Saturday, 21st September 2024

MB Patil: ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಅಗತ್ಯ ತರಬೇತಿ ವ್ಯವಸ್ಥೆ: ಎಂ.ಬಿ. ಪಾಟೀಲ್‌

MB Patil

ಬೆಂಗಳೂರು: ಪರಿಶಿಷ್ಟ ಜಾತಿ/ವರ್ಗಗಳ ಉದ್ಯಮಿಗಳಿಗೆ (Entrepreneurs) ಸೂಕ್ತ ತರಬೇತಿಯ ಅಗತ್ಯವಿದೆ. ಈ ಸಂಬಂಧ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರೊಂದಿಗೆ ಚರ್ಚಿಸಿ ಈ ವ್ಯವಸ್ಥೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಹೇಳಿದ್ದಾರೆ. ಕರ್ನಾಟಕ ದಲಿತ ಉದ್ಯಮಿಗಳ ಸಂಘಟನೆ (ಕೆಇಡಿಎ) ಏರ್ಪಡಿಸಿದ್ದ ಬೃಹತ್ ಪ.ಜಾತಿ/ವರ್ಗಗಳ ಎಂಎಸ್ಎಂಇ ಸಮಾವೇಶದಲ್ಲಿ ಅವರು ಮಾತನಾಡಿದರು.

ಸರಿಯಾದ ರೀತಿಯಲ್ಲಿ ತರಬೇತಿ ನೀಡುವುದರಿಂದ ಪರಿಶಿಷ್ಟ ಉದ್ಯಮಿಗಳನ್ನು ಇನ್ನೂ ಹೆಚ್ಚು ಮಾಡಬಹುದು ಎಂದು ತಿಳಿಸಿದ ಅವರು, ಉದ್ಯಮ ಕ್ಷೇತ್ರದಲ್ಲಿ ಪ.ಜಾತಿ/ವರ್ಗಗಳ ಉದ್ಯಮಶೀಲರ ಬೆಳವಣಿಗೆಗೆ ಸರ್ಕಾರ ಒತ್ತಾಸೆಯಾಗಿದೆ. ಆರ್ಥಿಕ, ಮೂಲಸೌಕರ್ಯ, ಸ್ಟಾರ್ಟಪ್ ಹಾಗೂ ಎಂಎಸ್ಎಂಇ ಗಳಿಗೆ ನಿಯಂತ್ರಕ ವ್ಯವಸ್ಥೆ ಇತ್ಯಾದಿ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೆಐಎಡಿಬಿ, ಕೆಎಸ್ಎಸ್ಐಡಿಸಿ, ಕೆಎಸ್ಎಫ್‌ಸಿ, ಕೆಯುಎಂ, ಜಿಲ್ಲಾ ಕೈಗಾರಿಕಾ ಕೇಂದ್ರಗಳು ಉದ್ಯಮಿಗಳ ಅಹವಾಲುಗಳನ್ನು ನಿಯಮಿತವಾಗಿ ಆಲಿಸುತ್ತಿವೆ ಎಂದು ವಿವರಿಸಿದರು.

ಈ ಸುದ್ದಿಯನ್ನೂ ಓದಿ | Nipah Virus: ನಿಫಾ ಸೋಂಕು ಆತಂಕ, ಬೆಂಗಳೂರಿನಲ್ಲಿ 41 ಜನರಿಗೆ ಹೋಮ್‌ ಕ್ವಾರಂಟೈನ್

