Sunday, 15th December 2024

Air Pollution: ಬೆಂಗಳೂರು, ಮೈಸೂರು, ಮಂಗಳೂರಿನ ಗಾಳಿಯ ಗುಣಮಟ್ಟ ತೀವ್ರ ಕುಸಿತ; ಗ್ರೀನ್ ಪೀಸ್ ಇಂಡಿಯಾ ಹೇಳಿದ್ದೇನು?

Air Pollution

ಬೆಂಗಳೂರು: ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ನಗರದ ಗಾಳಿಯ ಗುಣಮಟ್ಟ ತೀವ್ರ ಕುಸಿದಿದ್ದು, ಮಾಲಿನ್ಯದ (Air Pollution) ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ ಎಂಬುದು ಗ್ರೀನ್‌ಪೀಸ್ ಇಂಡಿಯಾದ ಸಂಶೋಧನಾ ವರದಿಯಲ್ಲಿ ಬಹಿರಂಗಗೊಂಡಿದೆ.

ದಕ್ಷಿಣ ಭಾರತದ 10 ಪ್ರಮುಖ ನಗರಗಳ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳಾದ ಪಿಎಂ 2.5 (ಸೂಕ್ಷ್ಮ) ಮತ್ತು ಪಿಎಂ 10 (ಅತಿಸೂಕ್ಷ್ಮ)ಗಳ ಪ್ರಮಾಣವು ಡಬ್ಲ್ಯುಎಚ್‌ಒ ಮಾರ್ಗಸೂಚಿ ನಿಗದಿಪಡಿಸಿದ ಸರಾಸರಿ ಮಟ್ಟಗಳನ್ನು ಮೀರಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಗ್ರೀನ್‌ಪೀಸ್ ಇಂಡಿಯಾದ ‘ಸ್ಪೇರ್ ದಿ ಏರ್-2’ ವರದಿಯು ಎಚ್ಚರಿಸಿದೆ.

ಈ ವರದಿಯು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರು, ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣ, ಕೊಚ್ಚಿ, ಅಮರಾವತಿ, ವಿಜಯವಾಡ, ಮತ್ತು ಪುದುಚೇರಿ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ವಿಶ್ಲೇಷಿಸುತ್ತದೆ. ಈ 10 ನಗರಗಳ ಪೈಕಿ ವಿಶಾಖಪಟ್ಟಣಂನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ. ಇಲ್ಲಿನ ಗಾಳಿಯಲ್ಲಿ ಪಿಎಂ 2.5 ಕಣಗಳ ಪ್ರಮಾಣ ಡಬ್ಲ್ಯುಎಚ್‌ಒ ಮಾರ್ಗಸೂಚಿ ನಿಗದಿಪಡಿಸಿದ ಮಾನದಂಡಕ್ಕಿಂತ 10 ಪಟ್ಟು ಮತ್ತು ಪಿಎಂ 10 ಕಣಗಳ ಪ್ರಮಾಣ 9 ಪಟ್ಟು ಹೆಚ್ಚಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಇದು ಗಾಳಿಯ ಗುಣಮಟ್ಟ ಮಾಪಕ ನ್ಯಾಶನಲ್‌ ಎಂಬಿಯಂಟ್‌ ಏರ್‌ ಕ್ವಾಲಿಟಿ ಸ್ಟಾಂಡರ್ಡ್‌ (ಎನ್‌ಎಎಕ್ಯೂಎಸ್‌ /NAAQS) ನಿಗದಿಪಡಿಸಿದ ಮಿತಿಗಳನ್ನೂ ಮೀರಿದೆ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನೂ ಓದಿ | Dinesh Gundurao: ಆರೋಗ್ಯ ವಿಮೆ ಮೇಲೆ ಶೇ.18 ಜಿಎಸ್‌ಟಿ ಹೊರೆ; ಮರುಪರಿಶೀಲಿಸುವಂತೆ ಪ್ರಧಾನಿ ಮೋದಿಗೆ ದಿನೇಶ್ ಗುಂಡೂರಾವ್ ಪತ್ರ

ಡಬ್ಲ್ಯುಎಚ್‌ಒ ಮಾರ್ಗಸೂಚಿಗಳೊಂದಿಗೆ ಹೋಲಿಸಿದಾಗ, ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರು, ಹೈದರಾಬಾದ್, ವಿಜಯವಾಡ, ಕೊಚ್ಚಿ, ಅಮರಾವತಿ ಮತ್ತು ಚೆನ್ನೈನಲ್ಲಿ 6 ರಿಂದ 7 ಪಟ್ಟು ಹೆಚ್ಚಾಗಿದೆ. ಅದೇ ರೀತಿ, ಪಿಎಂ 10 ಕಣಗಳ ಮಟ್ಟವು ಬೆಂಗಳೂರು, ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4 ರಿಂದ 5 ಪಟ್ಟುಹೆಚ್ಚಾಗಿದೆ ಎಂಬುದನ್ನು ವರದಿಯು ದೃಢಪಡಿಸಿದೆ.

ಈ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಸಂಶೋಧಕಿ ಆಕಾಂಕ್ಷಾ ಸಿಂಗ್ ಮಾತನಾಡಿ, “ಶುದ್ಧ ಗಾಳಿ ನಮ್ಮ ಆರೋಗ್ಯದ ಮೂಲಭೂತ ಅಗತ್ಯಗಳಲ್ಲಿ ಒಂದು. ಆದರೆ ಪ್ರಸ್ತುತ ವರದಿಯು ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿನ ಮಾಲಿನ್ಯಕಾರಕ ಪಿಎಂ (ಪರ್ಟಿಕ್ಯುಲೇಟ್‌ ಮ್ಯಾಟರ್ಸ್‌) ಕಣಗಳ ಮಟ್ಟವು ಡಬ್ಲ್ಯುಎಚ್‌ಒ ನಿಂದ ಪರಿಷ್ಕೃತ ನಿಗದಿತ ಮಾರ್ಗಸೂಚಿಗಳನ್ನು ಮೀರಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆʼʼ ಎಂದು ತಿಳಿಸಿದ್ದಾರೆ.

ಪ್ರಸ್ತುತ ಅಧ್ಯಯನವು ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನ್ಯಾಷನಲ್‌ ಆಂಬಿಯೆಂಟ್‌ ಏರ್‌ ಕ್ವಾಲಿಟಿ ಸ್ಟ್ಯಾಂಡರ್ಸ್‌ (ಎನ್‌ಎಎಕ್ಯೂಎಸ್‌) ಮಾರ್ಗಸೂಚಿಯಲ್ಲಿ ತಿಳಿಸಲಾದ ಮಾನದಂಡಗಳನ್ನು ಮೀರಿರುವ ನಗರಗಳ ಮೇಲೆ ಕೇಂದ್ರೀಕೃತವಾಗಿದೆ. ಆದರೆ, ಈಗಾಗಲೇ ನಿಗದಿಪಡಿಸಲಾದ ಮಾನದಂಡಗಳನ್ನು ಅನುಸರಿಸುತ್ತಿರುವ ನಗರಗಳನ್ನೂ ಈ ಅಧ್ಯಯನಕ್ಕೆ ಒಳಪಡಿಸುವುದು ಅಗತ್ಯವಾಗಿದೆ. ಈ ನಗರಗಳಲ್ಲಿನ ಗಾಳಿಯ ಗುಣಮಟ್ಟವನ್ನು ಅದು ನಿಗದಿಪಡಿಸಿದ ಮಾನದಂಡಗಳನ್ನು ಮೀರುವ ಮುಂಚಿತವಾಗಿಯೇ ಕಾಪಾಡಿಕೊಳ್ಳುವುದು ಅಗತ್ಯ ಎಂದು ಅವರು ಎಚ್ಚರಿಸಿದ್ದಾರೆ.

ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕಿ ಸೆಲೋಮಿ ಗಾರ್ನಾಯಕ್ ಮಾತನಾಡಿ, “ದಕ್ಷಿಣ ಭಾರತದ ಪ್ರಮುಖ ಹತ್ತು ನಗರಗಳಲ್ಲಿ ಮಾಲಿನ್ಯಕಾರಕಗಳಾದ ಪಿಎಂ 2.5 ಮತ್ತು ಪಿಎಂ 10 ಕಣಗಳ ಮಿತಿ ಮೀರುವಿಕೆಯ ಪ್ರಮಾಣವು ನಮ್ಮ ನಗರಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಕಟು ವಾಸ್ತವತೆಯನ್ನು ನಮ್ಮ ಮುಂದೆ ತೆರೆದಿಡುತ್ತಿದೆ. ಈ ವರದಿಯು ಪ್ರಸ್ತುತ ವಾಯುಮಾಲಿನ್ಯದ ಬಿಕ್ಕಟ್ಟು ಕೇವಲ ಉತ್ತರ ಭಾರತದ ನಗರಗಳನ್ನು ಮಾತ್ರವಲ್ಲ ಇಡೀ ದೇಶವನ್ನು ಒಳಗೊಳ್ಳುತ್ತಿದೆ ಎಂಬುದನ್ನು ಸಾಬೀತುಪಡಿಸಿದೆʼʼ ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ನಗರಗಳಲ್ಲಿ ಅಪಾಯಕಾರಿ ಪ್ರಮಾಣದಲ್ಲಿರುವ ಮಾಲಿನ್ಯಕಾರಕ ಕಣಗಳ ಮಟ್ಟವು ಡಬ್ಲ್ಯುಎಚ್‌ಒ ಮಾರ್ಗಸೂಚಿಗಳನ್ನು ಮೀರಿದ್ದು, ಜನರ ಆರೋಗ್ಯಕ್ಕೆ ತೀವ್ರ ಆತಂಕವನ್ನೊಡ್ಡಿದೆ. ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Ganesh Chaturthi 2024: ಫೆಸ್ಟಿವ್‌ ಸೀಸನ್‌‌‌ನಲ್ಲಿ ಮಕ್ಕಳಿಗಾಗಿ ಬಂತು ಆಕರ್ಷಕ ಎಥ್ನಿಕ್‌ ವೇರ್ಸ್

