Wednesday, 11th December 2024

Bengaluru Lakes: ಬೆಂಗಳೂರಿನ ಕೆರೆಗಳ ನೀರು ಅತ್ಯಂತ ಕಳಪೆ: ರಾಜ್ಯ ಸರ್ಕಾರಕ್ಕೆ ಹಸಿರು ನ್ಯಾಯಮಂಡಳಿ ಬಿಸಿ

bengaluru lakes

ನವದೆಹಲಿ: ಬೆಂಗಳೂರಿನ ಕೆರೆಗಳ (Bengaluru Lakes) ನೀರಿನ ಗುಣಮಟ್ಟದ (Water Quality) ಕುರಿತು ಕರ್ನಾಟಕ ಸರ್ಕಾರದ (Karnataka Government) ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಇಲ್ಲಿನ ಕೆರೆಗಳ ನೀರಿನ ಗುಣಮಟ್ಟ ಅತ್ಯಂತ ಕಳಪೆಯಾಗಿದೆ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿಯ (pollution control board) ವರದಿಯ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯ ಪ್ರಧಾನ ಪೀಠ ಚಾಟಿ ಬೀಸಿದೆ.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ, ಅರುಣ್‌ ಕುಮಾರ್ ತ್ಯಾಗಿ ಹಾಗೂ ಡಾ.ಎ.ಸೆಂಥಿಲ್‌ವೆಲ್ ಅವರನ್ನು ಒಳಗೊಂಡ ಪೀಠವು ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, ಬಿಬಿಎಂಪಿ, ಕರ್ನಾಟಕ ಜೌಗು ಪ್ರದೇಶ ಪ್ರಾಧಿಕಾರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರಿಗೆ ಪೀಠ ನೋಟಿಸ್‌ ನೀಡಿದೆ.

ಬೆಂಗಳೂರಿನ 15 ಕೆರೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಅಳವಡಿಸಿದ ಬಳಿಕವೂ ನೀರಿನ ಗುಣಮಟ್ಟ ಸುಧಾರಣೆ ಆಗಿಲ್ಲ. ಕಳೆದ 31 ತಿಂಗಳಲ್ಲಿ 12 ಕೆರೆಗಳ ನೀರಿನ ಗುಣಮಟ್ಟ ಕಳಪೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ, 9 ಜಲಕಾಯಗಳ ನೀರಿನ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಉತ್ತರಹಳ್ಳಿ ಕೆರೆಯ ನೀರನ್ನು 16 ಸಲ ಪರಿಶೀಲನೆ ನಡೆಸಲಾಗಿದೆ. ಎಲ್ಲ ವರದಿಯಲ್ಲೂ ನೀರಿನ ಗುಣಮಟ್ಟ ಅತ್ಯಂತ ಕಳಪೆ ಎಂದು ಬಂದಿದೆ. ಅನೇಕ ಜಲಮೂಲಗಳು ಜೈವಿಕ ವ್ಯವಸ್ಥೆಯ ಕುಸಿತದಲ್ಲಿವೆ ಎಂಬುದು ಸ್ಪಷ್ಟವಾಗಿದೆ. ಎಸ್‌ಟಿಪಿಗಳು ಕಾರ್ಯನಿರ್ವಹಿಸದೆ ಇರುವುದಕ್ಕೆ ಈ ವರದಿ ಸಾಕ್ಷಿ. ರಾಜ್ಯ ಸರ್ಕಾರದ ಲೋಪ ಎದ್ದು ಕಾಣುತ್ತಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ‍‌ಪ್ರಕರಣದಲ್ಲಿ ನೀರಿನ ಸಂರಕ್ಷಣಾ ಕಾಯ್ದೆ 1974, ಜೌಗು ಪ್ರದೇಶ ಸಂರಕ್ಷಣಾ ನಿಯಮ 2017 ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪೀಠ ಹೇಳಿದೆ.

ಇದನ್ನೂ ಓದಿ: Bengaluru Rain : ಒಂದೇ ದಿನದ ಮಳೆಗೆ ಕೆರೆಯಾದ ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಕಿಡಿ