Thursday, 12th December 2024

ಶಿವಲಿಂಗೇಗೌಡರ ಹಳ್ಳಿಭಾಷೆಯ ಸೊಗಡು

ಗ್ರಾಮ್ಯ ಭಾಷೆಯಲ್ಲೇ ಸಮಸ್ಯೆಗಳನ್ನು ಬಿಚ್ಚಿಡುವ ಗೌಡರು ಸರ್ವ ಪಕ್ಷದ ಸದಸ್ಯರಿಂದಲೂ ಮೆಚ್ಚುಗೆ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು

ಶಿವಲಿಂಗೇಗೌಡ ಅರಸೀಕೆರೆ ಜೆಡಿಎಸ್ ಶಾಸಕ
ಮೂರನೇ ಬಾರಿ ಅರಸೀಕೆರೆ ಕ್ಷೇತ್ರದಿಂದ ಆಯ್ಕೆ
ಗ್ರಾಮ್ಯ ಭಾಷೆಯೇ ಗೌಡರ ಮಾತಿನ ಗಮ್ಮತ್ತು
ನಗುತ್ತಲೇ ಗಂಭೀರ ಸಮಸ್ಯೆಯಡೆಗೆ ಗಮನ

ಇತ್ತೀಚೆಗೆ ಅರಸೀಕೆರೆ ಶಾಸಕ ಕೆ.ಶಿವಲಿಂಗೇಗೌಡ ಅವರು ಸದನದಲ್ಲಿ ಮಾಡುವ ಚರ್ಚೆ ಭಾರಿ ಗಮನ ಸೆಳೆಯುತ್ತಿದ್ದು, ಗ್ರಾಮ್ಯ ಭಾಷೆಯಲ್ಲಿ ಅವರು ಗಂಭೀರ ಚರ್ಚೆಯನ್ನು ರಸವತ್ತಾಗಿ ವರ್ಣಿಸುವುದಕ್ಕೆ ಸ್ಪೀಕರ್ ಸೇರಿ ಸರ್ವಸದಸ್ಯರು ಫಿದಾ ಆಗಿದ್ದಾರೆ.

ಗೌಡ್ರು ಮಾತಿಗೆ ನಿಂತರೆಂದರೆ ಮುಗೀತು, ಇಡೀ ಸದನ ನಗೆಗಡಲಲ್ಲಿ ತೇಲುವುದು ಖಚಿತ ಎನ್ನಲಾಗುತ್ತದೆ. ಜತೆಗೆ ಅಷ್ಟೇ
ತೂಕವಾದ ಪ್ರಶ್ನೆಗಳನ್ನು ಎತ್ತುವ ಶಿವಲಿಂಗೇಗೌಡರ ಚರ್ಚಾ ಶೈಲಿಯೂ ಸದನದ ಗಮನ ಸೆಳೆದಿದೆ. ಆಗಾಗ, ಅವರ ಮಾತಿ
ನಿಂದ ನಗೆಗಡಲಲ್ಲಿ ತೇಲುವ ಸದನ ಕೆಲವೊಮ್ಮೆ ಗಂಭೀರ ಚರ್ಚೆಗಳನ್ನು ಅಷ್ಟೇ ಆಸ್ಥೆಯಿಂದ ಆಲಿಸುತ್ತದೆ. ತೆಂಗು ಬೆಳೆಗಾರರ
ಸಮಸ್ಯೆ ಬಗ್ಗೆ, ಎಸ್‌ಸಿ, ಎಸ್‌ಟಿ ಅನುದಾನ ಬಗ್ಗೆ ಜಿಎಸ್‌ಟಿ ಅನುದಾನದ ಬಗ್ಗೆ ಅವರು ಎತ್ತುವ ಪ್ರಶ್ನೆಗಳು  ಮಂತ್ರಮಗ್ನರನ್ನಾಗಿಸುತ್ತಿವೆ.

