Thursday, 19th September 2024

Bank frauds: ಎಸ್‌ಬಿಐ, ಪಿಎನ್‌ಬಿ ಮೇಲಿನ ನಿಷೇಧ ವಾಪಸ್‌ ಪಡೆಯಲು ರಾಜ್ಯ ಸರ್ಕಾರ ನಿರ್ಧಾರ

Bank frauds

ಬೆಂಗಳೂರು: ಪದೇಪದೆ ಹಣ ಅಕ್ರಮ ವರ್ಗಾವಣೆ (Bank frauds) ಆಗುತ್ತಿದ್ದ ಹಿನ್ನೆಲೆಯಲ್ಲಿ ಪ್ರಮುಖ ರಾಷ್ಟ್ರೀಯ ಬ್ಯಾಂಕ್‌ಗಳಾದ ಎಸ್‌ಬಿಐ ಮತ್ತು ಪಿಎನ್‌ಬಿ ಜತೆ ವ್ಯವಹಾರ ಸ್ಥಗಿತಗೊಳಿಸಲು ಆದೇಶ ನೀಡಿದ್ದ ರಾಜ್ಯ ಸರ್ಕಾರ, ಇದೀಗ ಬ್ಯಾಂಕ್‌ಗಳ ಮೇಲೆ ವಿಧಿಸಿದ್ದ ನಿಷೇಧ ವಾಪಸ್‌ ಪಡೆಯಲು ನಿರ್ಧರಿಸಿದೆ.

ಆ. 12 ರಂದು ಆರ್ಥಿಕ ಇಲಾಖೆಯು ಈ ಎರಡು ಬ್ಯಾಂಕ್‌ಗಳಲ್ಲಿ ವಂಚನೆಯಾಗಿರುವ 22.67 ಕೋಟಿ ರೂ.ಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಸಹಕರಿಸುತ್ತಿಲ್ಲ ಎಂದು ಬ್ಯಾಂಕ್‌ಗಳಲ್ಲಿನ ಎಲ್ಲಾ ವಹಿವಾಟು ಕೊನೆಗೊಳಿಸುವಂತೆ ಸುತ್ತೋಲೆ ಹೊರಡಿಸಿತ್ತು. ಆದರೆ, ಇದೀಗ ವಂಚಿಸಿದ ಹಣವನ್ನು ಒಂದು ವರ್ಷದ ಬಡ್ಡಿಯೊಂದಿಗೆ ಮರುಪಾವತಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಸ್‌ಬಿಐ ಮತ್ತು ಪಿಎನ್‌ಬಿ ವಿರುದ್ಧದ ಬಹಿಷ್ಕಾರವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಎಸ್‌ಬಿಐ (State bank of india) ಮತ್ತು ಪಿಎನ್‌ಬಿ (Punjab national bank)ಯಲ್ಲಿ ಇದ್ದ ಸರ್ಕಾರದ 22.67 ಕೋಟಿ ನಿಶ್ಚಿತ ಠೇವಣಿಯನ್ನು ಪತ್ರ ವ್ಯವಹಾರ ನಡೆಸಿದರೂ ವಾಪಸ್‌ ನೀಡಿರಲಿಲ್ಲ. ಖಾಸಗಿ ಕಂಪನಿಯ ಸಾಲಕ್ಕೆ ಸರ್ಕಾರದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಹೊಂದಾಣಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಬ್ಯಾಂಕ್‌ಗಳ ಎಲ್ಲ ಶಾಖೆಗಳಲ್ಲಿ ಸರ್ಕಾರಿ ಅಕೌಂಟ್ ಕ್ಲೋಸ್‌ ಮಾಡಲು ಎಲ್ಲ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಯುನಿವರ್ಸಿಟಿ ಮತ್ತಿತರ ಸಂಸ್ಥೆಗಳಿಗೆ ಸೂಚಿಸಲಾಗಿತ್ತು.

ಬ್ಯಾಂಕ್‌ಗಳಲ್ಲಿನ ಠೇವಣಿ, ಹೂಡಿಕೆಗಳನ್ನು ಹಿಂಪಡೆಯಲು ಸೂಚಿಸಿ, ಇನ್ನು ಮುಂದೆ ಎರಡು ಬ್ಯಾಂಕ್‌ಗಳ ಜತೆ ಯಾವುದೇ ವ್ಯವಹಾರ ಮಾಡದಂತೆ ಸರ್ಕಾರ ಸೂಚಿಸಿತ್ತು. ಆದರೆ, ಎಸ್‌ಬಿಐ ಹಾಗೂ ಪಿಎನ್‌ಬಿ ಬ್ಯಾಂಕ್‌ಗಳ ವ್ಯವಸ್ಥಾಪಕರು, ನಿಶ್ಚಿತ ಠೇವಣಿ ವಾಪಸ್‌ ನೀಡಲು ಕಾಲಾವಕಾಶ ಕೋರಿದ್ದರು. ಇದೀಗ ಸರ್ಕಾರಕ್ಕೆ ನೀಡಬೇಕಾದ ಹಣ ವಾಪಸ್‌ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಮೇಲಿನ ನಿಷೇಧ ನಿರ್ಧಾರವನ್ನು ಸರ್ಕಾರ ವಾಪಸ್‌ ಪಡೆಯಲು ನಿರ್ಧರಿಸಿದೆ ಎನ್ನಲಾಗಿದೆ.

ಸರ್ಕಾರದ ನಡೆ ಟೀಕಿಸಿದ್ದ ವಿಪಕ್ಷಕಗಳು
ಎಸ್‌ಬಿಐ ಮತ್ತು ಪಿಎನ್‌ಬಿ ಜತೆ ವ್ಯವಹಾರ ಸ್ಥಗಿತಗೊಳಿಸಲು ಸೂಚಿಸಿದ್ದ ರಾಜ್ಯ ಸರ್ಕಾರದ ನಡೆಯನ್ನು ವಿರೋಧ ಪಕ್ಷಗಳು ಟೀಕಿಸಿದ್ದವು. ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸಲು ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ನಡೆ ಅತ್ಯಂತ ಅಸಂಬದ್ಧವಾದುದು. ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಯೂನಿಯನ್ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು 187 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಬಯಲಾಗಿದೆ. ಅವ್ಯವಹಾರ ನಡೆದಿದೆ ಎನ್ನುವುದಾದರೆ ಯೂನಿಯನ್ ಬ್ಯಾಂಕ್‌ಗೂ ಈ ಆದೇಶ ಯಾಕೆ ಅನ್ವಯಿಸದಿಲ್ಲ ಎಂದು ಪ್ರಶ್ನಿಸಿದ್ದರು.

Leave a Reply

Your email address will not be published. Required fields are marked *