ಬೆಂಗಳೂರು: ಈ ಪ್ರಾಜೆಕ್ಟ್ ಕಾರ್ಯಗತವಾದ ಬಳಿಕ ಬೆಂಗಳೂರಿಗರು (Bengaluru news) ಗಂಟೆಗಟ್ಟಲೆ ಸಿಟಿಯ ಟ್ರಾಫಿಕ್‌ನಲ್ಲಿ ಕೊಳೆಯುವ ಬದಲು ಐದೇ ನಿಮಿಷದಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport, Banglaore International Airport, KIA) ತಲುಪಲು ಸಾಧ್ಯ!
ಮೆಟ್ರೋ ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಾದರೆ ಅನುಭವಕ್ಕೆ ಬರುತ್ತಿದ್ದ ಸಂಚಾರ ದಟ್ಟಣೆ ಬಗ್ಗೆ ಬೆಂಗಳೂರಿಗರು ಹಲವು ವರ್ಷಗಳಿಂದ ದೂರು ನೀಡುತ್ತಿದ್ದಾರೆ. ಸಿಟಿಯ ಹೃದಯ ಭಾಗದಿಂದ ಏರ್‌ಪೋರ್ಟ್ ತಲುಪುವುದಕ್ಕೆ ಈಗ ಕನಿಷ್ಠ 1.5 ಗಂಟೆ ಬೇಕಾಗುತ್ತಿದೆ. ಕೊನೆಗೂ ಇದಕ್ಕೆ ಪರಿಹಾರ ಸಿಗಲಿದೆ.
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮತ್ತು ಏರೋಸ್ಪೇಸ್ ಕಾಂಪೊನೆಂಟ್ ತಯಾರಿಕಾ ಕಂಪನಿಯಾದ ಸರ್ಲಾ ಏವಿಯೇಷನ್ ಸೇರಿ ನಗರದಿಂದ ವಿಮಾನ ನಿಲ್ದಾಣಕ್ಕೆ ಸುಸ್ಥಿರ ಮತ್ತು ಸುಧಾರಿತ ಸಣ್ಣ ವಿಮಾನ ಪ್ರಯಾಣದ ಸಾಧ್ಯತೆಯನ್ನು ಸೃಷ್ಟಿಸುತ್ತಿವೆ. ಇದು ಪ್ರಯಾಣದ ಸಮಯವನ್ನು 1.5 ಗಂಟೆಗಳಿಂದ ಕೇವಲ ಐದು ನಿಮಿಷಗಳವರೆಗೆ ಇಳಿಸಲಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ BLR ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ತೆಗೆದುಕೊಳ್ಳುವ ಸಮಯ 20 ನಿಮಿಷಗಳಿಗಿಂತ ಕಡಿಮೆ. ಇಲ್ಲಿ ರಸ್ತೆಯ ಮೂಲಕ ಪ್ರಯಾಣಿಸಿದರೆ 152 ನಿಮಿಷ ತೆಗೆದುಕೊಳ್ಳುತ್ತದೆ.
ಪ್ರಯಾಣದ ಸಮಯದಲ್ಲಿ ಈ ಕಡಿತ ಸಾಧ್ಯವಾಗಲಿರುವುದು ಸಿಟಿಯಿಂದ ಏರ್‌ಪೋರ್ಟ್‌ಗೆ ಹಾರಲಿರುವ ವಿದ್ಯುತ್ ಚಾಲಿತ ಏಳು-ಆಸನಗಳ ವಿಮಾನದ ಮೂಲಕ- ಇದನ್ನು eVTOL ಎನ್ನಲಾಗುತ್ತದೆ.
ನನಸಾಗಲಿರುವ ಕನಸು
ಇದೊಂದು ಹೊಸ ಬಗೆಯ ವಿಮಾನಯಾನ. ಸಿಟಿ ಹಾಗೂ ದೇವನಹಳ್ಳಿ ಏರ್‌ಪೋರ್ಟ್ ನಡುವೆ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಸೆವೆನ್ ಸೀಟರ್ ಸಣ್ಣ ವಿಮಾನಗಳು ಲಂಬವಾಗಿ ಟೇಕಾಫ್ ಮತ್ತು ಲ್ಯಾಂಡಿಂಗ್ ಆಗುತ್ತವೆ. ಹೀಗೆ ನೇರ ಎಲೆಕ್ಟ್ರಿಕ್ ಟೇಕಾಫ್ ಮತ್ತು ಲ್ಯಾಂಡಿಂಗ್ (ಇವಿಟಿಒಎಲ್) ವಿಮಾನಗಳಿಗೆ ಸಜ್ಜುಗೊಂಡ ಭಾರತದ ಮೊದಲ ವಿಮಾನ ನಿಲ್ದಾಣ ಬೆಂಗಳೂರು ಎನಿಸಲಿದೆ. ಇದಕ್ಕೆ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ನೊಂದಿಗೆ ಸಹಯೋಗವನ್ನು ಸರಳಾ ಏವಿಯೇಷನ್ ಘೋಷಿಸಿದೆ.
