Friday, 1st November 2024

ಕಾರಜೋಳರ ಕಾಳಜಿಗೆ ಒಲಿದ ವಿಮಾನ ನಿಲ್ದಾಣ

ಫೆ.15ಕ್ಕೆ ಸಿಎಂ ಯಡಿಯೂರಪ್ಪ ಅವರಿಂದ ಶಿಲಾನ್ಯಾಸ

220 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ

ವಿಶೇಷ ವರದಿ: ದೀಪಾ

ವಿಜಯಪುರ: ಬಹುದಿನದ ಬೇಡಿಕೆಯಾದ ವಿಜಯಪುರ ವಿಮಾನ ನಿಲ್ದಾಣದ ಕನಸಿಗೆ ಈಗ ರೆಕ್ಕೆ, ಪುಕ್ಕ ಬಂದಿದ್ದು, ಕೆಲವೇ ತಿಂಗಳಲ್ಲಿ ಆಕಾಶದಂಗಳದಲ್ಲಿ ವಿಮಾನ ಹಕ್ಕಿಗಳು ಹಾರಾಡಲಿವೆ. ವಿಮಾನ ನಿಲ್ದಾಣದ ಕುರಿತು ವಿಶೇಷ ಕಾಳಜಿವಹಿಸಿ, ಪಟ್ಟು
ಹಿಡಿದು ಜಿಲ್ಲೆಗೆ ವಿಮಾನ ನಿಲ್ದಾಣ ತಂದು ಕೊಡುವ ಮೂಲಕ ಡಿಸಿಎಂ ಗೋವಿಂದ ಕಾರಜೋಳ ಮತ್ತೊಮ್ಮೆ ಜಿಲ್ಲೆಯ ಮೇಲೆ
ತಮಗಿರುವ ಅಭಿಮಾನ, ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ.

ಗುಮ್ಮಟನಗರಿ ಎಂದೇ ಪ್ರಸಿದ್ಧಿ ಪಡೆದ ಪ್ರವಾಸಿತಾಣ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರೂ ಸಹ ಇಲ್ಲಿಯವರೆಗೂ ವಿಮಾನ ನಿಲ್ದಾಣದ ಕನಸು ಬರೀ ಕನಸಾಗಿಯೇ ಉಳಿದಿತ್ತು. ಸಾವಿರಾರು ವಿದೇಶಿಗರು ಮತ್ತು ಬೇರೆ ರಾಜ್ಯದ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದರೂ ಸಹ ವಿಮಾನ ನಿಲ್ದಾಣದ ಮಾತು ಮುಂದುವರಿದಿರಲಿಲ್ಲ.

ಆದರೆ ಜಿಲ್ಲೆಯ ಮೇಲೆ ಅಪಾರ ಕಾಳಜಿ ಹೊಂದಿದ್ದ ಡಿಸಿಎಂ ಗೋವಿಂದ ಕಾರಜೋಳ ಇಲ್ಲಿಗೆ ವಿಮಾನ ನಿಲ್ದಾಣವನ್ನು
ತರುವ ಪಟ್ಟು ಹಿಡಿಯುವ ಮೂಲಕ ಜಿಲ್ಲೆಯ ಮಹತ್ತರ ಕನಸನ್ನು ನನಸಾಗಿಸಿದ್ದಾರೆ. ಇನ್ನೂ ಜಿಲ್ಲೆಯಲ್ಲಿರುವ ನೂರಾರು
ಸ್ಮಾರಕಗಳನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರು ಜಿಲ್ಲೆಯತ್ತ ಹೆಜ್ಜೆ ಹಾಕಲು ವಿಮಾನ ನಿಲ್ದಾಣ ಸಹಕಾರಿಯಾಗಲಿದೆ.

ಛಲ ಬಿಡದ ಕಾರಜೋಳ: ಬಹು ದಿನಗಳಿಂದ ಬೇಡಿಕೆಯಾಗಿಯೇ ಉಳಿದಿದ್ದ ವಿಮಾನ ನಿಲ್ದಾಣದ ಪ್ರತಿ ಹಂತದಲ್ಲಿಯೂ
ಮುಂದೆ ನಿಂತು ಕಾರ್ಯನಿರ್ವಹಿಸದ ಕಾರಜೋಳ ವಿಮಾನ ನಿಲ್ದಾಣ ಆಗುವವರೆಗೂ ಬಿಡುವುದಿಲ್ಲ ಎಂಬ ಛಲದಿಂದ, ಇಂದು ಇಡೀ ಜಿಲ್ಲಾ ಜನತೆಯ ಕಾರಜೋಳರ ಮೇಲೆ ಅಭಿಮಾನ ಹುಟ್ಟುವಂತೆ ಕೆಲಸ ಮಾಡಿ ತೋರಿಸಿದ್ದಾರೆ. ಮಾತು ಕಡಿಮೆ ಕೆಲಸ
ಜಾಸ್ತಿ ಎಂಬ ನಿಲುವು ಹೊಂದಿದ ಕಾರಜೋಳರ ಕಾರ್ಯ ವೈಖರಿಯನ್ನು ಮೆಚ್ಚಲೇಬೇಕು. ಕಾರಜೋಳರ ಜತೆ ಸಂಸದ ರಮೇಶ ಜಿಗಜಿಣಗಿ ಸಹ ತೆರೆ ಮರೆಯಲ್ಲಿ ಕೆಲಸ ಮಾಡುವ ಮೂಲಕ ವಿಮಾನ ನಿಲ್ದಾಣವನ್ನು ಕಾರ್ಯರೂಪಕ್ಕೆ ತರುವಲ್ಲಿ ಅಪಾರ ಶ್ರಮಿಸಿದ್ದಾರೆ.

