Wednesday, 23rd October 2024

Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಮಹಿಳೆಗೆ; ಮಾಲತಿ, ಶಾಂತೇಶ್ವರ, ವೈದೇಹಿ, ಲಲಿತಾ ಹೆಸರು ಮುಂಚೂಣಿಯಲ್ಲಿ

sahitya sammelana

ಹರೀಶ್‌ ಕೇರ, ಬೆಂಗಳೂರು

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Akhila Bharata Kannada Sahitya Sammelana) ಅಧ್ಯಕ್ಷತೆಗೆ ಮಹಿಳಾ ಸಾಹಿತಿಯೊಬ್ಬರನ್ನು ಆರಿಸುವ ನಿರ್ಧಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತು (Kannada sahitya Parishat) ಮುಂದಾಗಿದೆ ಎಂದು ತಿಳಿದು ಬಂದಿದೆ. ಕೆಲವು ಹಿರಿಯ ಲೇಖಕಿಯರ ಹೆಸರುಗಳು ಸಂಭಾವ್ಯ ಅಧ್ಯಕ್ಷತೆಗೆ ಸಂಬಂಧಿಸಿ ಹರಿದಾಡುತ್ತಿವೆ. ಇದೇ ತಿಂಗಳ 28ರೊಳಗೆ ಹೆಸರು ಅಂತಿಮವಾಗಲಿದೆ.

2024ರ ಡಿಸೆಂಬರ್‌ 20ರಿಂದ ಮೂರು ದಿನ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ. ಈ ಸಮ್ಮೇಳನದ ಅಧ್ಯಕ್ಷತೆಗೆ ಸಾಹಿತ್ಯೇತರ ಕ್ಷೇತ್ರಗಳ ಹಿರಿಯ ಸಾಧಕರನ್ನು ಆಯ್ಕೆ ಮಾಡುವ ಬೇಡಿಕೆಯಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರು ಈ ಹಿಂದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹಲವರ ಹೆಸರುಗಳು ಹರಿದಾಡಿದ್ದವು. ಆದರೆ ಇದಕ್ಕೆ ಸಾಹಿತ್ಯ ವಲಯದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. “ಹಾಗಿದ್ದರೆ ಸಾಹಿತ್ಯ ಸಮ್ಮೇಳನ ಎಂಬ ಹೆಸರೇಕೆ?” ಎಂದು ಸಾಹಿತಿಗಳು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ, ಈ ಪ್ರಸ್ತಾವನೆಯನ್ನು ಕೈಬಿಟ್ಟು, ಸಾಹಿತಿಗಳನ್ನೇ ಆರಿಸಲು ಪರಿಷತ್ತು ಮುಂದಾಗಿದೆ.

ಈವರೆಗೆ ನಾಲ್ವರು ಮಹಿಳೆಯರಿಗಷ್ಟೇ ಸ್ಥಾನ:

ಮಹಿಳೆಯೊಬ್ಬರನ್ನು ಸಮ್ಮೇಳನ ಅಧ್ಯಕ್ಷತೆಗೆ ಆರಿಸುವ ಸಂಭವ ದಟ್ಟವಾಗಿದೆ. ಇದಕ್ಕೆ ಕಾರಣ, ಇದುವರೆಗಿನ ಸಾಹಿತ್ಯ ಸಮ್ಮೇಳನ ಚರಿತ್ರೆಯಲ್ಲಿ ನಾಲ್ವರು ಲೇಖಕಿಯರು ಮಾತ್ರ ಅಧ್ಯಕ್ಷರಾಗಿದ್ದಾರೆ. ಇಲ್ಲಿಯವರೆಗೆ ನಡೆದ 86 ಸಮ್ಮೇಳನಗಳಲ್ಲಿ ಕೇವಲ ನಾಲ್ಕು ಮಹಿಳೆಯರು- ಜಯದೇವಿತಾಯಿ ಲಿಗಾಡೆ (1974), ಶಾಂತಾದೇವಿ ಮಾಳವಾಡ (2000), ಕಮಲಾ ಹಂಪನಾ (2003) ಮತ್ತು ಗೀತಾ ನಾಗಭೂಷಣ (2010) ಅಧ್ಯಕ್ಷರಾಗಿದ್ದಾರೆ. ಹೀಗಾಗಿ, ಈ ಬಾರಿ ಮಹಿಳೆಯೊಬ್ಬರನ್ನು ಆಯ್ಕೆ ಮಾಡಲೇಬೇಕು ಎಂಬ ಒತ್ತಾಯ ಲೇಖಕಿಯರ ವಲಯದಿಂದಲೂ ಇದೆ.

ಹಿರಿಯ ಲೇಖಕಿಯರಲ್ಲಿ ಹಲವರ ಹೆಸರುಗಳು ಈ ಸಮ್ಮೇಳನದ ಅಧ್ಯಕ್ಷತೆಗೆ ಕೇಳಿಬಂದಿವೆ. ಮಾಲತಿ ಪಟ್ಟಣಶೆಟ್ಟಿ, ವೀಣಾ ಶಾಂತೇಶ್ವರ, ವೈದೇಹಿ, ಬಿ.ಟಿ ಲಲಿತಾ ನಾಯಕ್‌ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಎಂದಿನಂತೆ ಈ ಬಾರಿಯೂ ಅಧ್ಯಕ್ಷರ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರ ನಡೆಯುತ್ತಿದೆ. ಬಿ ಟಿ ಲಲಿತಾ ನಾಯಕ್‌ ಅವರ ಲಂಬಾಣಿ ಹಿನ್ನೆಲೆಯೂ ಇದರಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಕಳೆದ ಬಾರಿಯಷ್ಟೇ ದೊಡ್ಡರಂಗೇಗೌಡರು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದುದರಿಂದ, ಈ ವರ್ಷ ಇನ್ನೊಬ್ಬರು ಒಕ್ಕಲಿಗರನ್ನು ಪರಿಗಣಿಸುವುದು ಅನುಮಾನ. ಎಚ್‌ ಎಸ್‌ ಶ್ರೀಮತಿ, ಪ್ರತಿಭಾ ನಂದಕುಮಾರ್‌, ವಿಜಯಮ್ಮ, ನೇಮಿಚಂದ್ರ, ಮಲ್ಲಿಕಾ ಘಂಟಿ ಅವರ ಹೆಸರುಗಳೂ ಅಧ್ಯಕ್ಷತೆಗೆ ಸಂಬಂಧಿಸಿ ಕೇಳಿಬರುತ್ತಿವೆ.

ಮಂಡ್ಯದಲ್ಲಿ ದೇವನೂರು ಮಹಾದೇವ ಅವರಿಗೆ ಅಧ್ಯಕ್ಷತೆ ನೀಡಬೇಕು ಎಂದು ಒಂದು ವಲಯದಿಂದ ಆಗ್ರಹವಿದೆ. ಆದರೆ ಅವರೇ ಸ್ವತಃ ಅಧ್ಯಕ್ಷತೆಗೆ ಆಸಕ್ತಿ ಹೊಂದಿಲ್ಲ ಹಾಗೂ ಈ ಹಿಂದೆ ತಿರಸ್ಕರಿಸಿದ್ದೂ ಇದೆ. ದಲಿತರು ಹಾಗೂ ಒಕ್ಕಲಿಗರ ನಡುವೆ ಇಲ್ಲಿ ಪ್ರಾತಿನಿಧ್ಯಕ್ಕಾಗಿ ಪೈಪೋಟಿ ಇದೆ. ಜಾತಿ ಲೆಕ್ಕಾಚಾರ ಏನೇ ಇದ್ದರೂ ಮಹಿಳಾ ಸಾಹಿತಿ ಈ ಬಾರಿ ಅಧ್ಯಕ್ಷ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: Chikkaballapur News: ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅನನ್ಯ:ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