ತಮ್ಮದೇ ಶೈಲಿಯಲ್ಲಿ: ಮಂಗಳವಾರ ಕೂಡ ಅಂತಹದ್ದೆ ಪ್ರಶ್ನೆಗಳೊಂದಿಗೆ ಸದನದಲ್ಲಿ ಗಂಭೀರ ಮತ್ತು ಹಾಸ್ಯಮಯ ಸನ್ನಿವೇಶ ಸೃಷ್ಟಿಸಿದ ಗೌಡರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಹಬ್ಬಾಸ್ ಗಿರಿಯನ್ನು ಪಡೆದುಕೊಂಡರು. ಅಲ್ಲಲ್ಲಿ ತಮ್ಮದೇ ಪಕ್ಷದ ಸದಸ್ಯರ ಕಾಲು ಎಳೆದರು. ಆಡಳಿತ ಪಕ್ಷದ ಶಾಸಕರ ಅಸಹಾಯಕತೆ ಯನ್ನು ಕುಟುಕಿದರು.

ಮಂತ್ರಿಗಳ ಉತ್ತರವನ್ನು ವ್ಯಂಗ್ಯ ಮಾಡಿದರು. ಊಟ ಮಾಡೋ ಟೈಮಿಗೆ ಮುಗಿಸ್ತೀನಿ ಎನ್ನುತ್ತಲೇ ಬೆಳಗಿನ ಇಡೀ ಚರ್ಚೆಯನ್ನು ತಮ್ಮದೇ ಶೈಲಿಯಲ್ಲಿ ಆವರಿಸಿಕೊಂಡರು. ಜಿಎಸ್‌ಟಿ ಕುರಿತು ಮಾತನಾಡುತ್ತಾ, ‘ನಮ್ಮಿಂದ ಎಲ್ಲಾನು ಕಿತ್ಕತ್ತಾರೆ, ಈಗ ನಮಗೆ ಅನುದಾನ ಕೊಡಕ್ಕೆ ಮಾತ್ರ ಇಲ್ಲ ಅಂತಾರೆ, ಅದುನ್ನ ಗಟ್ಟಿಯಾಗಿ ಕೇಳ್ನಿಲ್ಲ ಅಂದ್ರೆ ನಮಗೆ ಚಂಬೆ ಗತಿ. ಜಿಎಸ್‌ಟಿ ಅನುದಾನ ಇಲ್ದೇ ಇದ್ದರೆ ಅಭಿವೃದ್ಧಿ ಮಾಡದ್ ಹೆಂಗೆ? ಇದನ್ನು ಬಿಜೆಪಿ ಸಂಸದರು ಮತ್ತು ಸಿಎಂ, ರಾಜ್ಯಾಧ್ಯಕ್ಷ್ರು ಕೇಳಬೇಕು. ಆಗ ಮಾತ್ರ ನಮ್ಗೆ ನ್ಯಾಯ ಸಿಗಾಕೆ ಸಾಧ್ಯ’ ಎಂದು ಕುಟುಕಿದರು.

‘ಡಿಸಿಗಳು ಮಾತ್ರ ಗ್ರಾಮವಾಸ್ತವ್ಯ ಮಾಡ್ಬೇಕು ಅಂತ ನಮ್ ಅಶೋಕಣ್ಣ ಮಾಡವ್ನೆ. ಆದ್ರೆ, ಆ ಪುಣ್ಯಾತ್ಮುರು ನಾವ್ ಬತ್ತಿದ್ದೀವಿ ಅಂತಾನೂ ಹೇಳಕುಲ್ಲ, ನಮಗೂ ಒಂದ್ ಮಾತೇಳಿದ್ರೆ ನಾವು ಹೋಗಿ ಅವ್ರ ಜತೆಗ್ ಮಲೀಕತ್ತೀವಿ. ಇಲ್ಲ ಅಂದ್ರೆ, ಜನ ನಮ್ಮುನ್ನು
ಬಾಯಿಗ್ ಬಂದಂಗ್ ಬೈಯ್ತಾರೆ. ಡಿಸಿನೆ ಬಂದ್ ಮಲೀಗವ್ನೆ ನಮ್ ಎಮ್ಮೆಲ್ಲೆ ಎಲ್ಲಿಗೋಗವ್ನಲಾ ಅಂತ ಉಗೀತಾರೆ.

