Sunday, 24th November 2024

Bengaluru Kadalekai Parishe 2024: ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭ, ಈ ರಸ್ತೆಗಳಲ್ಲಿ ಸಂಚಾರ ಬಂದ್

Basavanagudi-Kadalekai-parishe

ಬೆಂಗಳೂರು: ಬೆಂಗಳೂರಿನ (Bengaluru news) ಐತಿಹಾಸಿಕ ಕಡಲೆಕಾಯಿ ಪರಿಷೆ 2024 (Bengaluru Kadalekai Parishe 2024) ಈಗಾಗಲೇ ಆರಂಭವಾಗಿದೆ. ಅಧಿಕೃತವಾಗಿ 25-11-2024 ರಿಂದ 26-11.2024 ವರೆಗೆ ಎರಡು ದಿನ ಎಂದು ಪರಿಷೆ ದಿನಾಂಕ ನಿಗದಿಯಾಗಿದ್ದರೂ, ಈಗಾಗಲೇ ಬಸವನಗುಡಿಯ (Basavanagudi) ಉದ್ದಕ್ಕೂ ಅಂಗಡಿಗಳು ಎದ್ದಿವೆ. ಶನಿವಾರ ಹಾಗೂ ಭಾನುವಾರ ಲಕ್ಷಾಂತರ ಜನ ಭೇಟಿ ಕೊಟ್ಟು ಪರಿಷೆಯಲ್ಲಿ ಪಾಲ್ಗೊಂಡರು.

ಬುಲ್ ಟೆಂಪಲ್ ರಸ್ತೆಯಲ್ಲಿ ದೊಡ್ಡ ಗಣಪತಿ ದೇವಸ್ಥಾನ ಆವರಣದಲ್ಲಿ ಅದ್ಧೂರಿ ಪರಿಷೆ ನಡೆಯಲಿದೆ. ಪರಿಷೆ ಆಯೋಜನೆ ಹಿನ್ನೆಲೆಯಲ್ಲಿ ಈ ಭಾಗದ ವಿವಿಧ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ವಾಹನಗಳ ಸುಗಮ ಸಂಚಾರದ ಅಡ್ಡಿ ಆಗದಂತೆ ಕ್ರಮ ವಹಿಸಲಾಗಿದೆ. ಸವಾರರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಬುಲ್‌ ಟೆಂಪಲ್ ರಸ್ತೆಯಲ್ಲಿ ಈ ಕೆಳಕಂಡಂತೆ ಸಂಚಾರ ಮಾರ್ಪಾಟು ಮಾಡಲಾಗಿದೆ.

