ಮಂಗಳೂರು: ಮಂಗಳೂರಿನಲ್ಲಿ ಆ್ಯಪಲ್ ಐಫೋನ್ (apple iPhone) ಕಂಪನಿ ವಿರುದ್ಧ ಅದರ ಗ್ರಾಹಕರೇ ಸಮರ ಸಾರಿದ್ದಾರೆ. ಕಂಪನಿಯ ಕಳಪೆ ಸರ್ವಿಸ್ (iPhone Service) ಹಾಗೂ ಉಡಾಫೆಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಮಂಗಳೂರಿನಲ್ಲಿ (Mangalore news) ಆ್ಯಪಲ್ ಐಪೋನ್ ಗ್ರಾಹಕರು ಕಂಪೆನಿ ವಿರುದ್ದ ನಿನ್ನೆ ಪ್ರತಿಭಟನೆ (Protest) ನಡೆಸಿದರು.
ಆ್ಯಪಲ್ ಐಫೋನ್ ಸರ್ವಿಸ್ ಸೆಂಟರ್ ವಿರುದ್ಧ ರಿಟೇಲರ್ ಹಾಗೂ ಗ್ರಾಹಕರ ಪ್ರತಿಭಟನಾ ಜಾಥಾ ಮಂಗಳವಾರ ನಗರದಲ್ಲಿ ಜರುಗಿತು. ಜ್ಯೋತಿ ಸರ್ಕಲ್‌ನ ಆ್ಯಪಲ್ ಸರ್ವಿಸ್ ಸೆಂಟರ್ ಮ್ಯಾಪಲ್ ಎದುರುಗಡೆಯಿಂದ ಕ್ಲಾಕ್ ಟವರ್ ವರೆಗೆ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ಕ್ಲಾಕ್ ಟವರ್ ಬಳಿ ತಮ್ಮ ಬೇಡಿಕೆಗಳನ್ನು ಕೂಡಲೇ ಪೂರೈಸುವಂತೆ ಸಂಸ್ಥೆಯನ್ನು ಆಗ್ರಹಿಸಿದರು.
ಈ ವೇಳೆ ಮಾತಾಡಿದ ಶೈಲೇಂದ್ರ ಸರಳಾಯ ಅವರು, “ನಮ್ಮಲ್ಲಿ ಹಾಗು ಬೇರೆ ಕಡೆ ಮೊಬೈಲ್ ಖರೀದಿಸಿದ ಹಲವು ಗ್ರಾಹಕರು ಆ್ಯಪಲ್ IOS UPDATE ನಂತರ ಮೊಬೈಲ್ ಸ್ಕ್ರೀನ್ ನಲ್ಲಿ ಲೈನ್ ಅಥವಾ ಸ್ಕ್ರೀನ್ ಬ್ಲ್ಯಾಂಕ್ ಆಗುವಂತಹ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಯಿಂದ ನೊಂದ ಗ್ರಾಹಕರು ಆ್ಯಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ಅನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕೋರಿದಾಗ ಅವರ ಉಡಾಫೆ ಉತ್ತರ ಗ್ರಾಹಕರಿಗೆ ಆಘಾತ ಉಂಟು ಮಾಡಿದೆ. ಗ್ರಾಹಕರ ಹಿತದೃಷ್ಟಿಯಿಂದ, ಆ್ಯಪಲ್ ನ ಮ್ಯಾಪಲ್ ಸರ್ವಿಸ್ ಸೆಂಟರ್ ನ ಕಳಪೆ ಸೇವೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ” ಎಂದರು.
ಬಳಿಕ ಮಾತಾಡಿದ ದಕ್ಷಿಣ ಕನ್ನಡ ಮತ್ತು ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಸಂಘಟನೆಯ ರಾಜ್ಯ ಸುದ್ದಿ ಮತ್ತು ಮಾಧ್ಯಮ ನಿರ್ವಾಹಕ ವಿವೇಕ್ ಜಿ ಸುವರ್ಣ ಅವರು, “ಇದೇ ಮೊದಲ ಬಾರಿಗೆ ಸ್ಥಳೀಯ ರೀಟೇಲರ್ ಗಳು ತಮ್ಮ ಗ್ರಾಹಕರಿಗೋಸ್ಕರ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ ಹಲವು ನೊಂದ ಗ್ರಾಹಕರು ಪಾಲ್ಗೊಳ್ಳುತ್ತಿದ್ದಾರೆ. ಕಂಪೆನಿ ಸ್ಪಂದಿಸದೆ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ” ಎಂದರು.
ಸಂಘಟನೆಯ ಚೇರ್ ಮೆನ್ ಗುರುದತ್ ಕಾಮತ್, ಅಧ್ಯಕ್ಷ ರಾಜೇಶ್ ಮಾಬಿಯಾನ್, ಕಾರ್ಯದರ್ಶಿ ಇಮ್ರಾನ್, ಸ್ಥಾಪಕ ಅಧ್ಯಕ್ಷ ಸಲೀಮ್, ಉಪಾಧ್ಯಕ್ಷ ಅಝರ್ ಮೊಹಮದ್ ಮತ್ತಿತರರು ಉಪಸ್ಥಿತರಿದ್ದರು.
ಅಸೋಸಿಯೇಶನ್ ಪ್ರಮುಖ ಬೇಡಿಕೆಗಳು:
ಸಾಫ್ಟ್‌ವೇರ್ ಅಪ್ಲೇಟ್‌ನಿಂದ ಹಾನಿಗೊಂಡ ಡಿಸ್ಟ್‌ಗಳ ಉಚಿತ ಬದಲಾವಣೆ
ಸ್ವತಂತ್ರ ಆ್ಯಪಲ್ ಸೇವಾ ಕೇಂದ್ರಗಳು.
ರಿಜಿಸ್ಟ್ರೇಷನ್ ಫೀಸ್ ವಸೂಲಿ ಮಾಡದಿರುವುದು.
ಬಳಕೆದಾರರು ತಮ್ಮದೇ ಆದ ಸಾಧನಗಳನ್ನು ಸರಿಪಡಿಸಲು ಅಥವಾ ತೃತೀಯ ಪಾರ್ಟಿ ತಂತ್ರಜ್ಞರಿಂದ ಸರಿಪಡಿಸಲು ಅವಕಾಶವನ್ನು ಒದಗಿಸಬೇಕು.
ಗ್ರಾಹಕರನ್ನು ಕಡೆಗಣನೆ ಮಾಡದಿರುವುದು.
ಇದನ್ನೂ ಓದಿ: Apple Intelligence: ಐಫೋನ್, ಐಪ್ಯಾಡ್, ಮ್ಯಾಕ್‌ನಲ್ಲಿ ಶೀಘ್ರವೇ ಲಭ್ಯವಾಗಲಿದೆ ಆಪಲ್ ಇಂಟೆಲಿಜೆನ್ಸ್!