ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನಕ್ಸಲ್ ನಿಗ್ರಹ ಪಡೆ (Anti-Naxal Force)ಯು ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಶೃಂಗೇರಿ ಮತ್ತು ಕೊಪ್ಪ ತಾಲೂಕಿನಲ್ಲಿ ವ್ಯಾಪಕವಾದ ಕೂಬಿಂಗ್ ಕಾರ್ಯಾಚರಣೆ ನಡೆಸಿದೆ. ಈ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕ ಬೆನ್ನಲ್ಲೇ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಒದಗಿಸದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಎಎನ್ಎಫ್ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಂ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ (IGP) ಅಮಿತ್ ಸಿಂಗ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಶೃಂಗೇರಿಯಲ್ಲಿ ಕಾರ್ಯಾಚರಣೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಗ್ರಾಮದಲ್ಲಿ ಹತ್ತಾರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
Karnataka: During the Combing Ops, A gunfight broke out between the Anti Naxal Force (ANF) and Naxalites in Kabbinale village, Hebri, Karkala Taluk, Udupi district. Naxalite leader Vikram Gowda was killed in the encounter. pic.twitter.com/7meBZ0x5yy
— Pinky Rajpurohit 🇮🇳 (@Madrassan_Pinky) November 19, 2024
ಕೊಪ್ಪ ತಾಲೂಕಿನ ಆಸುಪಾಸಿನಲ್ಲಿರುವ ಗ್ರಾಮಗಳಾದ ಯಡಗುಂದ, ಮುಂಡಗಾರು, ಬೂಕಡಿಬೈಲ್ ಮತ್ತು ಶೃಂಗೇರಿಯ ಸುತ್ತಮುತ್ತಲಿನ ಶಿರ್ಲು, ಹಾಡಿ, ಮಾಟೊಳ್ಳಿ, ಉಡುತಾಳ, ದ್ಯಾವಂತ, ಕಡಕಲ್ ಸೇರಿದಂತೆ ಇನ್ನು ಹಲವು ಗ್ರಾಮಗಳಲ್ಲಿ ಪೊಲೀಸರು ಬಿರುಸಿನ ಕೂಂಬಿಂಗ್ ಕಾರ್ಯಾಚರಣೆಯನ್ನು ಶುರು ಮಾಡಿಕೊಂಡಿದ್ದಾರೆ. ಭದ್ರತಾ ಕ್ರಮಗಳನ್ನು ಬಲಪಡಿಸುವ ಸಲುವಾಗಿ ಎಎನ್ಎಫ್ ನಿರ್ಣಾಯಕ ಜಂಕ್ಷನ್ಗಳಾದ ವಿಘ್ನೇಶ್ವರ ಕಟ್ಟೆಯಲ್ಲಿನ ಹೊರನಾಡು-ಮೆಣುಸಿನಹಾಡಿ ರಸ್ತೆ, ಗಡಿಕಲ್ಲಿನ ಜಯಪುರ-ಶೃಂಗೇರಿ ರಸ್ತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾರ್ಗದಲ್ಲಿ ಸಿಗುವ ಕೆರೆಕಟ್ಟೆ ರಸ್ತೆಯಲ್ಲಿ ಚೆಕ್ಪೋಸ್ಟ್ ಅಳವಡಿಸಲಾಗಿದ್ದು, ಎಲ್ಲ ಆಗುಹೋಗುಗಳನ್ನು ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾನುವಾರ (ನ. 17) ರಾತ್ರಿಯಿಂದ ಎಎನ್ಎಫ್ ತಂಡಗಳು ಈ ಪ್ರದೇಶದಲ್ಲಿನ ಹಲವು ಮನೆಗಳಲ್ಲಿ ಶೋಧ ಕಾರ್ಯವನ್ನು ನಡೆಸಿವೆ. ಶೋಧ ಕಾರ್ಯದ ವೇಳೆ ಕೊಪ್ಪ ತಾಲೂಕಿನ ಕಡೆಗುಂದಿ ಗ್ರಾಮದ ನಿವಾಸಿಯಾದ ಸುಬ್ಬೇಗೌಡ ಎಂಬುವವರ ಮನೆಯಲ್ಲಿ ಸಿಕ್ಕ ದೇಶಿ ನಿರ್ಮಿತ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಸುಬ್ಬೇಗೌಡರ ಮನೆಗೆ ನಕ್ಸಲ್ ಚಟುವಟಿಕೆಯ ನಾಯಕಿ ಮುಂಡಗೂರು ಲತಾ ಮತ್ತು ಅವರ ತಂಡ ಸ್ವಲ್ಪ ದಿನಗಳ ಹಿಂದೆಯಷ್ಟೇ ಬಂದು ಹೋಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ವಶಕ್ಕೆ ತೆಗೆದುಕೊಂಡ ಬಂದೂಕಿನ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಎನ್ಎಫ್ ಅಧಿಕಾರಿಯೊಬ್ಬರು ನೀಡಿದ ದೂರಿಗೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಶಂಕಿತ ಮಾವೋವಾದಿಗಳಾದ ಲತಾ, ಜಯಣ್ಣ ಮತ್ತು ಇತರರು ಕಡಗುಂಡಿ ಗ್ರಾಮದ ಅರಣ್ಯ ಪ್ರದೇಶದ ಸುತ್ತ ನಡೆದಾಡಿದ್ದಾರೆಂದು ಶಂಕಿಸಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದ್ದಾರೆ. ಅಧಿಕಾರಿಗಳು ಈವರೆಗೆ ಮೂರು ದೇಶೀಯ ಎಸ್ಬಿಬಿಎಲ್ ಬಂದೂಕುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA), 1967ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ತನಿಖೆಯು ಕೊಪ್ಪ ಉಪ ವಿಭಾಗದ ಉಪ ಎಸ್ಪಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಕಡೆಗುಂಡಿ ಗ್ರಾಮದ ಸುಬ್ಬೇಗೌಡರ ಮನೆಯ ಆವರಣದಲ್ಲಿ ಪ್ರತ್ಯೇಕವಾಗಿ ಸಿಕ್ಕ ಮೂರು ಎಸ್ಬಿಎಂಎಲ್ ರೈಫಲ್ಗಳು ಮತ್ತು ಅದಕ್ಕೆ ಸಂಬಂಧಿಸಿದ ಮದ್ದು ಗುಂಡುಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ದೂರುದಾರರು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಎಎನ್ಎಫ್ ವಿಶೇಷ ತಂಡವು ನಕ್ಸಲ್ ನಾಯಕಿ ಮುಂಡಗೂರು ಲತಾ ಮತ್ತು ಜಯಣ್ಣ ಸೇರಿದಂತೆ ಅವರ ಜತೆಗಿರುವ ಮಾವೋವಾದಿಗಳನ್ನು ಬಂಧಿಸಲು ಸುಬ್ಬೇಗೌಡ ಅವರ ಮನೆಯ ಸುತ್ತಮುತ್ತಲ ಪ್ರದೇಶದಲ್ಲೇ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ. ನಮ್ಮ ಎಎನ್ಎಫ್ ತಂಡವು ಅತ್ಯಂತ ಚುರುಕಿನಿಂದ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸುತ್ತಿರುವುದರಿಂದ ಇನ್ನು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿದ್ದೇವೆ ಎಂದು ಐಜಿಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.
ಚಿಕ್ಕಮಗಳೂರು, ಮಲೆನಾಡು ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆಗಳು ಮತ್ತೆ ಪ್ರಾರಂಭವಾಗಿರುವುದರಿಂದ ಸ್ಥಳೀಯರಲ್ಲಿ ತಳಮಳ ಆರಂಭವಾಗಿದೆ. ಕಳೆದ ಕೆಲವು ವರ್ಷಗಳು ಶಾಂತತೆಯಿಂದ ಇದ್ದ ಪ್ರದೇಶಗಳಿಗೆ ಈಗ ಭದ್ರತಾ ವ್ಯವಸ್ಥೆಯ ಅಗತ್ಯವಿದೆ.
2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ನ ಎನ್ಕೌಂಟರ್ ಮತ್ತು 2007ರ ಏಪ್ರಿಲ್ನಲ್ಲಿ ವಡೆಯರ್ ಮಠದಲ್ಲಿ ಮೂವರು ನಕ್ಸಲ್ಗಳ ಕೊಲೆಯ ನಂತರ ನಕ್ಸಲ್ ಚಟುವಟಿಕೆಗಳು ಬಹುತೇಕ ಕಡಿಮೆಯಾಗಿದ್ದವು. ಈಗ ಮತ್ತೆ ಹೊಸ ನಕ್ಸಲ್ಗಳು ಹುಟ್ಟಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Vikram Gowda: 20 ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ನಕ್ಸಲ್; ಯಾರೀತ ವಿಕ್ರಂ ಗೌಡ?