Sunday, 15th December 2024

Bangladesh Immigrants: ರಾಜ್ಯದಲ್ಲಿದ್ದಾರೆ ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು!

Illegal Bangladeshi immigrant

ಉಡುಪಿ: ಬಾಂಗ್ಲಾದೇಶದಿಂದ ಕಳೆದ 3ರಿಂದ 5 ವರ್ಷಗಳ ಅವಧಿಯಲ್ಲಿ ಸುಮಾರು 25 ಸಾವಿರ ಮಂದಿ ಬಂದಿದ್ದು, ಒಂದು ಲಕ್ಷಕ್ಕೂ ಅಧಿಕ ಅಕ್ರಮ ವಲಸಿಗರು (illegal Bangladesh Immigrants) ರಾಜ್ಯದಲ್ಲಿ ನೆಲೆಸಿರಬಹುದು ಎಂದು ಸ್ಫೋಟಕ ವಿವರ ದೊರೆತಿದೆ.

ಮಲ್ಪೆಯಲ್ಲಿ ಸೆರೆಯಾಗಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರಣೆಯ ವೇಳೆ ಈ ಮಾಹಿತಿ ಹೊರಬಿದ್ದಿದೆ. ಬಾಂಗ್ಲಾದಿಂದ ಕಳೆದ 3ರಿಂದ 5 ವರ್ಷಗಳ ಅವಧಿಯಲ್ಲಿ ಸುಮಾರು 25 ಸಾವಿರ ಮಂದಿ ಬಂದಿರಬಹುದು. ಒಟ್ಟಾರೆಯಾಗಿ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಲಕ್ಷಕ್ಕೂ ಅಧಿಕ ಇರಬಹುದು ಎಂದಿದೆ ಪೊಲೀಸ್‌ ಮೂಲ.

ಪಶ್ಚಿಮ ಬಂಗಾಲ, ಅಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ ಗಡಿಗಳ ಮೂಲಕ ಗುಂಪಾಗಿ ಭಾರತಕ್ಕೆ ನುಗ್ಗುತ್ತಾರೆ. ನುಸುಳುಕೋರರಿಗೆ ಗಡಿ ಭಾಗದಲ್ಲಿಯೇ ನಕಲಿ ದಾಖಲೆಗಳು ಸಿದ್ಧವಾಗಿರುತ್ತವೆ. ಅಲ್ಲಿಂದ ಬೇರೆ ಬೇರೆ ಕಡೆಗೆ ಅದೇ ದಾಖಲೆ ಉಪಯೋಗಿಸಿ ತೆರಳುತ್ತಾರೆ. ಹೀಗೆ ಸುಮಾರು 3-5 ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ರಾಜ್ಯಗಳ ಮೂಲಕ ಪ್ರತ್ಯೇಕ ತಂಡಗಳಾಗಿ ಕನಿಷ್ಠ 25 ಸಾವಿರ ಅಕ್ರಮ ನುಸುಳುಕೋರರು ಕರ್ನಾಟಕಕ್ಕೆ ಬಂದಿದ್ದಾರೆ. ಇವರಲ್ಲಿ ಶಿವಮೊಗ್ಗ, ಉಡುಪಿ, ದ.ಕ., ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಯಾಗಿದ್ದಾರೆ ಎಂದು ಆರೋಪಿ ಮಾಹಿತಿ ನೀಡಿದ್ದಾನೆ.

ವರ್ಷಗಳ ಹಿಂದೆಯೇ ಬಂದಿರುವ ಕೆಲವರು ಕನ್ನಡವನ್ನು ಚೆನ್ನಾಗಿ ಕಲಿತು ಇಲ್ಲಿಯವರೊಂದಿಗೆ ಬೆರೆತು ಹೋಗಿದ್ದಾರೆ. ಆಸ್ತಿ, ಮನೆ ಖರೀದಿ ಮಾಡಿದವರು ಇದ್ದಾರೆ. ಇವರು ಭಾರತದ ಆಧಾರ್‌ ಕಾರ್ಡ್‌, ಚುನಾವಣಾ ಗುರುತು ಚೀಟಿಯಂತಹ ದಾಖಲೆಗಳನ್ನೂ ಹೊಂದಿದ್ದಾರೆ ಎನ್ನುತ್ತವೆ ಮೂಲಗಳು. ಈ ಬಗ್ಗೆ ಗುಪ್ತಚರ ಇಲಾಖೆಯಲ್ಲಿಯೂ ನಿಖರ ಮಾಹಿತಿ ಲಭ್ಯವಿಲ್ಲ.

ಅನ್ಯ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ಬ್ರೋಕರ್‌ಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಮಲ್ಪೆಯಲ್ಲಿ ನಡೆದ ಘಟನೆಯ ಬಳಿಕ ಪೊಲೀಸರು ಇದುವರೆಗೆ ಕೇವಲ 8ರಿಂದ 10 ಮಂದಿಯನ್ನು ಮಾತ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ರೀತಿ ಇನ್ನು ಎಷ್ಟು ಮಂದಿ ಕಾರ್ಮಿಕರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕೆಲಸವೂ ಆಗಬೇಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳನ್ನು ಸೋಮವಾರ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಸುಮಾರು 10 ದಿನ ಅವರನ್ನು ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ.

ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದು, ಅ. 11ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬಾೖಗೆ ಹೊರಟಿದ್ದ ಬಾಂಗ್ಲಾ ಪ್ರಜೆ ಮೊಹಮ್ಮದ್‌ ಮಾಣಿಕ್‌ ಹುಸೇನ್‌ಗೆ ವೀಸಾ ಕಳುಹಿಸಿದ್ದು ಬಾಂಗ್ಲಾದ ಆತನ ಗೆಳೆಯ ಆಯಿನುಲ್‌ ಎಂಬಾತ. ಆಯಿನುಲ್‌ ದುಬಾೖಯಲ್ಲಿ ಕಟ್ಟಡ ಕಾರ್ಮಿಕನಾಗಿದ್ದು, ಮೊಹಮ್ಮದ್‌ ಮಾಣಿಕ್‌ನನ್ನು ಕೂಡ ಕಟ್ಟಡ ಕಾಮಗಾರಿಗೆ ಕರೆಯಿಸಿಕೊಳ್ಳಲು ಉದ್ದೇಶಿಸಿದ್ದ. ಮೊಹಮ್ಮದ್‌ ಮಾಣಿಕ್‌ ಉಡುಪಿಯಲ್ಲಿ ಪರ್ವೇಜ್‌ ಎಂಬಾತನ ಮೂಲಕ ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಆಯಿನುಲ್‌ ಸ್ವಲ್ಪ ಸಮಯ ಪಶ್ಚಿಮ ಬಂಗಾಲದಲ್ಲಿ ನೆಲೆಸಿದ್ದು, ಬಳಿಕ ದುಬಾೖಗೆ ತೆರಳಿದ್ದ.

ಆತ ಕೂಡ ಮಂಗಳೂರಿನ ಮೂಲಕವೇ ದುಬಾೖಗೆ ತೆರಳಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಆಯಿನುಲ್‌ ಈ ಹಿಂದೆ ಯಾರನ್ನಾದರೂ ಇದೇ ರೀತಿಯಾಗಿ ದ.ಕ., ಉಡುಪಿ ಜಿಲ್ಲೆಗಳಿಂದ ದುಬಾೖಗೆ ಕರೆಸಿಕೊಂಡಿದ್ದಾನೆಯೇ? ಅವರಿಗೆಲ್ಲ ಆಧಾರ್‌ ಕಾರ್ಡ್‌, ಇತರ ಗುರುತಿನ ಚೀಟಿಗಳನ್ನು ಮಾಡಿಕೊಟ್ಟಿರುವವರು ಯಾರು ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರಾವಳಿಯೇ ಕೇಂದ್ರ?

ಅಕ್ರಮ ವಲಸಿಗರು, ಮಾನವ ಕಳ್ಳಸಾಗಣೆ ಏಜೆಂಟರಿಗೆ ಕರಾವಳಿ ಕಾರ್ಯಸ್ಥಾನವಾಗುತ್ತಿದೆಯೇ ಎಂಬ ಆತಂಕಕ್ಕೆ ಪುಷ್ಟಿ ನೀಡುವಂತೆ ಬಾಂಗ್ಲಾ ಪ್ರಜೆಗಳ ಅಕ್ರಮ ವಾಸ್ತವ್ಯ ಪತ್ತೆಯಾಗಿದೆ. ಈ ಹಿಂದೆಯೂ ಕರಾವಳಿ ಭಾಗದಲ್ಲಿ ಬಾಂಗ್ಲಾಪ್ರಜೆಗಳ ಅಕ್ರಮ ವಾಸ್ತವ್ಯದ ದೂರುಗಳು ಕೇಳಿಬಂದಿದ್ದವು. ಪೊಲೀಸರು ಸಂಶಯದಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಿಸಿದ್ದರೂ ಬಾಂಗ್ಲಾ ಪ್ರಜೆಗಳ ಪತ್ತೆ ಸಾಧ್ಯವಾಗಿರಲಿಲ್ಲ.

2021ರ ಜೂ. 11ರಂದು ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿದ್ದ ಶ್ರೀಲಂಕಾದ 38 ಪ್ರಜೆಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆಯ ವೇಳೆ ಇವರಿಗೆ ಏಜೆಂಟನೊಬ್ಬ ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ತಮಿಳುನಾಡಿನ ಮೂಲಕ ಮಂಗಳೂರಿಗೆ ಕಳುಹಿಸಿಕೊಟ್ಟಿರುವುದು ತಿಳಿದುಬಂದಿತ್ತು. ಅವರು ಮಂಗಳೂರಿನ ಲಾಡ್ಜ್‌ನಲ್ಲಿ ತಂಗಿದ್ದರು. ದೋಣಿಯ ಮೂಲಕ ವಿದೇಶಕ್ಕೆ ಕಳುಹಿಸಿಕೊಡುವ ಯೋಜನೆ ರೂಪಿಸಿದ್ದು ತನಿಖೆ ವೇಳೆ ಗೊತ್ತಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು. 2012ರಲ್ಲಿ ಮಂಗಳೂರಿನ ಮೂಲಕ ಆಸ್ಟ್ರೇಲಿಯಾಕ್ಕೆ ಮಾನವ ಕಳ್ಳ ಸಾಗಣಿಕೆ ಮೂಲಕ ತೆರಳಲು ಸಿದ್ಧರಾಗಿದ್ದ 84 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. 2013ರಲ್ಲಿಯೂ ಶ್ರೀಲಂಕಾದಿಂದ ಅಕ್ರಮವಾಗಿ ಬಂದು ಮಂಗಳೂರಿನಿಂದ ದೋಣಿ ಮೂಲಕ ವಿದೇಶಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಮಹಿಳೆಯರು, ಬಾಲಕರನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ: Illegal Bangladeshi immigrants: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 7 ಮಂದಿ ವಶ