ಈ ಸಮಸ್ಯೆಗಳ ಪರಿಹಾರಕ್ಕಾಗಿ, ಇತ್ತೀಚೆಗೆ ಪರಿಷ್ಕರಿಸಲಾದ ಡಬ್ಲ್ಯುಎಚ್‌ಒ ನ ವೈಜ್ಞಾನಿಕ ಮಾರ್ಗಸೂಚಿಗಳನ್ನು ಅನುಸರಿಸಲು ನ್ಯಾಷನಲ್‌ ಆಂಬಿಯೆಂಟ್‌ ಏರ್‌ ಕ್ವಾಲಿಟಿ ಸ್ಟ್ಯಾಂಡರ್ಸ್‌ (ಎನ್‌ಎಎಕ್ಯೂಎಸ್‌) (NAAQS) ಮುಂದಾಗಿದೆ. ಹೊಸ ಮಾರ್ಗಸೂಚಿಯಲ್ಲಿ ಗಾಳಿಯ ಗುಣಮಟ್ಟ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳನ್ನೂ ಗಮನದಲ್ಲಿರಿಸಿಕೊಂಡು ಅದಕ್ಕೆ ಸಂಬಂಧಿಸಿದ ಅಂಶಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯನ್ನು ಗ್ರೀನ್‌ಪೀಸ್‌ ಇಂಡಿಯಾ ಆಗ್ರಹಿಸುತ್ತಿದೆʼ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಭಾರತದ ನಗರಗಳಲ್ಲಿ ಮಾಲಿನ್ಯದ ಮಟ್ಟ ಮತ್ತು ಹವಾಮಾನ ಪರಿಸ್ಥಿತಿಗಳು ನಗರದಿಂದ ನಗರಕ್ಕೆ ವಿಭಿನ್ನವಾಗಿವೆ. ಹೀಗಾಗಿ ಸ್ಥಳೀಯ ಏರ್‌ಶೆಡ್ (ಗಾಳಿಯ ಗುಣಮಟ್ಟವನ್ನು ಮತ್ತು ವಾಯು ಮಾಲಿನ್ಯವನ್ನು ನಿರ್ವಹಿಸುವ ಪ್ರದೇಶ) ನಿರ್ವಹಣೆಯೊಂದಿಗೆ ಗುಣಮಟ್ಟದ ಗಾಳಿಗಾಗಿ ಆಯಾ ಪ್ರದೇಶಕ್ಕೆ-ನಿರ್ದಿಷ್ಟವಾದ ಮಾನದಂಡಗಳನ್ನು ಗುರುತಿಸುವುದು ಸೂಕ್ತ. ಈ ವಿಧಾನದಿಂದ ವಾಯು ಮಾಲಿನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದರೊಂದಿಗೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಈ ವರದಿಯು ದಕ್ಷಿಣ ಭಾರತದ ನಗರಗಳಲ್ಲಿ ನಗರದಿಂದ ನಗರಕ್ಕೆ ಭಿನ್ನವಾಗಿರುವ ಮಾಲಿನ್ಯದ ವಿಧಗಳು ಮತ್ತು ಇಲ್ಲಿನ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಎನ್‌ಎಎಕ್ಯೂಎಸ್‌ ಮಾನದಂಡಗಳನ್ನು ಪರಿಷ್ಕರಿಸುವುದನ್ನು ಬಲವಾಗಿ ಪ್ರತಿಪಾದಿಸುತ್ತದೆ. ಸಾರ್ವಜನಿಕರಿಗೆ ಗಾಳಿಯ ಗುಣಮಟ್ಟದ ಮಾಹಿತಿ ಸುಲಭವಾಗಿ ದೊರಕುವಂತೆ “ಹೈಬ್ರಿಡ್” ಮಾದರಿಯಲ್ಲಿ ಗಾಳಿ ಗುಣಮಟ್ಟದ ಪರಿಶೀಲನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಹೂಡಿಕೆಯನ್ನು ವರದಿಯು ಶಿಫಾರಸು ಮಾಡುತ್ತದೆ.

