Sunday, 24th November 2024

Belagavi Murder Case: ಬೆಳಗಾವಿ ಉದ್ಯಮಿ ಕೊಲೆ ಪ್ರಕರಣ: ಕೊಲೆಯಾದವನು ಪತ್ನಿಗೆ ನೀಡುತ್ತಿದ್ದ ಕಿರುಕುಳ ಅಂತಿಂಥದ್ದಲ್ಲ!

belagavi murder case

ಬೆಳಗಾವಿ: ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಪದ್ಮಣ್ಣನವರ್ ಕೊಲೆ ಪ್ರಕರಣದ (belagavi murder case, Belagavi Crime news, Belagavi news) ತನಿಖೆಯಲ್ಲಿ ಅಚ್ಚರಿದಾಯಕ ತಿರುವುಗಳು ಲಭ್ಯವಾಗುತ್ತಿವೆ. ಕೊಲೆಯಾದ ಸಂತೋಷ್‌ ಕೂಡ ಅನೇಕ ವಿವಾಹೇತರ ಸಂಬಂಧ ಹೊಂದಿದ್ದ, ಹೆಣ್ಣುಮಕ್ಕಳನ್ನು ಮನೆಗೇ ಕರೆತರುತ್ತಿದ್ದ, ತನಗೆ ಕಿರುಕುಳ ನೀಡುತ್ತಿದ್ದ ಎಂದು ವಿಚಾರಣೆಯ ವೇಳೆ ಆತನ ಪತ್ನಿ ಮಾಹಿತಿ ನೀಡಿದ್ದಾಳೆ.

ಸಂತೋಷ್ ಪುತ್ರಿ ಸಂಜನಾ ತಮ್ಮ ತಂದೆಯ ಕೊಲೆ ಸಂಬಂಧ ತಾಯಿಯ ವಿರುದ್ಧ ದೂರು ದಾಖಲಿಸಿದ್ದರು. ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿ ಸಂತೋಷ್ ಅವರ ಪತ್ನಿ ಉಮಾ ಮತ್ತು ಕೊಲೆಗೆ ಕಾಂಟ್ರ್ಯಾಕ್ಟ್ ಪಡೆದಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮೃತರ ಪತ್ನಿ ಉಮಾ ಸಂತೋಷ್ ಪದ್ಮಣ್ಣನವರ್ (41), ಕೊಡಗು ಮೂಲದ ಶೋಭಿತ್ ಗೌಡ (31) ಮತ್ತು ಪವನ್ (35).

ಪೊಲೀಸರು ಇವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದು, ಸಾಕ್ಷಿಗಳು ಹಾಗೂ ಆರೋಪಿಗಳ ಸಹಿತ ವೈದ್ಯಕೀಯ ಪರೀಕ್ಷೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಂತರ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಮೂಲಗಳ ಪ್ರಕಾರ, ಪ್ರಮುಖ ಆರೋಪಿ ಉಮಾ ಮತ್ತು ಶೋಭಿತ್ ಗೌಡ ಟೆಲಿಗ್ರಾಮ್‌ನಲ್ಲಿ ಪರಸ್ಪರ ಸ್ನೇಹ ಬೆಳೆಸಿದ್ದರು. ಆಗ ಉಮಾ ಪತಿಯ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದಾರೆ. ಶೋಭಿತ್ ಮತ್ತು ಪವನ್ ಇತ್ತೀಚೆಗೆ ಅವಳನ್ನು ಭೇಟಿಯಾಗಲು ಬೆಳಗಾವಿಗೆ ಬಂದಾಗ, ಅವಳು ತನ್ನ ಗಂಡನ ಕೊಲೆಗೆ ಯೋಜಿಸಿದ್ದಳು ಮತ್ತು ಸಂತೋಷ್‌ನನ್ನು ಕೊಲ್ಲಲು ಸಹಾಯ ಮಾಡಿದರೆ ಹಣ ನೀಡುವುದಾಗಿ ಭರವಸೆ ನೀಡಿದ್ದಳು.

ಅ.9ರಂದು ಶೋಭಿತ್‌ಗೆ ಕರೆ ಮಾಡಿ ಎಲ್ಲವನ್ನು ಸಿದ್ಧಪಡಿಸಿ ಸಂತೋಷ್‌ಗೆ ನಿದ್ರೆ ಮಾತ್ರೆ ತಿನ್ನಿಸಿರುವುದಾಗಿ ಹೇಳಿದ್ದಾಳೆ. ಶೋಭಿತ್ ಮತ್ತು ಪವನ್ ಅವರನ್ನು ಬರುವಂತೆ ಹೇಳಿ, ಅವರ ಸಹಾಯದಿಂದ ಸಂತೋಷ್‌ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ.

ಶ್ರೀಮಂತ ಉದ್ಯಮಿಯಾಗಿದ್ದ ಸಂತೋಷ್ ಸುರಕ್ಷತೆಗಾಗಿ ಮಹಾಂತೇಶನಗರದಲ್ಲಿರುವ ಮನೆಯ ಒಳಗೆ ಮತ್ತು ಹೊರಗೆ ಸುಮಾರು 17 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ವಿಚಾರಣೆ ವೇಳೆ, ಸಂತೋಷ್‌ಗೆ ಹಲವು ವಿವಾಹೇತರ ಸಂಬಂಧಗಳಿದ್ದುದು ಗೊತ್ತಾಗಿದೆ. ಬೇರೆ ಬೇರೆ ಮಹಿಳೆಯರನ್ನು ಮನೆಗೇ ಕರೆದುಕೊಂಡು ಬರುತ್ತಿದ್ದ ಎಂದು ಉಮಾ ಹೇಳಿದ್ದಾಳೆ. ವರ್ಷಗಟ್ಟಲೆ ಹಲವು ನೆಪಗಳನ್ನು ಹುಡುಕಿ ಅಥವಾ ವಿನಾಕಾರಣ ಉಮಾಳನ್ನು ಹಿಂಸಿಸುತ್ತಿದ್ದ. ಸಂತೋಷ್ ಕಿರುಕುಳದಿಂದ ಬೇಸತ್ತು ಉಮಾ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿ, ಹೃದಯಾಘಾತ ಎಂದು ಬಿಂಬಿಸಲು ಹೊರಟಿದ್ದಳು.

ಬೆಂಗಳೂರಿನಲ್ಲಿ ವಾಸವಿದ್ದ ಮಗಳು ಸಂಜನಾ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದಾಗ ಸತ್ಯ ಬೆಳಕಿಗೆ ಬಂದಿದೆ. “ಈ ಪ್ರಕರಣದಲ್ಲಿನಾವು ಈಗಾಗಲೇ ಮೂವರನ್ನು ಬಂಧಿಸಿದ್ದೇವೆ. ಸಂತೋಷ್ ಅವರ ಪತ್ನಿ ಪ್ರಮುಖ ಆರೋಪಿಯಾಗಿದ್ದು ಗಂಡನ ಕಿರುಕುಳದಿಂದ ಹೊರಬರಲು ಪತಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿವೆ” ಎಂದು ಪೊಲೀಸ್ ಕಮಿಷನರ್ ಇಡಾ ಮಾರ್ಟಿನ್ ಹೇಳಿದ್ದಾರೆ.

ಇದನ್ನೂ ಓದಿ: Belagavi Murder Case: ಬೆಳಗಾವಿ ಉದ್ಯಮಿ ಸತ್ತದ್ದು ಹೇಗೆ? ಮಗಳಿಗೆ ತಾಯಿಯ ಮೇಲೇ ಅನುಮಾನ!