ. ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್ ದೀಪಗಳ ಬದಲು ಎಐ ತಂತ್ರಜ್ಞಾನ ಜಾರಿಗೆ ಬರಲಿದೆ. ಅದರ ಭಾಗವಾಗಿ ಮೊದಲ ಹಂತದಲ್ಲಿ ನಗರದ 41 ಜಂಕ್ಷನ್‌ಗಳಲ್ಲಿ ಹೊಸದಾಗಿ ಎಐ ಆಧಾರಿತ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ATCS) ಅಳವಡಿಕೆಯಾಗಲಿದೆ (AI Traffic Signals).
ಈ ಕ್ರಮವು ಟ್ರಾಫಿಕ್ ಸಿಗ್ನಲ್‌ಗಳನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುವ ನಗರದ ಬಹು-ಹಂತದ ಯೋಜನೆಯ ಭಾಗವಾಗಿದ್ದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. 41 ಜಂಕ್ಷನ್‌ಗಳ ಪೈಕಿ ಈಗಾಗಲೇ 7 ಕಡೆಗಳಲ್ಲಿ ಸಿಗ್ನಲ್‌ಗಳನ್ನು ಹೊಸದಾಗಿ ಸಜ್ಜುಗೊಳಿಸಲಾಗಿದೆ. ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಬೆಂಗಳೂರಿನ 165 ಜಂಕ್ಷನ್‌ಗಳಲ್ಲಿ ಸಂಪೂರ್ಣ ಸ್ವಯಂಚಾಲಿತ ಎಐ ಚಾಲಿತ ಸಿಗ್ನಲ್ ವ್ಯವಸ್ಥೆ ಇರಲಿದೆ.
ಈ ಯೋಜನೆ ಮೂಲಕ ಸಿಗ್ನಲ್‌ನಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುವ ಮತ್ತು ಸಂಚಾರ ಹರಿವನ್ನು ಸುಧಾರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ʼʼ165 ಜಂಕ್ಷನ್‌ಗಳ ಪೈಕಿ 136 ಜಂಕ್ಷನ್‌ಗಳನ್ನು ಮೇಲ್ದರ್ಜೆಗೇರಿಸಲಾಗುವುದು ಮತ್ತು 29 ಜಂಕ್ಷನ್‌ಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು. ಮುಖ್ಯವಾಗಿ ಇವು ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಯಾವುದೇ ಪ್ರಮುಖ ಮೆಟ್ರೋ ಅಥವಾ ರಸ್ತೆ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಯಾಗುವುದಿಲ್ಲʼʼ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ವಿವರಿಸಿದ್ದಾರೆ.
3 ವಿಧಗಳು
ಹೊಸದಾಗಿ ಅಳವಡಿಸಲಾಗುವ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್‌ನಲ್ಲಿ 3 ವಿಧಗಳಿವೆ.
ಮ್ಯಾನುವಲ್ ಮೋಡ್ (Manual mode): ಆ್ಯಂಬುಲೆನ್ಸ್ ಅಥವಾ ವಿಐಪಿ ವಾಹನಗಳ ಸುಗಮ ಸಂಚಾರಕ್ಕೆ ಇದನ್ನು ಬಳಸಲಾಗುತ್ತದೆ.
ವೆಹಿಕಲ್ ಅಕ್ಯುವೇಟೆಡ್ ಕಂಟ್ರೋಲ್ (VAC Mode): ವಾಹನಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಮತ್ತು ಸಿಗ್ನಲ್ ಸಮಯವನ್ನು ಸರಿಹೊಂದಿಸಲು ಕಂಪ್ಯೂಟರ್ ಆಧಾರಿತ ಕ್ಯಾಮೆರಾಗಳನ್ನು ಬಳಸಲಾಗುತ್ತದೆ.
ಎಟಿಸಿಎಸ್ ಮೋಡ್ (ATCS mode): ಇದು ಅನೇಕ ಜಂಕ್ಷನ್‌ಗಳಲ್ಲಿ ಸಂಕೇತಗಳನ್ನು ಮರು ಹೊಂದಿಕೆ ಮಾಡುತ್ತದೆ.
ಈ ಹೊಸ ವ್ಯವಸ್ಥೆಯನ್ನು ಈಗಾಗಲೇ ಕೆ.ಆರ್.ರಸ್ತೆ ಮತ್ತು ರೋಸ್ ಗಾರ್ಡನ್ ರಸ್ತೆಯಲ್ಲಿ ಜಾರಿಗೆ ತರಲಾಗಿದೆ ಮತ್ತು ಈಗ ಹಡ್ಸನ್ ವೃತ್ತದವರೆಗೆ ವಿಸ್ತರಿಸಲಾಗಿದೆ. ಅಲ್ಲಿ ಇತ್ತೀಚೆಗೆ ವಿಎಸಿ ಮೋಡ್ ಅನ್ನು ಸಕ್ರಿಯಗೊಳಿಸಲಾಗಿದೆ. ಎನ್ಆರ್ ಸ್ಕ್ವೇರ್ ಜಂಕ್ಷನ್, ಟೌನ್ ಹಾಲ್ ಜಂಕ್ಷನ್, ಕೆ.ಎಚ್. ರಸ್ತೆಯ ಬಿ.ಎಂ.ಟಿ.ಸಿ. ಜಂಕ್ಷನ್, ಮಿನರ್ವ ವೃತ್ತ ಮತ್ತು ಆರ್ವಿ ಟೀಚರ್ಸ್ ಕಾಲೇಜು ಎಟಿಸಿಎಸ್ ಸಿಗ್ನಲ್ ಹೊಂದಿರುವ ಇತರ ಜಂಕ್ಷನ್‌ಗಳು.
ಈ ಸುದ್ದಿಯನ್ನೂ ಓದಿ: Bangalore Hit and Run Case: ಭೀಕರ ಅಪಘಾತ; ಹಿಟ್ ಆ್ಯಂಡ್ ರನ್‌ಗೆ ಮೂವರು ವಿದ್ಯಾರ್ಥಿಗಳು ಬಲಿ
ಪ್ರಸ್ತುತ ಬೆಂಗಳೂರಿನಲ್ಲಿ ಸುಮಾರು 900 ಜಂಕ್ಷನ್‌ಗಳು ಸಿಗ್ನಲ್ ವ್ಯವಸ್ಥೆಗಳಿಲ್ಲದೆ ಸಂಚಾರ ಪೊಲೀಸರಿಂದ ಹಸ್ತಚಾಲಿತವಾಗಿ ನಿರ್ವಹಿಸಲ್ಪಡುತ್ತಿವೆ. ಈ ವರ್ಷದ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ 165 ಎಟಿಸಿಎಸ್ ಜಂಕ್ಷನ್‌ಗಳು ಮತ್ತು 50 ಹೆಚ್ಚುವರಿ ಹೊಂದಾಣಿಕೆ ಸಿಗ್ನಲ್‌ಗಳು ಸೇರಿದಂತೆ 500ಕ್ಕೂ ಹೆಚ್ಚು ಸಿಗ್ನಲೈಸ್ಡ್ ಜಂಕ್ಷನ್‌ಗಳು ಕಾರ್ಯ ನಿರ್ವಹಿಸಲಿವೆ.