ಬೆಳಗಾವಿ: ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ನೀರುಪಾಲಾಗಿರುವ ಘಟನೆ ಜಿಲ್ಲೆಯ (Belagavi News) ಹುಕ್ಕೇರಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಬಳಿ ನಡೆದಿದೆ. ಲಕ್ಷ್ಮಣ ರಾಮ ಅಂಬಲಿ (49), ರಮೇಶ (15), ಯಲ್ಲಪ್ಪ (13) ನಾಪತ್ತೆಯಾದವರು.
ಬಲೆ ಹಾಕಿ ಮೀನು ಹಿಡಿಯಲು ನದಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ. ನೀರಿನಲ್ಲಿ ಆಯತಪ್ಪಿ ಬಿದ್ದು ಮುಳುಗುತ್ತಿದ್ದಾ ಒಬ್ಬ ಪುತ್ರನನ್ನು ರಕ್ಷಿಸಲು ಹೋದ ತಂದೆ ಹಾಗೂ ಇನ್ನೊಬ್ಬ ಮಗ ನೀರಿನಲ್ಲಿ ಮುಳುಗಿದ್ದಾರೆ . ಸದ್ಯ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿ ಮೂವರ ಮೃತದೇಹವನ್ನು ಪತ್ತೆ ಹಚ್ಚಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸುದ್ದಿನ್ನೂ ಓದಿ | Video Viral: ಹೊಂಚು ಹಾಕಿ ಸಾಕು ನಾಯಿ ಮೇಲೆ ಚಿರತೆ ದಾಳಿ; ಈ ಶಾಕಿಂಗ್ ವಿಡಿಯೊ ಇಲ್ಲಿದೆ
ಹಳ್ಳದಲ್ಲಿ ಕೊಚ್ಚಿಹೋದ ಇಬ್ಬರು ಬಾಲಕರು: ದನ ಮೇಯಿಸಲು ಹೋದವರು ಶವವಾಗಿ ಪತ್ತೆ
ಯಾದಗಿರಿ: ದನ ಮೇಯಿಸಲು ಹೋಗಿ ಇಬ್ಬರು ಬಾಲಕರು ಹಳ್ಳದಲ್ಲಿ ಕೊಚ್ಚಿ ಹೋದ ಮನಕಲುಕುವ ಘಟನೆಯೊಂದು ಯಾದಗಿರಿ(Yadgir) ಜಿಲ್ಲೆಯ ಸುರಪುರ (Surapur) ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆದಿದೆ. ಒರ್ವ ಬಾಲಕನ ಶವ ಪತ್ತೆಯಾಗಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಾಲಕರಿಬ್ಬರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ಗ್ರಾಮಸ್ಥರೊಟ್ಟಿಗೆ ಸೇರಿಕೊಂಡು ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ.
ಈಗಾಗಲೇ ಒಬ್ಬ ಬಾಲಕನ ಶವ ಪತ್ತೆಯಾಗಿದೆ. ಮೃತ ಬಾಲಕನನ್ನು ಶಂಕರ ಮೇಟಿ (10) ಎಂದು ಗುರುತಿಸಲಾಗಿದೆ. ಶ್ರೀಯಣ್ಣ ಚಂದ್ರಕಾಂತ್ ಗಾಗಿ(8) ಹುಡುಕಾಟ ಮುಂದುವರಿದಿದೆ.
ಭಾನುವಾರ ಶಾಲೆಗೆ ರಜೆಯಿದ್ದ ಕಾರಣ ಇಬ್ಬರು ಬಾಲಕರು ದನ ಮೇಯಿಸಲು ಹೋಗಿದ್ದರು. ಆ ವೇಳೆ ಕಾಲು ಜಾರಿ ಇಬ್ಬರೂ ಹಿರೇಹಳ್ಳಕ್ಕೆ ಬಿದ್ದಿದ್ದಾರೆ. ಸಂಜೆಯಾದರೂ ಮನೆಗೆ ಬಾರದ ಮಕ್ಕಳನ್ನು ಹುಡುಕಿಕೊಂಡು ಗಾಬರಿಯಿಂದ ಕುಟುಂಬಸ್ಥರು ಹಳ್ಳದ ಕಡೆಗೆ ಹೋಗಿದ್ದಾರೆ. ದಡದಲ್ಲಿ ಬಾಲಕರಿಬ್ಬರ ಬಟ್ಟೆಗಳು ಪತ್ತೆಯಾಗಿವೆ. ಮತ್ತಷ್ಟು ಗಾಬರಿಗೊಂಡ ಪೋಷಕರು ಗ್ರಾಮದ ಹಲವರ ಜತೆಗೆ ಸೇರಿಕೊಂಡು ಹಳ್ಳದಲ್ಲಿ ತುಂಬಾ ಹೊತ್ತು ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಿದರೂ ಬಾಲಕರು ಸಿಗದ ಕಾರಣದಿಂದ ಗ್ರಾಮಸ್ಥರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದಾರೆ. ಇಡೀ ರಾತ್ರಿ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಬೀಡುಬಿಟ್ಟು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಹಳ್ಳದಲ್ಲಿ ನೀರು ಹರಿಯುತ್ತಿದೆ ಮತ್ತು ಅಲ್ಲಲ್ಲಿ ಹುಲ್ಲು ಗಿಡ-ಕಂಟಿಗಳು ಇರುವುದರಿಂದ ಶೋಧ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಸಾಕಷ್ಟು ಅಡಚಣೆಗಳ ಮಧ್ಯೆಯೂ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಲೇ ಇದ್ದಾರೆ. ಘಟನೆಯು ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಸುರಪುರ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಮ್ದಾರ್ ಭೇಟಿ ನೀಡಿದ್ದಾರೆ.
ಬೆಂಗಳೂರಲ್ಲಿ 12ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು: ಕಟ್ಟಡದ 12ನೇ ಮಹಡಿಯಿಂದ ಜಿಗಿದು 18 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವಿದ್ಯಾರ್ಥಿಯ ಗುರುತು ಪತ್ತೆಯಾಗಿಲ್ಲ. ಕಾಲೇಜು ಬದಲಾವಣೆ ವಿಚಾರಕ್ಕೆ ಪೋಷಕರ ಜತೆ ವಿದ್ಯಾರ್ಥಿ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಈ ಸುದ್ದಿಯನ್ನೂ ಓದಿ | College Ragging: ಗಂಟೆಗಟ್ಟಲೇ ನಿಲ್ಲುವಂತೆ ಸೀನಿಯರ್ಸ್ ಆದೇಶ! ರ್ಯಾಗಿಂಗ್ಗೆ MBBS ವಿದ್ಯಾರ್ಥಿ ಬಲಿ