eVTOL ತಂತ್ರಜ್ಞಾನವು ಲಂಬವಾದ ಟೇಕ್‌ಆಫ್, ಲ್ಯಾಂಡಿಂಗ್ ಮತ್ತು ಹೆಲಿಕಾಪ್ಟರ್‌ಗಳಂತೆಯೇ ವಿದ್ಯುತ್ ಶಕ್ತಿಯನ್ನು ಅವಲಂಬಿಸಿದೆ. ಇದು ವಾಯುಸಂಚಾರದಲ್ಲಿ ಇನ್ನಷ್ಟು ಪ್ರಗತಿಯನ್ನು ಉಂಟುಮಾಡಲಿದೆ.
ಸುಧಾರಿತ ವಾಯುಸಂಚಾರ (AAM) ಹೆಚ್ಚಿಸಲು ವಿಶಾಲ ಉಪಕ್ರಮದ ಭಾಗವಾಗಿ eVTOL ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಏರ್ ಟ್ಯಾಕ್ಸಿಗಳು, ಸರಕು ವಿತರಣೆಗಳು ಮತ್ತು ತುರ್ತು ವೈದ್ಯಕೀಯ ಸೇವೆಗಳಂತಹ ನಗರ ಸಾರಿಗೆ ಪರಿಹಾರಗಳನ್ನು ಇದು ನೀಡಲಿದೆ. ಈ ಹೊಸ ವಿಮಾನಗಳು ನಗರ ಸಂಚಾರದ ಭವಿಷ್ಯದಲ್ಲಿ ಪ್ರಮುಖ ಎನಿಸಲಿವೆ. ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಿ, ಹೆಚ್ಚು ಪರಿಣಾಮಕಾರಿ ಸಾರಿಗೆ ವ್ಯವಸ್ಥೆಯನ್ನು ಉಂಟುಮಾಡಲಿದೆ.
ಕಂಪನಿಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈ ವಿಮಾನ 160 ಕಿಮೀವರೆಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಸಾಮಾನ್ಯವಾಗಿ 20-40 ಕಿಲೋಮೀಟರ್ ಒಳನಗರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ವಿಮಾನ ನಾಲ್ಕು, ಡಬಲ್-ಐಸೋಲೇಟೆಡ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿರುತ್ತದೆ. eVTOL ಏಳು ಎಲೆಕ್ಟ್ರಿಕ್ ಮೋಟಾರ್‌ಗಳಿಗೆ ಶಕ್ತಿ ನೀಡುತ್ತದೆ. ಸರಳಾ ಗಂಟೆಗೆ 250 ಕಿಮೀ ವೇಗದಲ್ಲಿ ಸಾಗುತ್ತದೆ. ಗಂಟೆಗಳಷ್ಟು ದೀರ್ಘವಾದ ಪ್ರಯಾಣವನ್ನು ಕೇವಲ ನಿಮಿಷಗಳಿಗೆ ಇಳಿಸುತ್ತದೆ. 6 ಪ್ರಯಾಣಿಕರಿಗೆ ಆರಾಮದಾಯಕ ಆಸನಗಳಿವೆ. ಅವರ ಸಾಮಾನು ಸರಂಜಾಮು ಇಡಬಹುದು. ಜೊತೆಗೆ ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಮಾಡಬಲ್ಲ ಸಾಮರ್ಥ್ಯ. ಬ್ಯಾಕ್-ಟು-ಬ್ಯಾಕ್ 40 ಕಿಲೋಮೀಟರ್ ಟ್ರಿಪ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇವಿಟೋಲ್ ವೆಬ್‌ಸೈಟ್ ತಿಳಿಸಿದೆ.
ಇದನ್ನೂ ಓದಿ: Hosur Airport: ಹೊಸೂರು ವಿಮಾನ ನಿಲ್ದಾಣಕ್ಕೆ ತಯಾರಿ ಚುರುಕು, 5 ಸ್ಥಳಗಳ ಅಧ್ಯಯನ