ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ʼಅಣ್ಣಯ್ಯʼ ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮನ ತಲುಪಿರುವ ನಟ ವಿಕಾಶ್ ಉತ್ತಯ್ಯ (Vikash Uthaiah) ನಾಯಕನಾಗಿ ನಟಿಸುತ್ತಿರುವ ʼಅಪಾಯವಿದೆ ಎಚ್ಚರಿಕೆʼ ಚಿತ್ರದ (Apaayavide Eccharike Movie) ʼಬ್ಯಾಚುಲರ್ಸ್ ಬದುಕುʼ ಹಾಡು ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಕನ್ನಡ ಚಿತ್ರರಂಗದ ಬ್ಯಾಚುಲರ್ ನಾಯಕ ನಟರಾದ ತಿಲಕ್, ರಾಕೇಶ್ ಅಡಿಗ, ನವೀನ್ ಶಂಕರ್ ಹಾಗೂ ವಿಕ್ಕಿ ವರುಣ್, ಚಿತ್ರದ ನಿರ್ದೇಶಕರೂ ಆಗಿರುವ ಅಭಿಜಿತ್ ತೀರ್ಥಹಳ್ಳಿ ಬರೆದಿರುವ ʼಬ್ಯಾಚುಲರ್ಸ್ ಬದುಕುʼ ಹಾಡನ್ನು ಲೋಕಾರ್ಪಣೆ ಮಾಡಿದರು. ಹಾಡು ಬಿಡುಗಡೆ ಮಾಡಿದ ಸ್ಟಾರ್ ನಟರು ತಮ್ಮ ಬ್ಯಾಚುಲರ್ ಜೀವನದ ಅನುಭವಗಳನ್ನು ಹೇಳಿಕೊಂಡು, ʼಬ್ಯಾಚುಲರ್ಸ್ ಬದುಕುʼ ಹಾಡು ಹಾಗೂ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿರುವ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳುಳ್ಳ ಚಿತ್ರ. ನಾನು ಕೂಡ ಊರಿನಿಂದ ಬೆಂಗಳೂರಿಗೆ ಬಂದು ಬ್ಯಾಚುಲರ್ ಜೀವನ ಕಳೆದವನು. ಆ ಅನುಭವಗಳೇ ಈ ಹಾಡು ಬರೆಯಲು ಸ್ಪೂರ್ತಿ ಎಂದರು ನಿರ್ದೇಶಕ ಹಾಗೂ ಗೀತ ರಚನೆಕಾರ ಅಭಿಜಿತ್ ತೀರ್ಥಹಳ್ಳಿ.
ಒಂದು ಹೊಸತಂಡಕ್ಕೆ ಸಪೋರ್ಟ್ ಮಾಡಲು ಬಂದಿರುವ ಕನ್ನಡ ಚಿತ್ರರಂಗದ ಸ್ಟಾರ್ ನಟರಿಗೆ ಧನ್ಯವಾದ ಎಂದು ಮಾತನಾಡಿದ ನಾಯಕ ವಿಕಾಶ್ ಉತ್ತಯ್ಯ, ನಮ್ಮ ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಇದೊಂದು ಹಾರಾರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅಂದುಕೊಂಡರು. ಈಗ ಈ ಹಾಡನ್ನು ನೋಡಿದಾಗ ಇದೊಂದು ಪಕ್ಕಾ ಎಂಟರ್‌ಟೈನ್ಮೆಂಟ್ ಚಿತ್ರ ಅನಿಸಬಹುದು. ಹೌದು., ಎಲ್ಲಾ ಜಾನರ್‌ಗಳನ್ನು ಒಳಗೊಂಡ ಪರಿಶುದ್ಧ ಕೌಟುಂಬಿಕ ಚಿತ್ರವಿದು ಎಂದು ತಿಳಿಸಿದರು.
ಹೊಸತಂಡಕ್ಕೆ ಬೆಂಬಲ ನೀಡಲು ಬಂದಿರುವ ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದರಿಗೆ ಧನ್ಯವಾದ. ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಒಂದೊಳ್ಳೆ ಚಿತ್ರ ಮಾಡಿದ್ದಾರೆ. ಗೆಲ್ಲುವ ಭರವಸೆ ಇದೆ. ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಮಂಜುನಾಥ್.
ಈ ಸುದ್ದಿಯನ್ನೂ ಓದಿ | Winter Torn Jacket Fashion: ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಟೊರ್ನ್ ಜಾಕೆಟ್ಸ್
ಸಂಗೀತ ನಿರ್ದೇಶಕ ಹಾಗೂ ಛಾಯಾಗ್ರಾಹಕ ಸುನಾದ್ ಗೌತಮ್, ನಾಯಕಿ ರಾಧಾ ಭಗವತಿ, ನಟ ಮಿಥುನ್ ತೀರ್ಥಹಳ್ಳಿ, ದೇವ್ ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.