Thursday, 21st November 2024

Areca Nut : ಶಿವಮೊಗ್ಗ ಎಪಿಎಂಸಿ ಯಾರ್ಡ್‌ನಲ್ಲಿ Acrysol 150 ಲಿಕ್ವಿಡ್ ಬಳಸಿ ಅಡಿಕೆಗೆ ಆಕರ್ಷಕ ಬಣ್ಣ?

areca nut painting
  • ಅರವಿಂದ ಶಿಗದಾಳ್, ಮೇಲುಕೊಪ್ಪ

ಅಡಿಕೆ ಚೊಗರಿನಿಂದ ಆಕರ್ಷಕ ಬಣ್ಣದ ಪೆಯಿಂಟ್ ತಯಾರಿಸಲಾಗುತ್ತದೆ ಎಂಬ ಮಾಹಿತಿ ಆಗಾಗ ಪೇಪರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಇಂಟರೆಸ್ಟಿಂಗ್ ಸುದ್ದಿ. ಆದರೆ, Acrysol 150 ಎಂಬ ಲಿಕ್ವಿಡ್ ಪೆಯಿಂಟ್ ಬಳಸಿ ತಿನ್ನುವ ಅಡಿಕೆಗೇ (Areca Nut Chewing) ಆಕರ್ಷಕ ಬೆಲೆ ಬರುವಂತೆ ಮಾಡುವ ಒಂದು ವಿಶಿಷ್ಟ ಚಟುವಟಿಕೆ ಶಿವಮೊಗ್ಗದ (Shivamogga news) ಪ್ರತಿಷ್ಠಿತ ಕೃಷಿ ಉತ್ಪನ್ನಗಳ ಮಾರಾಟ ಕೇಂದ್ರ APMC ಯಲ್ಲಿ ನಡೆಯುತ್ತಿದೆ! ಇದು ಶಾಕಿಂಗ್ ಸುದ್ದಿ.

ಹೌದು, ಶಿವಮೊಗ್ಗದ APMC ಅಂಗಳ (Agricultural Produce Market Committee yard) ಈಗ ಕೇವಲ ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಸ್ಟೋರೇಜ್ ಸಮುಚ್ಛಯ ಮಾತ್ರ ಅಲ್ಲ! ಅಲ್ಲಿ ಅಡಿಕೆಗೆ ಬಣ್ಣ ಹಚ್ಚುವ, ಹಚ್ಚಿ ಒಣಗಿಸುವ, ಒಣಗಿಸಿ ಮಿಕ್ಸ್ ಮಾಡುವ, ಮಿಕ್ಸ್ ಮಾಡಿ ಸಾಂಪ್ರದಾಯಕ ಅಡಿಕೆಯಾಗಿ ಕಾಣುವಂತೆ ಮಾಡಿ ಮಾರಾಟ ಮಾಡುವ ಒಂದು ರಂಗಿನ ಚಟುವಟಿಕೆಯ ಪ್ರಾಂಗಣವೂ ಹೌದು.

ಶಿವಮೊಗ್ಗ APMC ಯಾರ್ಡ್‌ನಲ್ಲಿ, ಬೇರೆ ಬೇರೆ ಕಡೆಯಿಂದ ಬಂದ ಚಾಲಿ ಅಡಿಕೆಗೆ, ಬಣ್ಣ ಬಳಿದು ಕೆಂಪಡಿಕೆ ಮಾಡಲಾಗುತ್ತದೆ. ಬೆಳಗ್ಗೆ ಆರರಿಂದ ಒಂಭತ್ತರವರೆಗೆ ಇದು ನಿತ್ಯ ನಿರಂತರ! ಶಿವಮೊಗ್ಗ APMC ಪ್ರಾಂಗಣದ ಒಳ ಭಾಗದ ರಸ್ತೆ ಬದಿಗಳಲ್ಲಿ ಹಸಿರು ಗಿಡಮರಗಳಿದ್ದು, ಬೆಳಗ್ಗೆ ವಾಕಿಂಗ್ ಹೋಗುವವರು ಅಲ್ಲಿ ನಡೆಯುವ ಈ ಅಡಿಕೆ ಪೆಯಿಂಟಿಂಗ್ ಕೆಲಸವನ್ನು ನೋಡಿ ಕಣ್ಣು ತುಂಬಿಸಿಕೊಳ್ಳಬಹುದು!

