Friday, 22nd November 2024

BDA Villas: ಬೆಂಗಳೂರಿನಲ್ಲಿ ಮನೆ ಬೇಕೆ? ಬಿಡಿಎ ವಿಲ್ಲಾಗಳು ಹರಾಜಿನಲ್ಲಿ ಲಭ್ಯ

bda villa 1

ಬೆಂಗಳೂರು: ಬೆಂಗಳೂರಲ್ಲಿ ಸ್ವಂತ ಮನೆ (Bengaluru news) ಹೊಂದುವುದು ಮಧ್ಯಮ ವರ್ಗದ ಎಲ್ಲ ಬೆಂಗಳೂರು ನಿವಾಸಿಗಳ (Bengaluru realty) ಕನಸು. ಅಂತಹವರಿಗೆ ಬಿಡಿಎ ಸುವರ್ಣಾವಕಾಶವೊಂದನ್ನು ಒದಗಿಸಿದೆ. 25 ವಿಲ್ಲಾಗಳನ್ನು ಬಿಡಿಎ ಹರಾಜು (BDA villas Auction) ಹಾಕುತ್ತಿದ್ದು, ಕಡಿಮೆ ಬೆಲೆಯಲ್ಲಿ ಇವುಗಳನ್ನು ಸ್ವಂತದ್ದಾಗಿಸಿಕೊಳ್ಳುವ ಅವಕಾಶ ನಿಮ್ಮದಾಗಲಿದೆ.

ಕಾರ್ನರ್​​​ ಸೈಟ್​, ಮಧ್ಯಂತರ ನಿವೇಶನ, ಫ್ಲಾಟ್​ಗಳನ್ನು ಹರಾಜು ಹಾಕುತ್ತಿದ್ದ ಬಿಡಿಎ ಸದ್ಯ ವಿಲ್ಲಾಗಳ ಹರಾಜು ಹಾಕುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಬೆಂಗಳೂರು ಹೊರವಲಯದಲ್ಲಿರುವ ತುಮಕೂರು ರಸ್ತೆಯ ಹುಣ್ಣಿಗೆರೆಯಲ್ಲಿ ಬಿಡಿಎ ಸುಮಾರು 25 ವಿಲ್ಲಾಗಳನ್ನು ಹರಾಜು ಹಾಕುತ್ತಿದೆ. ಡಾ.ಪುನೀತ್ ರಾಜ್​ಕುಮಾರ್ ಹೆಸರಿನ ಈ ವಿಲ್ಲಾಗಳು ಡಿಸೆಂಬರ್‌ನಲ್ಲಿ 16ರಂದು ನಡೆಯಲಿರುವ ಇ-ಹರಾಜಿನ ಮೂಲಕ ಹಂಚಿಕೆ ಆಗಲಿದೆ.

1,269 ಚದರ ಮೀಟರ್‌ನಿಂದ 1,804 ಚದರ ಮೀಟರ್‌ನಲ್ಲಿ ನಿರ್ಮಾಣವಾಗಿರುವ ಈ ವಿಲ್ಲಾಗಳ ಪ್ರಾಥಮಿಕ ಬೆಲೆ ₹76.50 ಲಕ್ಷದಿಂದ ₹1.11 ಕೋಟಿ ರೂ. ವರೆಗೆ ನಿಗದಿ ಮಾಡಲಾಗಿದೆ. ಈ ವಿಲ್ಲಾ ಖರೀದಿಗೆ ನೋದಂಣಿ ಮಾಡಿಕೊಳ್ಳೋದು ಹೇಗೆ? ವಿವರ ಇಲ್ಲಿದೆ ನೋಡಿ.

ಇದೇ ನವೆಂಬರ್ 29ರಿಂದ ಡಿಸೆಂಬರ್ 13ರ ತನಕ BDA ಅಫಿಶಿಯಲ್ ವೆಬ್​ಸೈಟ್​ನಲ್ಲಿ ಇ-ಹರಾಜಿನಲ್ಲಿ ಪಾಲ್ಗೊಂಡು ನೋಂದಣಿ ಮಾಡಲು ಅವಕಾಶವಿದೆ. 4 ಲಕ್ಷ ರೂಪಾಯಿ ಆರಂಭಿಕ ಶುಲ್ಕವನ್ನು ಪಾವತಿ ಮಾಡಿ ನೋಂದಣಿ ಮಾಡಿಕೊಳ್ಳಬೇಕಿದೆ.

31 ಎಕರೆ ಪ್ರದೇಶದಲ್ಲಿ 271.46 ಕೋಟಿ ರೂ.ಗಳ ವೆಚ್ಚದಲ್ಲಿ 243 ವಿಲ್ಲಾಗಳನ್ನು ನಿರ್ಮಾಣ ಮಾಡಿರುವ ಬಿಡಿಎ ಡಿಸೆಂಬರ್ 16ರಂದು ಬೆಳಗ್ಗೆ 11 ಗಂಟೆಗೆ ವಿಲ್ಲಾಗಳ ಇ-ಹರಾಜು ಪ್ರಕ್ರಿಯೆ ನಡೆಸಲಿದೆ. ಡಿಸೆಂಬರ್ 16ರಂದು ಬೆಳಗ್ಗೆ ಆರಂಭವಾಗುವ ಹರಾಜು ಪ್ರಕ್ರಿಯೆ ಡಿಸೆಂಬರ್ 17ರ ಸಂಜೆ 5 ಗಂಟೆಯ ತನಕ ನಡೆಯಲಿದೆ.

ನಿರ್ಮಾಣವಾಗಿರುವ 243 ವಿಲ್ಲಾಗಳ ಪೈಕಿ ಕೇವಲ 25 ವಿಲ್ಲಾಗಳನ್ನಷ್ಟೇ ಬಿಡಿಎ ಹರಾಜು ಹಾಕುತ್ತಿದೆ. ನೀವು ದಾಖಲೆ ಪತ್ರಗಳ ರಗಳೆ ಇಲ್ಲದ ಬಿಡಿಎ ಮನೆಯನ್ನು ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಹರಾಜಿನಲ್ಲಿ ಭಾಗವಹಿಸುವ ಕುರಿತು ಚಿಂತಿಸಬಹುದು.

ಇದನ್ನೂ ಓದಿ: BDA: ಎಕೋ ಸ್ಪೇಸ್‌ ಗೆ ಕೊಡಲಿ ಪೆಟ್ಟು ನೀಡಲು ಸಜ್ಜಾದ ಬಿಡಿಎ