ಅಭಿಮತ: ಅರವಿಂದ ಸಿಗದಾಳ್, ಮೇಲುಕೊಪ್ಪ
ಮೂರು ವರ್ಷಗಳ ಹಿಂದೆ ಎಲೆ ಚುಕ್ಕಿ ರೋಗ ಬಂದು, ಹರಡಿ ಗಾಬರಿ ಪಡಿಸುವ ಕಾಲದಲ್ಲಿ ತೋಟಗಾರಿಕೆ ಇಲಾಖೆಯಿಂದ ಹೆಕ್ಸಾಕೊನಾಸೋಲ್‌ನ್ನು ಉಚಿತವಾಗಿ ಕೊಡಲಾಯಿತು. ಅದನ್ನು ಕೊಟ್ಟು, ಔಷಧಿ ಸ್ಪ್ರೇ ಮಾಡುವ ಕೊನೆಗಾರರು ತೋಟಕ್ಕೆ ಬರುವುದರೊಳಗೆ ಬಂದ ಕೇಂದ್ರ ತಜ್ಞರ ಸಮಿತಿ “ಎಲೆ ಚುಕ್ಕಿ ರೋಗ ತುಂಬ ಸೀವಿಯರ್ ಇದ್ರೆ ಹೆಕ್ಸಾಕೊನಾಸೋಲ್ ಸ್ಪ್ರೇ ಮಾಡಿ, ಎಲೆ ಚುಕ್ಕಿ ರೋಗ ಮೈಲ್ಡ್ ಆಗಿದ್ರೆ ಬೋರ್ಡೋ ದ್ರಾವಣ ಸಾಕು, ಇನ್ನೂ ತುಂಬ ಸೀವಿಯರ್ ಇದ್ರೆ ಪ್ರಾಪಿಕೊನಾಸೋಲ್, ಟ್ಯುಬಿಕೊನಾಸೋಲ್ ಬೇಕಾಗುತ್ತೆ ಅಂದಿದ್ದರು. ಸರ್ಕಾರ ಉಚಿತವಾಗಿ ಎಲ್ಲ ರೈತರಿಗೆ ಕೊಟ್ಟಿದ್ದು ಹೆಕ್ಸಾಕೊನಾಸೋಲ್ ಮಾತ್ರ. ಅಡಿಕೆ ಎಲೆ ಚುಕ್ಕಿ ರೋಗದ (Arecanut Leaf Spot Disease) ಸೀವಿಯಾರಿಟಿ ಉಚಿತ ಔಷಧಿ ಹಂಚಿಕೆಗೆ ಗಮನಿಸುವ ವಿಷಯ ಆಗಲೇ ಇಲ್ಲ.
ಬಹುತೇಕ ರೈತರು, ತೋಟಗಾರಿಕೆಯವರು ಉಚಿತವಾಗಿ ಕೊಟ್ಟಿದ್ದನ್ನು ತಂದಿಟ್ಟುಕೊಂಡಿದ್ದ ಹೆಕ್ಸಾಕೊನಾಸೋಲ್ ಬದಲಿಗೆ, ನಂತರ ಬೋರ್ಡೋ ದ್ರಾವಣವನ್ನೇ ಸ್ಪ್ರೇ ಮಾಡಿದ್ರು.
ಈ ಸುದ್ದಿಯನ್ನೂ ಓದಿ | Areca nut: ಕಂಫರ್ಟ್ ಜೋನ್‌ನಲ್ಲಿ ಬಯಲು ಸೀಮೆ ಅಡಿಕೆ ಬೆಳೆಗಾರರು! ಅವರಿಗೆ ಹೋರಾಟ ಬೇಡವೆ?
ಅದರ ಮುಂದಿನ ವರ್ಷ ಅಂದರೆ 2023 ರಲ್ಲಿ ತೋಟಗಾರಿಕಾ ಅಧಿಕಾರಿಗಳು ಭಾಗವಹಿಸಿದ ಸಭೆಗಳಲ್ಲೇ ಅಡಿಕೆ ಬೆಳೆಗಾರರು ಸ್ಪಷ್ಟವಾಗಿ “ಎಲೆ ಚುಕ್ಕಿ ರೋಗದ 300 ರೂಪಾಯಿ ಔಷಧಿಯನ್ನು ಉಚಿತವಾಗಿ ಕೊಡುವುದು ಬೇಡ. ಬದಲಿಗೆ ಔಷಧಿ ಸ್ಪ್ರೇ ಮಾಡಲು ಸಹಾಯ ಧನವನ್ನೇ ಕೊಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ವಿನಂತಿಸಲಾಯಿತು.
ಆದರೆ, ಅದರ ಹಿಂದೆ ಇರುವ ಕೋಟಿ ಕೋಟಿ ಮೌಲ್ಯದ ಹಣದ ಲಾಬಿಯೇ ಕೆಲಸ ಮಾಡಿತೇ ವಿನಃ, ರೈತರ ಆಯ್ಕೆಯ ಔಷಧಿಯನ್ನು ಹೊಡೆಯುವ ಅವಕಾಶವನ್ನೂ ಕಿತ್ತುಕೊಂಡು, ತೋಟಗಾರಿಕೆ ಇಲಾಖೆಯ ಮೂಲಕ ಉಚಿತವಾಗಿ ಕೊಡುವ 300 ರುಪಾಯಿ ಅವೈಜ್ಞಾನಿಕ ಅಸಂಬದ್ದ ಯೋಜನೆ ನಿಲ್ಲಲೇ ಇಲ್ಲ.