ಅಷ್ಟು ಮುಂಚೆ ಇಲ್ಲಿ ಬರಲಾಗದವರು ಈ ಬರಹದ ಜೊತೆಗಿರುವ ಫೋಟೋ ನೋಡಿ, ತಿನ್ನುವ ಅಡಿಕೆಗೆ ಬಣ್ಣ ಹಾಕುವ ಕೃತಕ ಕೃತ್ಯವನ್ನು ನೋಡಬಹುದು. ಹಾಂ, ಆ ಬಣ್ಣ ಕೇವಲ ಅಡಿಕೆಗೆ ರಂಗು ಹೆಚ್ಚಿಸಲು ತಯಾರಿಸಿದ ಅಡಿಕೆಯದೇ ಚೊಗರ ಬಣ್ಣ ಮಾತ್ರ ಅಲ್ಲ, ಅದರಲ್ಲಿ ಅನೇಕ ವಿಶಿಷ್ಟ ಪೆಯಿಂಟ್‌ಗಳೂ ಇವೆ!

ಹೆಚ್ಚಾಗಿ ಬಳಸುವ ಒಂದು ಪ್ರಮುಖ ಪೆಯಿಂಟ್ ಹೆಸರು Acrysol 150 ! ಅರೆ, ಇದೇನು ಇಲ್ಲಿ ಅಡಿಕೆಗೆ ಚೊಗರು ಬಣ್ಣ ಹಚ್ಚುತ್ತಿದ್ದಾರೆ? ಅಡಿಕೆಗೆ ಹೊರಗಡೆಯಿಂದ ಬಣ್ಣ ಹಚ್ಚಿದರೆ ಸಾಕಾ!!? ಅದು ಅಂಟಿಕೊಳ್ಳುತ್ತದಾ!!? ದೂರದಲ್ಲಿ ನಿಂತು ಅಡಿಕೆಗೆ ಯಾವ ಕೆಂಪು ಬಣ್ಣದೊಂದಿಗೆ ಮಿಕ್ಸ್ ಮಾಡುತ್ತಾರೆ ಎಂಬ ಕುತೂಹಲದಿಂದ ಹತ್ತಿರ ಹೋದಾಗ ಗಮನಕ್ಕೆ ಬಂದಿದ್ದು Acrysol 150 ಎಂಬ ಲಿಕ್ವಿಡ್!

ಈ ಅಡಿಕೆ ಪೆಯಿಂಟಿಂಗ್ ನೆಡೆಯುವುದು ಕದ್ದು ಮುಚ್ಚಿ ಅಲ್ಲ, ಯಾರಿಗೂ ಕಾಣದ ಫಾರ್ಮ್ ಹೌಸ್‌ಗಳಲ್ಲೂ ಅಲ್ಲ, ಎಲ್ಲ ಮಲಗಿದ ಅರ್ಧ ರಾತ್ರಿಯಲ್ಲೂ ಅಲ್ಲ. ಬದಲಿಗೆ ಹಾಡ ಹಗಲಲ್ಲೆ! APMC ಒಳಗಿನ ರಸ್ತೆ ಪಕ್ಕದಲ್ಲೆ! ಜನ ವಾಕಿಂಗ್ ಮಾಡ್ತಾ ಇದ್ದರೆ ಅವರ ಸಮ್ಮುಖದಲ್ಲೆ! ಹಾಗಾಗಿ ಅಡಿಕೆ ಪೆಯಿಂಟಿಂಗ್ ಕಳ್ಳ ವ್ಯವಹಾರ ಅಲ್ಲ.

