Thursday, 21st November 2024

Assault Case: ಬೈಕ್‌ಗೆ ಸೈಡ್‌ ಬಿಡಲಿಲ್ಲ ಎಂದು ಕರ್ತವ್ಯ ನಿರತ BMTC ಚಾಲಕನ ಮೇಲೆ ಹಲ್ಲೆ; 3 ತಿಂಗಳಲ್ಲಿ 9ನೇ ಪ್ರಕರಣ

Assault Case

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣವು ಮತ್ತೆ ಮುಂದುವರೆದಿದೆ. ಬೈಕ್‌ಗೆ ಸೈಡ್‌ ಬಿಡಲಿಲ್ಲ ಎಂಬ ಕಾರಣಕ್ಕೆ ಕರ್ತವ್ಯ ನಿರತ ಬಿಎಂಟಿಸಿ ಬಸ್‌ ಚಾಲಕ ಕುಶಾಲ್‌ ಕುಮಾರ್ (‌38) ಎಂಬುವವರ ಮೇಲೆ ಬೆಂಗಳೂರಿನ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಹಲ್ಲೆ ನಡೆದಿರುವ ಘಟನೆ ನ. 20ರಂದು ಜರುಗಿದೆ (Assault Case).

ಮೆಜೆಸ್ಟಿಕ್‌ನಿಂದ ಸಿ.ಕೆ. ಪಾಳ್ಯ ಕಡೆ ಹೊರಟಿದ್ದ ಬಿಎಂಟಿಸಿ ಬಸ್‌ ನಂಬರ್‌ KA-57 F-0835 (ಡಿಪೋ-34 ಜಂಬೂ ಸವಾರಿ ದಿಣ್ಣೆಗೆ ಸೇರಿದ ಬಸ್)‌ ಚಾಲಕನ ಮೇಲೆ ಹಲ್ಲೆ ನಡೆಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಕೆ.ಆರ್‌.ಸರ್ಕಲ್‌ನಿಂದ ನೃಪತುಂಗ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ ಸವಾರನಿಗೆ ಮುಂದೆ ಹೋಗಲು ಸೈಡ್‌ ಬಿಡಲಿಲ್ಲ ಎಂಬ ಕಾರಣಕ್ಕೆ ಏಕಾಏಕಿ ಬಸ್‌ ಚಾಲಕನ ಸೀಟ್‌ ಬಳಿಯ ಡೋರ್‌ನಿಂದ ಹತ್ತಿ ಗೂಂಡಾ ರೀತಿ ವರ್ತಿಸಿದಲ್ಲದೆ ಹಲ್ಲೆ ಮಾಡಿದ್ದಾನೆ. ಚಾಲಕ ಕುಶಾಲ್‌ ಕುಮಾರ್‌ ಅವರ ಕೊರಳಪಟ್ಟಿಗೆ ಕೈ ಹಾಕಿ ಜೋರಾಗಿ ಎಳೆದಿದ್ದಾನೆ. ಈ ವೇಳೆ ಪ್ರಶ್ನಿಸಲು ಮುಂದಾದ ನಿರ್ವಾಹಕ ಕೃಷ್ಣನ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ.

ಈ ಘಟನೆ ಸಂಬಂಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ಎಫ್‌ಐಆರ್‌ ನಲ್ಲಿ ಏನಿದೆ ?

