ಮಾಸಿಕ 2 ಸಾವಿರ ವೇತನ
2 ವರ್ಷದಿಂದ ಸಿಬ್ಬಂದಿ ಅಳಲು ಕೇಳೋರಿಲ್ಲ
ವಿಶೇಷ ವರದಿ: ರಂಗನಾಥ ಕೆ.ಮರಡಿ
ತುಮಕೂರು: ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅನಿಪೂರ್ಣ(ಡಿ ಗ್ರೂಪ್) ಸಿಬ್ಬಂದಿಗೆ ಕಳೆದ 2 ವರ್ಷಗಳಿಂದ ಸಂಬಳವಿಲ್ಲದೆ ಜೀವನ ಅತಂತ್ರಗೊಂಡಿದೆ. ಇಡೀ ರಾಜ್ಯದಲ್ಲಿ ಕೆಲಸ ಮಡುವ ಅನಿಪೂರ್ಣ ಸಿಬ್ಬಂದಿಗೆ ಮಾಸಿಕ 2 ಸಾವಿರ ವೇತನ ನೀಡಲಾಗುತ್ತದೆ. ಆದರೆ ಎರಡು ವರ್ಷದಿಂದ ಶಬರಿಯಂತೆ ಕಾಯುತ್ತಾ ಸಂಬಳ ಬರುತ್ತದೆ ಎಂಬ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ನೇಮಕ ಮಾಡಿಕೊಂಡಿರುವ ಕಾಲೇಜುಗಳ ಪ್ರಾಂಶುಪಾಲರು ಸಂಬಳ ನೀಡು ವಂತೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದರೂ ಕರೋನಾ ನೆಪಹೇಳಿ ಜಾರಿಕೊಳ್ಳುತ್ತಿದ್ದಾರೆ.
ಸಿಡಿಸಿ ಫಂಡ್ನಲ್ಲಿ ಸಂಬಳ ನೀಡಬಹುದು: ಕಾಲೇಜು ಅಭಿವೃದ್ಧಿ ಸಮಿತಿಯ ಫಂಡ್ನಲ್ಲಿ ಅನಿಪೂರ್ಣ ಸಿಬ್ಬಂದಿಗೆ ಪ್ರಾಂಶು ಪಾಲರು ಸಂಬಳ ನೀಡಬಹುದು. ಆದರೆ 2 ಸಾವಿರ ಸಂಬಳಕ್ಕೆ ಇಲಾಖೆಗೆ ಪತ್ರ ಬರೆದು ಕಾಲಹರಣ ಮಾಡುವುದು ಸರಿಯಲ್ಲ. ಸದರಿ ಸಿಬ್ಬಂದಿಗೆ ಇಲಾಖೆಯು ಫಂಡ್ ಮೀಸಲಿಡಬೇಕು. ಆದರೆ ಪ್ರಾಂಶುಪಾಲರು ಇಲಾಖೆಯ ಮೇಲೆ, ಇಲಾಖೆಯು ಪ್ರಾಂಶು ಪಾಲರ ಮೇಲೆ ಸಬೂಬು ಹೇಳುವುದನ್ನು ಬಿಟ್ಟು ವೇತನ ನೀಡಲು ಕ್ರಮಕೈಗೊಳ್ಳಬೇಕು.
ಅನಿಪೂರ್ಣಕ್ಕೆ ಅನುಮತಿ ಇಲ್ಲ: ನಿರ್ದೇಶನಾಲಯದ ಅಧಿಕಾರಿಗಳು ಅನಿಪೂರ್ಣ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳ ದಂತೆ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ. ಖಾಲಿ ಇರುವ ಕಡೆ ಡಿ ಗ್ರೂಪ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳದಿದ್ದರೆ ಕಾಲೇಜು ಗಳಲ್ಲಿ ಕೆಲಸ ಮಾಡುವವರು ಯಾರು? ಹಳೆಯ ಆದೇಶದಂತೆ ಪ್ರಾಂಶುಪಾಲರುಗಳು ಇಂತಹ ಸಿಬ್ಬಂದಿಯನ್ನು ನೇಮಕ ಮಾಡಿ ಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಆದರೆ 2 ವರ್ಷದಿಂದ ನಯಾ ಪೈಸೆ ಸಂಬಳ ನೀಡಿಲ್ಲ. ಹೀಗಾದರೆ ಇವರು ಜೀವನ ನಿರ್ವಹಿ ಸುವುದು ಹೇಗೆ? ಇಲಾಖೆಯು ಇವರಿಗೆ ಸಂಬಳ ನೀಡಲಿ ಎಂದು ಹೆಸರೇಳದ ಪ್ರಾಂಶುಪಾಲರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶನಾಲಯ ಅಧಿಕಾರಿಗಳು ಪತ್ರಿಕೆಯ ಸಂಪರ್ಕಕ್ಕೆ ಸಿಗಲಿಲ್ಲ.
ಏನಿದು ಅನಿಪೂರ್ಣ?
ಪದವಿಪೂರ್ವ ಶಿಕ್ಷಣ ಇಲಾಖೆಯು ಕೆಲವು ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಡಿಗ್ರೂಪ್ ಹುದ್ದೆಯನ್ನು ಮಂಜೂರು ಮಾಡಿದೆ. ಅಂತಹ ಕಾಲೇಜುಗಳ ಪ್ರಾಂಶುಪಾಲರು ಸ್ಥಳೀಯವಾಗಿ ಅವಶ್ಯಕತೆಯ ಆಧಾರದ ಮೇಲೆ ಡಿ ಗ್ರೂಪ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬಹುದು. ಇವರೇ ಅನಿಪೂರ್ಣ ಸಿಬ್ಬಂದಿ.
ಕೋಟ್ಸ್
ಉಪನಿರ್ದೇಶಕರ ಇಲಾಖೆಗೆ ಅಪೂರ್ಣ ಸಿಬ್ಬಂದಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಮಂಜುರಾಗಿದ್ದು, ಖಾಲಿ ಇರುವ ಕಡೆ ಆಯಾ ಕಾಲೇಜಿನ ಪ್ರಾಂಶುಪಾಲರು ಇಂತಹ ಸಿಬ್ಬಂದಿಯನ್ನು ನೇಮಕ ಮಾಡಿ ಕೊಳ್ಳುತ್ತಾರೆ. ಇವರ ಬಗ್ಗೆ ನಮಗೆ ಮಾಹಿತಿ ಇಲ್ಲ.
– ನರಸಿಂಹಮೂರ್ತಿ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ತುಮಕೂರು
ಎರಡು ವರ್ಷದಿಂದ ನಯಾ ಪೈಸೆ ವೇತನ ನೀಡಿಲ್ಲ. ಮಾಸಿಕ 2 ಸಾವಿರದಂತೆ 10 ತಿಂಗಳು ಮಾತ್ರ ಸಂಬಳ ಬರುತ್ತದೆ. ಕರೋನಾ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿರುವ ಅನಿಪೂರ್ಣ ಸಿಬ್ಬಂದಿಗೆ ಶೀಘ್ರವೇ ವೇತನ ನೀಡಿಜೀವನ ನಡೆಸಲು ಅನುಕೂಲ
ಮಾಡಿಕೊಡಬೇಕು.
– ಹೆಸರೇಳದ ಅನಿಪೂರ್ಣ ಸಿಬ್ಬಂದಿ