Thursday, 12th December 2024

ಪೊಲೀಸರ ಹೆಸರಲ್ಲಿ ಸ್ವಾಮೀಜಿಗೆ 1 ಕೋಟಿ ರೂ. ವಂಚಿಸಿದ ಜೆಡಿಎಸ್‌ ಮುಖಂಡ ಅರೆಸ್ಟ್‌

Bagalkot News

ಬಾಗಲಕೋಟೆ: ಜೆಡಿಎಸ್‌ ಮುಖಂಡನೊಬ್ಬ ಪೊಲೀಸರ ಹೆಸರಿನಲ್ಲಿ ಸ್ವಾಮೀಜಿಯೊಬ್ಬರಿಗೆ ಕರೆ ಮಾಡಿ 1 ಕೋಟಿ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು(Bagalkot News), ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಾಗಲಕೋಟೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ (JDS)ನಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಸೋತಿದ್ದ ಪ್ರಕಾಶ್ ಮುಧೋಳ (Prakash Mudhol) ಬಂಧಿತ.

ಬಾಗಲಕೋಟೆ ತಾಲೂಕಿನ ತುಳಸಿಗೇರಿ ಬಳಿ ಇರುವ ರಾಮಾರೂಢ ಮಠದ (Ramarudha Mutt) ಪರಮರಾಮಾರೂಢ ಸ್ವಾಮೀಜಿ (Paramramarudh Swamiji) ಅವರಿಗೆ ಪ್ರಕಾಶ್‌ 1 ಕೋಟಿ ರೂ. ವಂಚಿಸಿದ್ದ.

ಪ್ರಕರಣದ ಹಿನ್ನೆಲೆ

ಆರೋಪಿ ಪ್ರಕಾಶ ಮುಧೋಳ ಸೆಪ್ಟೆಂಬರ್​ 15ರಂದು ಪರಮರಾಮಾರೂಢ ಸ್ವಾಮೀಜಿ ಅವರಿಗೆ ಕರೆ ಮಾಡಿ, ತಾನು ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ “ನಿಮ್ಮ ವಿರುದ್ಧ ಗೃಹ ಸಚಿವ ಕಚೇರಿಯಿಂದ ಬೆಂಗಳೂರಿನ ನಮ್ಮ ಕಚೇರಿವರೆಗೆ ಸಾಕಷ್ಟು ದೂರು ಬಂದಿವೆ. ಅವುಗಳನ್ನು ವಿಚಾರಣೆ ಮಾಡಬೇಕು. ಏನು ಈ ರೀತಿ ಮಾಡಿದ್ದೀಯಾ?ʼʼ ಎಂದು ಏಕವಚನದಲ್ಲಿ ನಿಂದಿಸಿದ್ದ. ಅಲ್ಲದೆ ಜೀವನ ಪರ್ಯಂತ ಜೈಲು ಗತಿ ಕಾಣಸ್ತೀವಿ ಹಾಗೂ ಮಠದ ಮಾನ ಮರ್ಯಾದೆ ಹರಾಜು ಮಾಡ್ತೀವೆ ಎಂದೂ ಬೆದರಿಕೆ ಹಾಕಿದ್ದ.

ಜತೆಗೆ ಕೇಸ್‌ಗಳನ್ನು ಮುಚ್ಚಿ ಹಾಕಲು ಎಡಿಜಿಪಿ ಸಾಹೇಬರಿಗೆ ಹಣ ಕೊಡಬೇಕು ಎಂದ ಆರೋಪಿ 1 ಕೋಟಿ ರೂ.ಗೆ ಬೇಡಿಗೆ ಇಟ್ಟಿದ್ದ. ಬಳಿಕ ಮತ್ತೊಂದು ನಂಬರ್​ನಿಂದ ಸ್ವಾಮೀಜಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಇದರಿಂದ ಗಾಬರಿಗೊಂಡ ಸ್ವಾಮೀಜಿ ಅವರು ಹಣದ ವ್ಯವಸ್ಥೆ ಮಾಡಿದ್ದರು. ಬಳಿಕ ಪ್ರಕಾಶ್‌ನ ಸೂಚನೆ ಮೇರೆಗೆ ಸೆ. 16ರಂದು ಬೆಂಗಳೂರು ವಿಧಾನಸೌಧ ಹತ್ತಿರ ಸ್ವಾಮೀಜಿ ಕಡೆಯಿಂದ ಬಂದಿದ್ದ ಶಿವಕುಮಾರ್‌ ಎನ್ನುವವರು 61 ಲಕ್ಷ ರೂ. ನಗದು ಹಾಗೂ 2 ಖಾಲಿ ಚೆಕ್​ ನೀಡಿದ್ದರು. ಇದೇ ವೇಳೆ ಆರೋಪಿ ಕೆಲ ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದ. ಉಳಿದ 39 ಲಕ್ಷ ರೂ. ಹಣವನ್ನು ಶಿವಕುಮಾರ್​ ಸೆ. 20ರ ಮಧ್ಯರಾತ್ರಿ ಹುಬ್ಬಳ್ಳಿಯ ಈದ್ಗಾ ಮೈದಾನದ ಹತ್ತಿರ ನೀಡಿದ್ದರು. ಹೀಗೆ ಒಟ್ಟು 1 ಕೋಟಿ ರೂ. ಹನವನ್ನು ಆರೋಪಿ ಪ್ರಕಾಶ್​​ಗೆ ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇಷ್ಟಕ್ಕೇ ಸುಮ್ಮನಾಗದ ಆರೋಪಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಪರಮರಾಮಾರೂಢ ಸ್ವಾಮೀಜಿ ಬಾಗಲಕೋಟೆ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಎಫ್​ಐಆರ್ ದಾಖಲಿಸಿಕೊಂಡ ಸಿಇಎನ್​ ಠಾಣೆ ಪೊಲೀಸರು ಇದೀಗ ಪ್ರಕಾಶ್‌ನನ್ನು ಬಂಧಿಸಿದ್ದಾರೆ. ಜತೆಗೆ ನಗದನ್ನು ವಶಪಡಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ ಕುಮಾರಸ್ವಾಮಿ ಬಾಗಲಕೋಟೆಗೆ ಭೇಟಿ ನೀಡಿದ್ದ ವೇಳೆ ಪ್ರಕಾಶ್​ ಮುಧೋಳ ಅವರ ಜತೆ ಕಾಣಿಸಿಕೊಂಡಿದ್ದ. ಪ್ರಕಾಶ್ ಈ ಹಿಂದೆಯೂ ಅನೇಕರಿಗೆ ವಿವಿಧ ರೀತಿಯಾಗಿ ವಂಚಿಸಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Muda Case: ಸಚಿವ ಜಮೀರ್‌ ಅಹ್ಮದ್‌ಗೂ ಸಂಕಷ್ಟ; ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