ಈಗಾಗಲೇ ವಿಮಾನ ನಿಲ್ದಾಣದ ರೂಪರೇಷೆ ತಯಾರಿಯಾಗಿದ್ದು ಇದೇ ಫೆ.15 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಂದ ಶಿಲಾನ್ಯಾಸ ನೆರವೇರಲಿದೆ. ಈ ಕುರಿತು ಜಿಲ್ಲಾ ಜನತೆ ಅಪಾರ ಸಂತಸ ವ್ಯಕ್ತಪಡಿಸಿದ್ದು, ಪ್ರವಾಸಿಗರ ಆಗಮನ ಹೆಚ್ಚುವುದರ ಜತೆಗೆ, ವ್ಯಾಪಾರ ವಹಿವಾಟುಗಳು ಸಹ ಮತ್ತಷ್ಟು ಚುರುಕುಗೊಳ್ಳಲಿವೆ.

ಮುಖ್ಯಮಂತ್ರಿಯಿಂದ ವರ್ಚುವಲ್ ಉದ್ಘಾಟನೆ: ಇನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಿಂದಲೇ ವರ್ಚುವಲ್ ಮೂಲಕ ಇದೇ ಫೆ.15ಕ್ಕೆ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಾರಣಾಂತರಗಳಿಂದ ಬರಲು ಆಗದಿರಿಂದ ಆನ್‌ಲೈನ್ ವರ್ಚುವಲ್ ಉದ್ಘಾಟನೆ ಮಾಡಲಿದ್ದಾರೆ.

ಹಲವಾರು ಬಾರಿ ಸ್ಥಳ ಪರಿಶೀಲಿಸಿದ್ದ ಡಿಸಿಎಂ
ಬುರಣಾಪೂರ ಗ್ರಾಮದಲ್ಲಿ ವಿಮಾನ ನಿಲ್ದಾಣಕ್ಕಾಗಿ ಕಾಯ್ದಿರಿಸಿದ್ದ ಜಾಗಕ್ಕೆ ಡಿಸಿಎಂ ಗೋವಿಂದ ಕಾರಜೋಳ ಈ ಹಿಂದೆ ಹಲವಾರು ಬಾರಿ ಹೋಗಿ ಸ್ಥಳ ಪರಿಶೀಲನೆ ಮಾಡಿ, ಅದಕ್ಕೆ ಅಗತ್ಯವಿರುವ ಎಲ್ಲ ಅಂಶಗಳ ಬಗ್ಗೆ ಮತ್ತು ಉಂಟಾಗುತ್ತಿರುವ ಅಡೆ-ತಡೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಮುಂದಿನ ಕ್ರಮಗಳ ಬಗ್ಗೆ ಸದಾ ಚಿಂತಿಸುತ್ತಿದ್ದರು. ವಿಮಾನ ನಿಲ್ದಾಣದ ವಿಷಯ ಬಂದಾಗ ಯಾವುದೇ ಕೆಲಸಗಳಿದ್ದರೂ ಸಹ ಬಿಡುವು ಮಾಡಿಕೊಂಡು ಅದರ ಕಾರ್ಯಕ್ಕಾಗಿ ನಿಲ್ಲುತ್ತಿದ್ದ ಶ್ರಮದ ಫಲಕ್ಕೆ, ಇಂದು ಗುಮ್ಮಟ ನಗರಿಯಲ್ಲಿ ವಿಮಾನಗಳ ಹಾರಟಕ್ಕೆ ಕಾರಣವಾಗಲಿದೆ.

ಎರಡು ಹಂತದಲ್ಲಿ ನಿರ್ಮಾಣ
ತಾಲೂಕಿನ ಬುರಣಾಪೂರ ಗ್ರಾಮದ ಬಳಿ ಇರುವ ಒಟ್ಟು 227 ಎಕರೆ ಜಾಗದಲ್ಲಿ ಒಟ್ಟು 220 ಕೋಟಿ ರು. ವೆಚ್ಚದಲ್ಲಿ ವಿಮಾನ ನಿಲ್ದಾಣ ತಲೆ ಎತ್ತಲಿದ್ದು, ಒಟ್ಟು 11 ತಿಂಗಳಲ್ಲಿಅ ಎರಡು ಹಂತದಲ್ಲಿ ನಿರ್ಮಾಣ ಗೊಳ್ಳಲಿದೆ. ಮೊದಲನೆ ಹಂತದಲ್ಲಿ
95 ಕೋಟಿ ರು. ವೆಚ್ಚದಲ್ಲಿ ಎರಸೈಡ್ ಕಾಮಗಾರಿಗಳು ಪೂರ್ಣ ಗೊಳ್ಳಲಿದ್ದು, ಎರಡನೆ ಹಂತದಲ್ಲಿ 125 ಕೋಟಿ ರು.ಗಳಲ್ಲಿ ‘‘ಸಿಟಿ
ಸೈಡ್’’ ಕಾಮಗಾರಿ ನಡೆಯಲಿವೆ.