ವರದಿಯು ಸ್ಥಳೀಯ ಸರ್ಕಾರಗಳು ಸಾರ್ವಜನಿಕರು ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಹೆಚ್ಚು ಹೆಚ್ಚು ಮಾಡುವಂತೆ ಉತ್ತೇಜಿಸಬೇಕು ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಆ ಪ್ರದೇಶದಲ್ಲಿರುವ ʻಹಾಟ್‌ಸ್ಪಾಟ್ ʼ ವಲಯಗಳನ್ನು ಗುರುತಿಸಬೇಕು ಎಂದು ಸೂಚಿಸಿದೆ. ಇದರೊಂದಿಗೆ ಸಾರ್ವಜನಿಕ ಸಾರಿಗೆ, ಎಲೆಕ್ಟ್ರಿಕ್ ವಾಹನಗಳು ಮತ್ತು ಸೌರ ಶಕ್ತಿಯ ಬಳಕೆಯಂತಹ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಜನರನ್ನು ಉತ್ತೇಜಿಸಲು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಇಂಧನದ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂಬ ಅಂಶಗಳಿಗೆ ಒತ್ತು ನೀಡಲಾಗಿದೆ.

ಗ್ರೀನ್‌ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್ ಮಾತನಾಡಿ, “ಈ ವರದಿಯು ಉತ್ತರಭಾರತದ ನಗರಗಳಿಗಿಂತ ದಕ್ಷಿಣ ಭಾರತದ ನಗರಗಳಲ್ಲಿ ಗಾಳಿಯು ಶುದ್ಧವಾಗಿದೆ ಎಂಬ ಕಟ್ಟುಕತೆಯನ್ನು ತಳ್ಳಿಹಾಕುತ್ತದೆʼʼ ಎನ್ನುತ್ತಾರೆ. ದಕ್ಷಿಣ ಭಾರತದ ಯಾವುದೇ ಪ್ರಮುಖ ನಗರವು ಸುರಕ್ಷಿತ ಮತ್ತು ಆರೋಗ್ಯಕರ ಗಾಳಿಯನ್ನು ಹೊಂದಿಲ್ಲ ಮತ್ತು ಡಬ್ಲ್ಯುಎಚ್‌ಒ ನಿಗದಿಪಡಿಸಿರುವ ಯಾವುದೇ ಮಾನದಂಡಗಳನ್ನು ಪೂರೈಸುವುದಿಲ್ಲ. ಈ ವರದಿಯು ದಕ್ಷಿಣ ಭಾರತದ ಸರ್ಕಾರಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಅವಿನಾಶ್‌ ಅಭಿಪ್ರಾಯಪಡುತ್ತಾರೆ.

ಈ ಸುದ್ದಿಯನ್ನೂ ಓದಿ | Anant Ambani: ನಮೀಬಿಯಾದ 700ಕ್ಕೂ ಅಧಿಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾದ ಅನಂತ್ ಅಂಬಾನಿ!

ವಾಯುಮಾಲಿನ್ಯವನ್ನು ಹೆಚ್ಚಿಸುವ ವಾಹನಗಳು, ವಿದ್ಯುತ್ ಸ್ಥಾವರಗಳು, ಉದ್ಯಮಗಳು, ತ್ಯಾಜ್ಯಗಳು, ನಿರ್ಮಾಣ ಮತ್ತು ಇತರ ವಲಯಗಳಿಂದ ಮಾಲಿನ್ಯದ ಪ್ರಮಾಣವನ್ನು ನಿಯಂತ್ರಿಸಿ, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಮಗ್ರ ಮತ್ತು ದೀರ್ಘಾವಧಿಯ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಶೀಘ್ರವೇ ಕಾರ್ಯ ಪ್ರವೃತ್ತರಾಗಬೇಕಿದೆ. ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ ಸಾರ್ವಜನಿಕ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.