Sunday, 15th December 2024

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಸಂಪೂರ್ಣ ಜಲಾವೃತ

ರಾಮನಗರ: ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯ ರಾಮನಗರ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಾರಾಂತ್ಯದ ಹಿನ್ನೆಲೆಯಲ್ಲಿ ಸಾಕಷ್ಟು ವಾಹನಗಳು ಈ ಮಾರ್ಗವಾಗಿ ಚಲಿಸುತ್ತಿದ್ದು, ಜಲಾವೃತ ಗೊಂಡ ರಸ್ತೆಯಿಂದ ಸವಾರರು ಹೈರಾಣಾಗಿದ್ದಾರೆ.

ಹೆದ್ದಾರಿಯ ಕೆಳಸೇತುವೆ ಬಳಿ ನೀರು ನಿಂತಿದ್ದು, ವಾಹನಗಳು ಮುಂದಕ್ಕೆ ಚಲಿಸಲಾಗಿದೇ ವಾಹನ ದಟ್ಟಣೆ ಉಂಟಾಗಿದೆ. ಅಲ್ಲದೇ ಸರಣಿ ಅಪಘಾತ ಗಳು ಕೂಡ ನಡೆದಿದೆ. ದಶಪಥ ಹೆದ್ದಾರಿಯಲ್ಲಿ ಮಳೆ ಅವಾತರ ಹಿನ್ನೆಲೆಯಲ್ಲಿ ಮಳೆಯ ನೀರಿನಿಂದ ಕಾರು ಕೆಟ್ಟುನಿಂತಿದ್ದು, ಈ ವೇಳೆ ಹಿಂದೆ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಕಾರಿನ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.

270 ರೂಪಾಯಿ ಟೋಲ್‌ ಕಟ್ಟಿದ್ದೇನೆ. ಮಳೆ ನೀರಿನಿಂದ ಕಾರು ಎಂಜಿನ್ ಸೀಜ್‌ ಆಗಿದೆ. ಬೆಳಗ್ಗಿನ ಜಾವ ಸಮಯದಲ್ಲಿ ಈ ಮಾರ್ಗವಾಗಿ ಬಂದು ರಸ್ತೆ ನೀರಿನಲ್ಲಿ ಕಾರು ಸಿಲುಕಿಕೊಂಡಿದೆ. ಟೋಯಿಂಗ್ ಮಾಡೋದಕ್ಕೆ ದುಡ್ಡು, ಗ್ಯಾರೇಜ್ ಸಿಬ್ಬಂದಿ ಕರೆತರೋದಕ್ಕೆ ದುಡ್ಡು, ಇತ್ತ ಇಂಜಿನ್ ಸೀಜ್. ಟೋಲ್ ಕಟ್ಟಿದ್ದಲ್ಲದೆ ಇಷ್ಟು ನಷ್ಟ ಮಾಡಿಕೊಂಡಿದ್ದೇನೆ. ನನಗೆ ಪರಿಹಾರ ಕೊಡಿ ಎಂದು ಮಡಿಕೇರಿ ಕಡೆ ಪ್ರಯಾಣ ಮಾಡುತ್ತಿದ್ದ ಕಾರು ಚಾಲಕ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.