ಹಲ್ಲೆಗೆ ಒಳಗಾದ ಬಸ್‌ ಚಾಲಕ ಕುಶಾಲ್‌ ಕುಮಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ದೂರುದಾರರಾದ ಕುಶಾಲ್‌ ಕುಮಾರ್‌ ಬಿಎಂಟಿಸಿ ಬಸ್‌ ಚಾಲಕರಾಗಿದ್ದು, ನ. 20ರ ಸಂಜೆ 5:40 ಗಂಟೆಗೆ ಕೆಬಿಎಸ್‌,(ಮೆಜೆಸ್ಟಿಕ್‌) ಬಸ್‌ ನಿಲ್ದಾಣದಿಂದ ಬಿಎಂಟಿಸಿ ಬಸ್‌ ನಂ. KA-57F-835 ಅನ್ನು ಸಿ.ಕೆ ಪಾಳ್ಯ ಕಡೆಗೆ ಚಾಲನೆ ಮಾಡಿಕೊಂಡು ಕೆ.ಆರ್‌. ಸರ್ಕಲ್‌ ನಿಂದ ನೃಪತುಂಗ ರಸ್ತೆಯಲ್ಲಿ ಹೋಗುತ್ತಿರುವಾಗ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಬಸ್‌ ನತ್ತ ಕೈ ಮಾಡಿ ತೋರಿಸಿ ಜೋರು ದನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅಷ್ಟು ಮಾತ್ರವಲ್ಲದೆ ಕಿಡಿಗೇಡಿಯು ಚಾಲಕ ಕೂರುವ ಸೀಟ್‌ ನ ಬಳಿ ಇರುವ ಡೋರ್‌ ಮುಖಾಂತರ ಬಸ್‌ ಹತ್ತಿ ಕೊರಳಪಟ್ಟಿ ಹಿಡಿದು ಬಾಯಿಗೆ ಬಂದ ಪದಗಳಿಂದ ನಿಂದಿಸಿದ್ದಾನೆ. ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಸಮವಸ್ತ್ರವನ್ನು ಸಾರ್ವಜನಿಕರ ಮುಂದೆ ಹಿಡಿದು ಎಳೆದಾಡಿದ್ದಾನೆ. ರೌಡಿಯಂತೆ ವರ್ತನೆ ತೋರಿ ಎಡ ಕಿವಿ ಮತ್ತು ಭುಜದ ಮೇಲೆ ಕೈಗಳಿಂದ ಹೊಡೆದು ಬಸ್‌ ಅನ್ನು ಚಾಲನೆ ಮಾಡದಂತೆ ತಡೆದಿದ್ದಾನೆ. ಪ್ರಶ್ನಿಸಲು ಹೋದ ಬಸ್‌ ನಿರ್ವಾಹಕ ಕೃಷ್ಣ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದು, ಚಾಲಕ ಕುಶಾಲ್‌ ಕುಮಾರ್‌ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಸ್ಥಳದಲ್ಲಿದ್ದ ಕಾರಿನ ಚಾಲಕ ಕೂಡ ಇದಕ್ಕೆ ಕುಮ್ಮಕ್ಕು ನೀಡಿದ್ದಾನೆ. ಕೃತ್ಯ ಎಸಗಿರುವ ಕಿಡಿಗೇಡಿಯ ಹೆಸರು ಮೊಹಮ್ಮದ್‌ ಫಜಲ್‌ ಎಂದು ತಿಳಿದಿದ್ದು,ಅವನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಹಲ್ಲೆಗೆ ಒಳಗಾದ ಬಿಎಂಟಿಸಿ ಬಸ್‌ ಚಾಲಕ ಕುಶಾಲ್‌ ಕುಮಾರ್‌ ಉಲ್ಲೇಖಿಸಿದ್ದಾರೆ.

3 ತಿಂಗಳಲ್ಲಿ 9 ಪ್ರಕರಣಗಳು

ಕಳೆದ ಮೂರು ತಿಂಗಳಿಂದ ಈಚೆಗೆ ಬಿಎಂಟಿಸಿ ಸಿಬ್ಬಂದಿ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಸೆಪ್ಟೆಂಬರ್‌ನಿಂದ ಈ ತನಕ 9 ಹಲ್ಲೆಗಳು ನಡೆದಿವೆ. ಕಳೆದ ಇಪ್ಪತ್ತು ದಿನಗಳಲ್ಲೇ ನಾಲ್ಕು ಹಲ್ಲೆಗಳು ನಡೆದಿರುವ ಕುರಿತು ಪ್ರಕರಣ ದಾಖಲಾಗಿದೆ. ಕರ್ತವ್ಯ ನಿರತ ಬಸ್‌ ಚಾಲಕರ ಮೇಲೆ ಏಕಾಏಕಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಅವರು ಕೆಲಸ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಸಿಬ್ಬಂದಿಯಲ್ಲಿ ಮೂಡಿದೆ.

ಚಾಲಕರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕುವ ಕಿಡಿಗೇಡಿಗಳ ವಿರುದ್ಧ ಸಾರಿಗೆ ಸಚಿವರು ಮತ್ತು ಸಾರಿಗೆ ಆಡಳಿತ ಮಂಡಳಿ ಕಾನೂನು ಕ್ರಮ ಜರುಗಿಸಬೇಕು. ಅವರಿಗೆ ತಕ್ಕ ಶಿಕ್ಷೆ ನೀಡಬೇಕು. ಇಂಥವರಿಂದ ಚಾಲಕರ ಜೀವಕ್ಕೆ ತೊಂದರೆಯಾಗುತ್ತದೆ. ಅವರಿಗೆ ಸುರಕ್ಷತೆ ಇಲ್ಲದಂತಾಗುತ್ತದೆ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಎಂಟಿಸಿ ಸಾರಿಗೆ ನೌಕರರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Assault case: ಬೆಂಗಳೂರಲ್ಲಿ ನಿಲ್ಲದ ಬಿಎಂಟಿಸಿ ಬಸ್ ಸಿಬ್ಬಂದಿ ಮೇಲೆ ಹಲ್ಲೆ; ಚಾಲಕನನ್ನು ಥಳಿಸಿದ ಬೈಕ್‌ ಸವಾರ