Saturday, 14th December 2024

Bannerghatta Biological Park: ಸಫಾರಿ ಬಸ್ ಏರಿ ಎದೆ ಝಲ್ಲೆನಿಸುವಂತೆ ಮಾಡಿದ ಚಿರತೆ; ವಿಡಿಯೋ ವೈರಲ್‌

Leopard Leaping

ಬೆಂಗಳೂರು: ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta Biological Park) ಚಿರತೆಯೊಂದು (Leopard Leaping) ಏಕಾಏಕಿ ಸಫಾರಿ ಬಸ್ ಏರಿದ್ದು, ಇದರಿಂದ ಕೆಲಕಾಲ ಪ್ರವಾಸಿಗರು ಆತಂಕಗೊಂಡಿದ್ದು, ಎದೆ ಝಲ್ಲೆನಿಸುವಂತೆ ಮಾಡಿದೆ.

ಎಂದಿನಂತೆ ಚಿರತೆ ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋದ ಚಾಲಕ ಪ್ರಾಣಿ ಇರುವೆಡೆ ಕೆಲ ಕಾಲ ನಿಧಾನವಾಗಿ ಚಲಿಸಿ ಫೋಟೋ / ವೀಡಿಯೋಗೆ ಅನುವು ಮಾಡಿಕೊಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ. ಇಲ್ಲೇ ಅಲ್ಲ ಹುಲಿ, ಸಿಂಹ, ಕರಡಿ ಸಫಾರಿಯಲ್ಲೂ ಇದು ನಡೆಯುತ್ತದೆ. ಆಗ ಕೆಲ ಪ್ರಾಣಿಗಳು ರಸ್ತೆಗೆ ಅಡ್ಡಲಾಗಿ ಮಲಗಿ ತಡೆ ಮಾಡಿದರೆ, ಕೆಲವೊಂದು ಸಫಾರಿ ವಾಹನದ ಸಮೀಪ ಸಹಜವಾಗಿ ಬರುತ್ತದೆ. ಆದರೆ ಇತ್ತೀಚೆಗೆ ಹೊಸದಾಗಿ ಆರಂಭವಾದ ಚಿರತೆ ಸಫಾರಿಯಲ್ಲಿನ ಚಿರತೆಯೊಂದು ವಾಹನಕ್ಕೆ ಭದ್ರವಾಗಿ ಅಳವಡಿಸಿರುವ ಕಬ್ಬಿಣದ ಸರಳನ್ನು ಹಿಡಿದು ಕಿಂಡಿಯಲ್ಲಿ ಮುಖ ತೂರಿಸಿ ಗುಟುರು ಹಾಕಿದೆ. ಸಫಾರಿ ವಾಹನದ ಒಳಗೆ ಸುಭದ್ರವಾಗಿ ಇದ್ದವರು ಕಿಟಕಿಯಿಂದ ದೂರ ಸರಿದು ಕೂಗಾಡಿದ್ದಾರೆ.

ಈ ಚಿರತೆ ಕಿಟಕಿ ಬಳಿಯ ಸರಳನ್ನು ಹಿಡಿದು ಒಳಕ್ಕೆ ಬರುವ ಪ್ರಯತ್ನ ಮಾಡಿರುವುದನ್ನು ಹಿಂದಿನ ವಾಹನದಲ್ಲಿದ್ದ ಚಾಲಕ ಹಾಗೂ ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ | Qantas Flight: ವಿಮಾನದಲ್ಲಿ ಏಕಾಏಕಿ ಪ್ಲೇ ಆಯ್ತು ವಯಸ್ಕರ ಚಿತ್ರ; ಹೌಹಾರಿದ ಪ್ರಯಾಣಿಕರು

ಮತ್ತಷ್ಟು ಮುಂಜಾಗ್ರತೆ ವಹಿಸಲು ಕ್ರಮ

ಈ ಕುರಿತು ಉದ್ಯಾನವನದ ಆಡಳಿತಾಧಿಕಾರಿ ಸೂರ್ಯ ಸೇನ್ ಪ್ರತಿಕ್ರಿಯಿಸಿ, ಸಫಾರಿ ವಾಹನಕ್ಕೆ ಅತ್ಯಂತ ಭದ್ರವಾದ, ಗುಣಮಟ್ಟದ ಕಂಬಿ ಮೆಶ್ ಬಳಸಿ ಕಿಟಕಿಗೆ ಅಳವಡಿಸಲಾಗಿದೆ. ಚಿರತೆ, ಸಿಂಹ, ಹುಲಿ ಸೇರಿ ಯಾವುದೇ ಪ್ರಾಣಿ ಬಂದರೂ ಮೆಶ್ ಓಪನ್ ಆಗಲ್ಲ. ಜನ ಫೋಟೋ ತೆಗೆಯಲು ಹಸ್ತ ಮಾತ್ರ ಅಥವಾ ಮೊಬೈಲ್ ಹೊರ ಚಾಚುವಷ್ಟು ಮಾತ್ರ ಕಿಂಡಿ ನಿರ್ಮಾಣ ಮಾಡಲಾಗಿದೆ. ಮಾಂಸಹಾರಿ ಪ್ರಾಣಿಗಳು ಸಾಧಾರಣವಾಗಿ ವಾಹನದ ಬಳಿ ಬರುತ್ತವೆ. ನಮ್ಮ ಚಾಲಕ ಹಾಗೂ ಗನ್ ಸಹಿತ ಇರುವ ಭದ್ರತಾ ಸಿಬ್ಬಂದಿ ವಾಹನದಲ್ಲಿ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಸದ್ದು ಮಾಡಿ ಪ್ರಾಣಿಗಳನ್ನು ದೂರಕ್ಕೆ ಓಡಿಸುತ್ತಾರೆ. ಆದರೂ ಈ ವೀಡಿಯೋ ನೋಡಿದ ಮೇಲೆ ಇನ್ನಷ್ಟು ಮುಂಜಾಗ್ರತೆ ವಹಿಸುವ ಕಡೆ ಗಮನ ಹರಿಸಲಾಗುವುದು. ಪ್ರವಾಸಿಗರು ಭಯ ಪಡುವುದು ಬೇಡ ಎಂದು ಮನವಿ ಮಾಡಿದ್ದಾರೆ.