2023ರಲ್ಲಿ ಹೆಕ್ಸಾಕೊನಾಸೋಲ್ ಬದಲಿಗೆ, ಪ್ರಾಪಿಕೊನಿಸೋಲ್ ಕೊಡಲಾಯಿತು. ಆಗಲೂ ಅಡಿಕೆ ಎಲೆ ಚುಕ್ಕಿ ರೋಗದ ಸೀವಿಯಾರಿಟಿ ವಿಚಾರ, ಉಚಿತ ಔಷಧಿ ಹಂಚಿಕೆಗೆ ಗಮನಿಸುವ ವಿಷಯ ಆಗಲೇ ಇಲ್ಲ.
ಅನೇಕ ರೈತರೇ ಅನುಭವದಿಂದ ಕಂಡುಕೊಂಡ ಸತ್ಯ ಅಂದರೆ: ಹೆಕ್ಸಾಕೊನಾಸೋಲ್, ಪ್ರಾಪಿಕೊನಾಸೋಲ್ ಸ್ಪ್ರೇ ಮಾಡಿದ ತೋಟಕ್ಕಿಂತ ಬೋರ್ಡೋ ದ್ರಾವಣ ಸ್ಪ್ರೇ ಮಾಡಿದ ತೋಟವೇ ಸ್ವಲ್ಪ ಆರೋಗ್ಯ ಸುಧಾರಿಸಿಕೊಂಡಿತ್ತು ಎಂದೂ ಈಗಲೂ ಹೇಳುವವರಿದ್ದಾರೆ.
ಇಷ್ಟಾದರೂ, ಈಗ ಮತ್ತೊಮ್ಮೆ ಉಚಿತ 300 ರುಪಾಯಿ ಔಷಧಿ ಕೊಡುವ ಬೃಹತ್ ಯೋಜನೆ ಜಾರಿಗೆ ಬರ್ತಾ ಇದೆ!
ಈ ಉಚಿತ 300 ರೂಪಾಯಿ ಔಷಧಿ ಡ್ರಾಮಾದಲ್ಲಿ ಯಾರ‍್ಯಾರಿಗೆ ಎಷ್ಟೆಷ್ಟು ಪರ್ಸಂಟೇಜ್ ಹಂಚಿಕೆ ಆಗುತ್ತೋ ಗೊತ್ತಿಲ್ಲ. 300 ರೂಪಾಯಿಯ ಎರಡು ಬಾಟಲಿಗೆ ಟ್ರಾನ್ಸ್‌ಪೋರ್ಟ್ ಖರ್ಚು, ಅದನ್ನು ವಿತರಣೆ ಮಾಡಲು ತೋಟಗಾರಿಕಾ ಇಲಾಖೆಯಲ್ಲಿನ ಮ್ಯಾನ್ ಪವರ್ ಸಮಯ ನಷ್ಟ, ಅವರ ಸಂಬಳದ ಖರ್ಚು, ಅದರ ದಾಖಲೆಗಳನ್ನು ಮೆಯಿಂಟೈನ್ ಮಾಡಲು ರಿಜಿಸ್ಟರ್ ಬುಕ್ಕಿನ ಖರ್ಚು, ಉಚಿತ ಪಡೆಯಲು ಬರುವ ರೈತರು ಮಾಡಿದ ಬಸ್ ದರದ ಖರ್ಚು, ಆಧಾರ ಜೆರಾಕ್ಸ್ ಖರ್ಚು, ಪಹಣಿ ಪ್ರಿಂಟೌಟ್ ಖರ್ಚು…….. 300 ರುಪಾಯಿ ಉಚಿತ ಔಷಧಿ ಹಂಚಲು ಸರ್ಕಾರಕ್ಕೂ ಖರ್ಚು, ಅದನ್ನು ಪಡೆಯಲು ರೈತರಿಗೂ ಹಣ ಮತ್ತು ಸಮಯದ ಖರ್ಚು.
ಇಂತಹ ಅಸಂಬದ್ದದ ಬದಲಿಗೆ ಸರ್ಕಾರ ಸುಮ್ಮನಿರುವುದೇ ಒಳ್ಳೆಯದು!
ಕೃಷಿಯ ಬಗ್ಗೆ ಕಾಳಜಿ ಇದ್ದರೆ, ರೈತರ ಹಿತವನ್ನೇ ಬಯಸುವುದಾದರೆ, ಆರ್ಥಿಕವಾಗಿಯೇ ನೇರವಾಗಿ ರೈತರಿಗೆ ಧನ ಸಹಾಯ ಮಾಡಲಿ. ಉಚಿತ, ಸಬ್ಸಿಡಿ ಎನ್ನುತ್ತ, ರೈತರ ಹೆಸರಿನಲ್ಲಿ ಮಧ್ಯದಲ್ಲಿ ಯಾರೋ ಔಷಧಿಯನ್ನು, ಔಷಧಿಯ ಹಣವನ್ನು ತಿಂದು, ಕುಡಿದು, ತೇಗುವುದು ಬೇಡ.
ಅಧಿಕಾರದಲ್ಲಿರುವವರು ಚಿಂತನೆ ಮಾಡುವಾಗ ಸ್ವಲ್ಪವಾದರೂ ರೈತರ ಪರ ಚಿಂತನೆ ಮಾಡಲಿ.
ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನ ವಿದ್ಯಾರ್ಥಿಗಳಿಗೆ ‘ನಾಸಾ’ ಆಶೋತ್ತರಗಳ ಪರಿಚಯ