ವಾಕಿಂಗ್ ಮುಗಿಸಿ ಮನೆಗೆ ಬಂದು, ತಿಂಡಿ ತಿಂದು, ಕಾಫಿ ಕುಡಿದು, “ಒಂದು ವೀಳ್ಯ ಹಾಕುವ” ಅಂದುಕೊಂಡು, ಅಡಿಕೆ, ಸುಣ್ಣ ಹಚ್ಚಿದ ಎಲೆಯನ್ನು ಬಾಯಿಗೆ ಹಾಕಿಕೊಂಡರೆ…. ಬಾಯಲ್ಲಿರುವುದು Acrysol 150 ಬಣ್ಣದ ಅಡಿಕೆ, ತಲೆಗೆ ಸೇರಿ ಹತ್ತಾರು ಪ್ರಶ್ನೆಗಳನ್ನು ಸೃಷ್ಟಿ ಮಾಡುತ್ತದೆ!

1) ಅಡಿಕೆಗೆ ಇಂತಹ ಬಣ್ಣ ಬಳಿಯಲು ಅನುಮತಿ ಇದೆಯಾ? ಬಳಿಯಬಹುದಾ?

2) ಆಹಾರ ಇಲಾಖೆ, APMC ಕಮಿಟಿಗಳು ಹೀಗೆ ಅಡಿಕೆಗೆ ಬಣ್ಣ ಬಳಿಯಲು NOC, ಲೈಸನ್ಸ್, ದೃಢೀಕರಣಗಳನ್ನು ಕೊಟ್ಟಿರಬಹುದಾ?

3) APMCಯಲ್ಲಿ ಸಕ್ರಮವಾಗಿ, ರಾಜಾರೋಷವಾಗಿ ಈ ವ್ಯವಹಾರ ನೆಡೆಯುತ್ತಿದೆ ಅಂತಾದಾಗ, ಅಡಿಕೆಗೆ ಬಣ್ಣ ಬಳಿಯುವಿಕೆ ಒಂದು ಸಮಸ್ಯೆ ಅಲ್ಲ ಅಲ್ವಾ?

4) ಕಳೆದ ವಾರ ಇದೇ ವ್ಯವಹಾರದ ಒಂದು ವೀಡಿಯೋ ಹರಿದಾಡಿತ್ತು. ಆದರೂ ಯಾವುದೇ ಕ್ರಮ ಕೈಗೊಳ್ಳದೆ, ಅಡಿಕೆ ಪೆಯಿಂಟಿಂಗ್ ಮಾಡಲಾಗುತ್ತಿದೆ ಅಂತಾದರೆ ಇದು APMC ಬೈ ಲಾ ಪ್ರಕಾರ ನೆಡೆಸಬಹುದಾದ ಒಂದು ಚಟುವಟಿಕೆಯೇ ಇರಬೇಕು ಅಲ್ವಾ?

5) APMC ಒಳಗಡೆಯೇ ಇದು ನಡೆಯುತ್ತಿದೆ ಅಂತಾದರೆ, ಯಾರೋ ಹೊರಗಡೆಯವರು ಇದನ್ನು ಮಾಡಿರಲಿಕ್ಕಿಲ್ಲ. APMC ಅಡಿಕೆ ವರ್ತಕರೇ ಈ ಕೆಲಸ ಮಾಡುತ್ತಿದ್ದಾರೆ ಅಂತಾಯ್ತು ಅಲ್ವಾ? ಅಂದ ಮೇಲೆ ಅಡಿಕೆ ವರ್ತಕರು, ಅಡಿಕೆ ಮಾರಾಟ ಸಹಕಾರಿ ಸಂಸ್ಥೆಗಳು ಇದನ್ನು ಒಪ್ಪಿ ಕೊಂಡಿವೆ ಅಂತ ಭಾವಿಸಬಹುದು ಅಲ್ವಾ? ಎಲ್ಲಾ ವರ್ತಕರು, ಸಹಕಾರಿ ಸಂಸ್ಥೆಗಳೂ ಅಡಿಕೆಗೆ ಬಣ್ಣ ಬಳಿಯುವ ಚಟುವಟಿಕೆ ಮಾಡುತ್ತಿವೆಯಾ?