  • ಲಾಲ್‌ಬಾಗ್ ವೆಸ್ಟ್‌ಗೇಟ್, ಚಾಮರಾಜಪೇಟೆ, ಬುಲ್‌ ಟೆಂಪಲ್ ಮೂಲಕ ಹನುಮಂತನಗರದ ಕಡೆಗೆ ಸಂಚರಿಸುವ ವಾಹನಗಳು, ಬುಲ್‌ ಟೆಂಪಲ್ ರಸ್ತೆಯ ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲತಿರುವು ಪಡೆದು. ಸೀತಾರಾಮಯ್ಯ (ಹಯವದನರಾವ್) ರಸ್ತೆಯಲ್ಲಿ ಸಾಗಿ, ಗವಿಪುರಂ 3ನೇ ಅಡ್ಡರಸ್ತೆ, ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರ ತಲುಪಬೇಕು.
  • ಆರ್.ವಿ. ಟೀಚರ್ಸ್ ಕಾಲೇಜ್ ಜಂಕ್ಷನ್, ಟ್ರಿನಿಟಿ ಆಸ್ಪತ್ರೆ ರಸ್ತೆ ಮತ್ತು ಕೆ.ಆರ್ ರಸ್ತೆ, ಬ್ಯೂಗಲ್ ರಾಕ್ ರಸ್ತೆ ಗಳಿಂದ ಹನುಮಂತನಗರ ಕಡೆಗೆ ಹೋಗುವ ವಾಹನಗಳು ತ್ಯಾಗೋರ್ ಸರ್ಕಲ್ (ಮಾರುಕಟ್ಟೆ ರಸ್ತೆ- ಬ್ಯೂಗಲ್‌ರಾಕ್ ರಸ್ತೆ ಜಂಕ್ಷನ್)ನಲ್ಲಿ ಬಲತಿರುವು ಪಡೆದು ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ರಾಮಕೃಷ್ಣ ಆಶ್ರಮ ಜಂಕ್ಷನ್, ಸೀತಾರಾಮಯ್ಯ (ಹಯವದನರಾವ್) ರಸ್ತೆ, ಗವಿಪುರಂ ಎಕ್ಸ್‌ಟೆನ್ಸ್‌ನ್ 3ನೇ ಅಡ್ಡರಸ್ತೆ, ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರ ಕಡೆಗೆ ಹೋಗಬಹುದು.
  • ತ್ಯಾಗರಾಜನಗರ, ಬನಶಂಕರಿ,ಎನ್.ಆರ್.ಕಾಲೋನಿ, ಬುಲ್‌ಟೆಂಪಲ್ ರಸ್ತೆ ಕಡೆಯಿಂದ ಚಾಮರಾಜಪೇಟೆ ಕಡೆಗೆ ಸಾಗುವ ವಾಹನಗಳು ಬುಲ್‌ ಟೆಂಪಲ್ ರಸ್ತೆಯ ಕಾಮತ್ ಯಾತ್ರಿ ನಿವಾಸ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಆಶೋಕನಗರ 2ನೇ ಕ್ರಾಸ್ (ಬಿ.ಎಂ.ಎಸ್. ಕಾಲೇಜ್ ಹಾಸ್ಟೆಲ್ ರಸ್ತೆ) ರಸ್ತೆಯಲ್ಲಿ ಸಾಗಿ ಕತ್ರಿಗುಪ್ಪೆ ರಸ್ತೆಯ ಜಂಕ್ಷನ್‌ನಲ್ಲಿ ಬಲ ತಿರುವು ಪಡೆಯಬೇಕು. ನಂತರ 3ನೇ ಮುಖ್ಯರಸ್ತೆ ಮೂಲಕ ನಾರಾಯಣಸ್ವಾಮಿ ಸರ್ಕಲ್‌ನಲ್ಲಿ ಕೆ.ಜಿ. ನಗರ ಮುಖ್ಯರಸ್ತೆ ಅಥವಾ ಸೀತಾರಾಮಯ್ಯ (ಹಯವದನರಾವ್) ರಸ್ತೆಯಲ್ಲಿ ಸಾಗಿ ರಾಮಕೃಷ್ಣ ಆಶ್ರಮ ಜಂಕ್ಷನ್ ಮೂಲಕ ಚಾಮರಾಜಪೇಟೆ ತಲುಪುವಂತೆ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ವಾಹನಗಳ ಪಾರ್ಕಿಂಗ್ ವ್ಯವಸ್ಥೆ

ಎಪಿಎಸ್‌ ಕಾಲೇಜು ಆಟದ ಮೈದಾನದಲ್ಲಿ ಕಡಲೆಕಾಯಿ ಪರಿಷೆಗೆ ಬರುವ ವಾಹನ ಸವಾರರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪಿಕ್ ಅಪ್‌ ಮತ್ತು ಡ್ರಾಪ್ ಸ್ಥಳ

  • ರಾಮಕೃಷ್ಣ ಆಶ್ರಮ
  • ರಂಗರಾವ್ ಜಂಕ್ಷನ್
  • ನಾರಾಯಣಸ್ವಾಮಿ ವೃತ್ತ
  • ಎಪಿಎಸ್ ಕಾಲೇಜು
  • ಗಾಂಧಿ ಬಜಾರ್ ವೃತ್ತ

ಇದನ್ನೂ ಓದಿ: Kadalekai Parishe:‌ ಈ ಬಾರಿ ಸುಂಕ ರಹಿತ ಕಡಲೆಕಾಯಿ ಪರಿಷೆ : ವ್ಯಾಪಾರಿಗಳು ದಿಲ್‌ ಖುಷ್