ಕೆಐಎಡಿಬಿ ಪ್ಲಾಟ್ ಹಾಗೂ ಕೆಎಸ್‌ಎಸ್ಐಡಿಸಿ ಷೆಡ್‌ಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ/ವರ್ಗದ ಉದ್ಯಮಿಗಳಿಗೆ ಶೇ. 24.1 ರಷ್ಟು ಮೀಸಲು, ಭೂಮಿ ಮಂಜೂರಾತಿಯಲ್ಲಿ ಶೇ. 75 ರಷ್ಟು ಸಬ್ಸಿಡಿ, ಕೆಎಸ್ ಎಫ್‌ಸಿಯಿಂದ ರೂ. 10 ಕೋಟಿಯವರೆಗೆ ಶೇ. 4ರಷ್ಟು ಬಡ್ಡಿ ದರದಲ್ಲಿ ಸಾಲ ನೆರವು, ಮಾರ್ಜಿನ್ ಮನಿಯ ಶೇ. 50 ರಷ್ಟು (ಗರಿಷ್ಠ ರೂ. 75 ಲಕ್ಷ) ಬೀಜಧನದ ನೆರವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ ಎಂದರು.

ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಮಾಡಿರುವ ನಿವೇಶನ ಹಂಚಿಕೆಯಡಿ ಕೆಐಎಡಿಬಿಗೆ ಸರ್ಕಾರದಿಂದ 900 ಕೋಟಿ ರೂಪಾಯಿ ಬಾಕಿ ಇದೆ. ಹಾಗೆಂದು, ನಾವು ನೆರವನ್ನು ನಿಲ್ಲಿಸಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರರಾಗಿರುವ ವೆಂಕಟಯ್ಯನವರಂಥವರು ಇತ್ತ ಗಮನ ಹರಿಸಿ, ಒತ್ತಡ ಹೇರಿದರೆ ಕೈಗಾರಿಕಾ ಇಲಾಖೆಗೂ ಒಳ್ಳೆಯದಾಗುತ್ತದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ.ಜಾತಿ ಉದ್ಯಮಿಗಳಿಗೆ ಶೇ. 75ರಷ್ಟು ಸಬ್ಸಿಡಿ ಬಾಬ್ತಿಗೆ ರೂ. 245.50 ಕೋಟಿ, ಹಾಗೆಯೇ ಪ.ವರ್ಗದವರಿಗೆ ರೂ. 62.24 ಕೋಟಿ ಬಿಡುಗಡೆಗೊಳಿಸಿದೆ. ಜತೆಗೆ, ಕೈಗಾರಿಕಾ ಪ್ರದೇಶಗಳ ಸಿಎ ಪ್ಲಾಟ್‌ಗಳಲ್ಲಿ ಶೇ. 24.1 ರಷ್ಟನ್ನು ಈ ಸಮುದಾಯಗಳಿಗಾಗಿ ಮೀಸಲಾತಿ ನಿಗದಿಗೊಳಿಸಿ, ಹಂಚಿಕೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಭೂಮಿ ಮಂಜೂರು

ಕಳೆದ 15 ತಿಂಗಳ ಅವಧಿಯಲ್ಲಿ ಸರ್ಕಾರವು ಪರಿಶಿಷ್ಟ ಜಾತಿಯ 121 ಉದ್ಯಮಿಗಳಿಗೆ 130 ಎಕರೆ ಹಾಗೂ ಪರಿಶಿಷ್ಟ ವರ್ಗದ 39 ಉದ್ಯಮಿಗಳಿಗೆ 42 ಎಕರೆ ಭೂಮಿ ಮಂಜೂರು ಮಾಡಿದೆ ಎಂದು ಇದೇ ವೇಳೆ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Celebrity Interview: ದುಬೈನಲ್ಲಿ ನಡೆದ ಬಾಡಿ ಬಿಲ್ಡಿಂಗ್‌ ಸ್ಪರ್ಧೆಯಲ್ಲಿ ಬಂಗಾರ ಗೆದ್ದ ಸೂಪರ್‌ ಮಾಡೆಲ್‌ ಜ್ಯೋತ್ಸ್ನಾ

ಈ ವೇಳೆ ಕೇಂದ್ರ ಸಚಿವೆ ಶೋಭಾ‌‌ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ, ಕೋಲಾರ ಸಂಸದ ಮಲ್ಲೇಶ ಬಾಬು, ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ, ಸಿ.ಜಿ. ಶ್ರೀನಿವಾಸನ್ ಹಾಗೂ ಮತ್ತಿತರರು ಇದ್ದರು.