6) ಹೀಗೆ ಶಿವಮೊಗ್ಗ APMC ಪ್ರಾಂಗಣದಲ್ಲಿ ಬೇಯಿಸದ ಅಡಿಕೆಗೆ (ಚಾಲಿ!!?) ಅಥವಾ ಭಾಗಶಃ ಬೇಯಿಸಿದ ಕೆಂಪಡಿಕೆಗೆ ಕೆಂಪು ಬಣ್ಣ ಬಳಿದು ಮಾರಾಟ ಮಾಡಲು ಸುಲಭವಾದ ಉಪಾಯ ಇರುವಾಗ, ಕೆಂಪಡಿಕೆ ಮಾಡುವ ರೈತರು ಸುಮ್ಮನೆ ಕಟ್ಟಿಗೆ ಬಳಸಿ, 2-3 ಗಂಟೆಗಳು ಅಡಿಕೆ ಬೇಯಿಸುವುದನ್ನು ನಿಲ್ಲಿಸಬಹುದು?

7) ಅಥವಾ APMC ಪ್ರಾಂಗಣದ ಮಾದರಿಯಲ್ಲಿ ರೈತರೇ ನೇರ ಅಡಿಕೆಗೆ ಪೆಯಿಂಟ್ ಹಚ್ಚುವ ಕೆಲಸ ಮಾಡಿ, ಇಂದನ ಮೂಲ, ಶ್ರಮ, ಹಣ ಉಳಿಸಬಹುದು?

8) Acrysol 150 ನ್ನು APMC ಯಾರ್ಡ್‌ನಲ್ಲಿ ಅಡಿಕೆಗೆ ಕಲರ್ ಬರಿಸಲು ಬಳಸುತ್ತಾರೆ ಅಂತಾದರೆ, Acrysol 150 ಎನ್ನುವುದು ಒಂದು ಆರೋಗ್ಯದಾಯಕ (ಫುಡ್ ಗ್ರೇಡ್) ರಾಸಾಯನಿಕ ಪೆಯಿಂಟ್ ಇರಬೇಕು ಅಲ್ವಾ? ಈ ಪೆಯಿಂಟೆಡ್ ಅಡಿಕೆ ತಿಂದರೆ ಒಂದಿಷ್ಟು ರೋಗಗಳು ಬಾರದಂತೆ ತಡೆಯುವ ಔಷಧಿಯಾಗಿ ಕೆಲಸ ಮಾಡುತ್ತಿರಬಹುದು?

9) ಸಾಂಪ್ರದಾಯಿಕವಾಗಿ ಬೇಯಿಸಿದ ಕೆಂಪಡಿಕೆಗಿಂತ ಉತ್ಕೃಷ್ಟವಾಗಿರಬಹುದಾದ ಈ APMC ಮೇಡ್ ಪೆಯಿಂಟೆಡ್ ಅಡಿಕೆಗೆ, ಅದಕ್ಕಿಂತ ಕಡಿಮೆ ಗುಣ ಮಟ್ಟದ ಬೇಯಿಸಿದ ಅಡಿಕೆಯನ್ನು ಯಾರಾದರು ಮಿಶ್ರ ಮಾಡುವ ಸಾಧ್ಯತೆ ಇರಬಹುದು! ಇದಕ್ಕೆ APMC ಸೂಕ್ತ ಕ್ರಮ ಕೈಗೊಂಡಿರಬಹುದು!

10) ಕೊನೇಯದಾಗಿ, ಬಾಯಲ್ಲಿರುವ ಅಡಿಕೆಯನ್ನು ಪೂರ್ತಿ ಅಗಿದು ನುಂಗುವ ಸಂದರ್ಭದಲ್ಲಿ, ಶಿವಮೊಗ್ಗದ APMC ಒಳಗಿನ ಅಡಿಕೆ ವರ್ತಕರೇ ಹೇಳಿದ ಒಂದು ಮಾತು ನೆನಪಾಗುತ್ತಿದೆ :

“ಸಾಂಪ್ರದಾಯಿಕವಾಗಿ ಬೇಯಿಸಿದ ಅಡಿಕೆ, ಅರ್ಧಂಬರ್ಧ ಬೇಯಿಸಿದ ಅಡಿಕೆ, ಚೊಗರು ಹಾಕದೇ ಡ್ರೈಯರ್‌ನಲ್ಲಿ ಬೇಯಿಸಿ ಒಣಗಿಸಿದ ಅಡಿಕೆ, ಉತ್ತರ ಕರ್ನಾಟಕದ ಚಾಲಿ ಅಡಿಕೆ, ಕಳ್ಳ ದಾರಿಯಲ್ಲಿ ಬಂದ ವಿದೇಶಿ ಆಮದು ಅಡಿಕೆ, ಫಾರ್ಮ್ ಹೌಸ್‌ಗಳಲ್ಲಿ ಮಿಶ್ರಣ ಮಾಡಲ್ಪಟ್ಟ ವಿವಿಧ ಗುಣಮಟ್ಟಗಳ ಅಡಿಕೆ ಎಲ್ಲವುದು ಸೇರುವುದು ಒಂದೇ ಗಮ್ಯಸ್ಥಾನವನ್ನು, ಅದು ಗುಟ್ಕಾ ಕಂಪನಿ. ಅಲ್ಲಿ ಚಾಲಿ ಅಡಿಕೆ ಗುಟ್ಕಾ, ಕೆಂಪಡಿಕೆ ಗುಟ್ಕಾ, ಗೋಟಡಿಕೆ ಗುಟ್ಕಾ, ಪೆಯಿಂಟೆಡ್ ಅಡಕೆ ಗುಟ್ಕಾ…. ಅಂತೆಲ್ಲ ವಿವಿಧ ಜಾತಿಗಳಿಲ್ಲ!!” ಎಂದು.

ಈ ಮಾತು ನೆನಪಾದಾಗ ಮೂಡುವ ಕಟ್ಟ ಕಡೆಯ ಪ್ರಶ್ನೆ *ಅಡಿಕೆಗೆ ಪೆಯಿಂಟ್ ಯಾಕೆ ಮಾಡ್ತಾರೆ ಎಂದು. ಎಲ್ಲವುದೂ ಒಂದೇ ಜಾತ್ಯತೀತ ಗುಟ್ಕಾ ತಯಾರಿಕಾ ಡ್ರಮ್‌ಗೆ ಹೋಗುವುದಾದರೆ…. ಬೇಯಿಸಿದ್ದು, ಹಸ, ಚಾಲಿ, ಪೆಯಿಂಟೆಡ್ ಎಂಬ ಭೇದವೇಕೆ?

ತಾಂಬೂಲ ಮೆಲ್ಲುವಾಗ ಅಥವಾ ಗುಟ್ಕಾ, ವಿಮಲ್, ಕ್ರೇನ್, ಮಧು, ಮಸಾಲೆ ಅಡಿಕೆ ತಿನ್ನುವಾಗ, ನಿಮ್ಮ ತಲೆಯಲ್ಲೂ ಬರುವ ಪೆಯಿಂಟೆಡ್ ಬಣ್ಣದ ಪ್ರಶ್ನೆಗಳನ್ನು ಶಿವಮೊಗ್ಗ APMC ಗೆ ನೇರವಾಗಿ ಕಳಿಸಬಹುದು!

ಇದನ್ನೂ ಓದಿ: Areca Nut Imports: ಅಡಿಕೆ ಬೆಳೆಗಾರರಿಗೆ ಆಮದು ಭೂತ ಸಂಕಷ್ಟ, ಭೂತಾನ್‌ನಿಂದ ಆಮದಿಗೆ ಕೇಂದ್ರ ಸರ್ಕಾರ ಅನುಮತಿ