ಹೀಗಾಗಿ, ನೀವ್ ಮಾಡಿರೋ ಗ್ರಾಮ ವಾಸ್ತವ್ಯದ್ ರೂಲ್ಸಲ್ಲಿ ನಮ್ದು ಒಂದ್ ಹೆಸ್ರು ಸೇರಿಸ್ಬುಡಿ, ಆಗ ಎಲ್ಲ ಸರಿಹೋಯ್ತದೆ. ಬೇಕಿರೋದು ಹೋಗಿ ಮಲಿಕತ್ತಾರೆ, ಇಲ್ದಿದ್ದರು ಬ್ಯಾಡ’ ಅಂದು ಸದನವನ್ನು ನಗೆಗಡಲಲ್ಲಿ ತೇಲಿಸಿದರು. ನಾವ್ ಸರಿಯಿದ್ರೆ

ಯಾವ್ ಸಿಡಿ ಬರುತ್ತೆ? : ಮಲಗಿದ್ದಾಗ ಸಿಡಿ ಗಿಡಿ ಮಾಡ್ಬಿಟ್ರೆ ಏನ್ ಮಾಡ್ತೀರಿ ಗೌಡ್ರೆ ಅಂತ ಬಿಜೆಪಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ, ಅಷ್ಟೇ ಗಂಭೀರವಾಗಿ ಉತ್ತರ ನೀಡಿದ ಶಿವಲಿಂಗೇಗೌಡರು, ಸಿಡಿ ಗಿಡಿ ಮಾಡಕ್ಕೆ ನಮ್ ಕಚ್ಚೆ ಗಟ್ಟಿಯಾಗಿದ್ರೆ ಯಾವನ್ ಮಾಡ್ತಾನೆ ಗುರು, ನಾವು ಸರಿಯಿಲ್ಲ ಅಂದ್ರಷ್ಟೇ ಸಿಡಿ ಗಿಡಿಗಳಿಗೆಲ್ಲ ಹೆದ್ರುಬೇಕೂ, ನಾವ್ ಸರಿಯಿದ್ರೆ ನಮ್ಗೆ ಯಾವ್ ಸಿಡಿನೂ ಇಲ್ಲ ಬೀಡಿನೂ ಇಲ್ಲ. ಇವೆಲ್ಲ ಬಿಟ್ಕಾಕಿ ಕೆಲ್ಸ ಮಡ್ಬೇಕು. ನಮ್ಗೆ ವೋಟಾಕಿ ಗೆಲ್ಸಿರೋ ಜನ ನಮ್ ಮಕ್ಕುಗಿದಂಗೆ ಕೆಲ್ಸ ಮಾಡಿದ್ರೆ ಯಾವ್ ಭಯಾನೂ ಇರಾಕಿಲ್ಲ ಅಂದು ಗಂಭೀರ ಉತ್ತರವನ್ನು ತಮ್ಮದೇ ಶೈಲಿಯಲ್ಲಿ ಕೊಟ್ಟರು.

ಪಾಲಿಟಿಕ್ಸ್ ವಿಡಿಯೊ ವೈರಲ್
ಕಳೆದ ವಿಧಾನಸಭಾ ಅಧಿವೇಶನದ ವೇಳೆ ಶಾಸಕರ, ರಾಜಕಾರಣಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆಕ್ರೋಶದ ಬಗ್ಗೆ ರಸವತ್ತಾಗಿ ವರ್ಣಿಸಿದ್ದ ಶಿವಲಿಂಗೇಗೌಡರ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ‘ಜನ ನಮಗೆ
ಮಕ್ಕುಗೀತಾರೆ. ನಾವು ವೋಟ್ ಹಾಕಿ ಕಳಿಸಿರೋದು ನೀವು ಪಾರ್ಟಿಯಿಂದ ಪಾರ್ಟಿಗೆ ಹಾರ್ಕೊೊಂಡಿರಿ ಅಂತ ಅಲ್ಲ, ನಮ್ಮ ಸೇವೆ ಮಾಡಿ ಅಂತಾವ. ಅಂತಾದ್ರಲ್ಲಿ ನೀವು ಹಿಂಗೆ ಕಿತ್ತಾಡ್ಕಂಡು, ಬಾಂಬೆ, ಭವಾನಗ್ರ ಅಂತ ಇದ್ರೆ, ಗತಿ ಏನು ಅಂತ ಕೇಳ್ತಾವ್ರೆ. ಅವ್ರಿಗೆ ನಾವೇನ್ ಉತ್ರ ಹೇಳದು ಹೇಳಿ’ ಎಂದು ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗೌಡರ ಜನಪರ ಕಾಳಜಿಗೆ ಜನರು ಸೈ ಎಂದಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily