Tuesday, 17th December 2024

Bengaluru News: ಡಾ. ಶ್ರುತಿ ಬಲ್ಲಾಳ್, ಪ್ರಗತಿ ಅನೂನ್‌ಗೆ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಟೂರಿಸಂ ಕಿರೀಟ

Bengaluru News

ಬೆಂಗಳೂರು: ಜಾಗತಿಕ ಫ್ಯಾಷನ್ ವೇದಿಕೆಯಲ್ಲಿ ಭಾರತದ ಮಹಿಳಾ ಮಣಿಗಳು ಮಹತ್ತರ ಸಾಧನೆ ಮಾಡಿದ್ದಾರೆ. ಆ ಮೂಲಕ 2024ರ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್‌ ನ್ಯಾಷನಲ್ ಟೂರಿಸಂ ಪ್ರಶಸ್ತಿಗೆ ಇಬ್ಬರು ಭಾಜನರಾಗಿದ್ದಾರೆ. ಇವರಿಬ್ಬರು ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ. ಡಾ. ಶೃತಿ ಬಲ್ಲಾಳ್ ಮತ್ತು ಪ್ರಗತಿ ಅನೂನ್ ತಮ್ಮ ಪ್ರತಿಭೆಯ ಮೂಲಕ ಇಡೀ ವಿಶ್ವವೇ ಭಾರತದತ್ತ ನೋಡುವಂತೆ (Bengaluru News) ಮಾಡಿದ್ದಾರೆ.

ಫಿಲಿಫೈನ್ಸ್‌ನಲ್ಲಿ ಆಯೋಜಿಸಲಾಗಿದ್ದ ಒಂಬತ್ತು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 17 ದೇಶಗಳ ವನಿತೆಯರು ಭಾಗವಹಿಸಿದ್ದರು. ಕಾರ್ಯಕ್ರಮವು 25 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಲೇಡಿ ಆಫ್ ದಿ ಅರ್ಥ್, 40 ವರ್ಷದೊಳಗಿನ ವಿವಾಹಿತ ಮಹಿಳೆಯರಿಗೆ ಶ್ರೀಮತಿ ಮತ್ತು 40 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿವಾಹಿತ ಮಹಿಳೆಯರಿಗೆ ಎಲೈಟ್ ಶ್ರೀಮತಿ ಎಂಬ ವಿಭಾಗಗಳೊಂದಿಗೆ ವೈವಿಧ್ಯತೆ, ಸಮರ್ಥ ಹಾಗೂ ಸಬಲೀಕರಣ ಎಂಬ ಥೀಮ್ ನಡಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಆಸ್ಟ್ರಲ್ ಪೇಜೆಂಟ್ಸ್ ಬ್ಯಾನರ್ ಅಡಿಯಲ್ಲಿ ಮಿಸೆಸ್ ಇಂಡಿಯಾ ಆಸ್ಟ್ರಲ್ ಆಗಿರುವ ಡಾ ಶೃತಿ ಬಲ್ಲಾಳ್ ಮಿಸೆಸ್ ವಿಭಾಗದಲ್ಲಿ ಮತ್ತು ಎಲೈಟ್ ಮಿಸೆಸ್ ವಿಭಾಗದಲ್ಲಿ ಪ್ರಗತಿ ಅನೂನ್ ಅವರು ಕಿರೀಟ ಮುಡಿಗೇರಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಮುತ್ತಿನ ಆಕ್ಸ್ಸರೀಸ್ ಫೋಟೋಶೂಟ್ ಅನ್ನು ಆಯೋಜಿಸಲಾಗಿತ್ತು, ನಂತರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ವೇಷಭೂಷಣಗಳ ಸ್ಪರ್ಧೆಯಲ್ಲಿ ಪ್ರಗತಿಯವರ ಉಡುಪು ಬಿಂಬಿಸಿದ್ದು ಕಮಲದ ಪರಿಶುದ್ಧತೆಯನ್ನು ಬಿಂಬಿಸುವ ಬೆಳಕಿನ ಹಬ್ಬ ದೀಪಾವಳಿ ಪ್ರದರ್ಶಿತ ವೇಷಭೂಷಣದೊಂದಿಗೆ ಡಾ. ಶೃತಿ ಮಿಂಚಿದರು. ಕಾರ್ಯಕ್ರಮದಲ್ಲಿ ಆಸ್ಟ್ರಲ್ ಪೇಜೆಂಟ್ಸ್ ಮಿಸ್ ಮತ್ತು ಮಿಸೆಸ್ ಇಂಡಿಯಾ ಆಸ್ಟ್ರಲ್ ವಿಭಾಗಗಳಲ್ಲಿ ಡಾ. ಶೃತಿ ಬಲ್ಲಾಳ್ (ಶ್ರೀಮತಿ ವಿಭಾಗ) ಮತ್ತು ಪ್ರಗತಿ ಅನೂನ್ (ಎಲೈಟ್ ಶ್ರೀಮತಿ ವಿಭಾಗ) ಇಬ್ಬರೂ ಭಾರತ ದೇಶವನ್ನು ಪ್ರತಿನಿಧಿಸಿದ್ದು, ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಸುಸ್ಥಿರತೆ ವಿಷಯದಡಿ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ವಿಜೇತರು ಸಮುದ್ರದ ದಡವನ್ನು ಸ್ವಚ್ಛಗೊಳಿಸುವುದು ಹಾಗೂ ನೃತ್ಯದ ಮೂಲಕ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಅಂತಿಮ ಸ್ಪರ್ಧೆಯು ಈಜು ಉಡುಪು, ಪರಿಸರ ಸ್ನೇಹಿ ಮತ್ತು ಸಂಜೆಯ ಗೌನ್ ವೇಷಭೂಷಣಗಳನ್ನು ಒಳಗೊಂಡಿತ್ತು. ಪರಿಸರ ಸ್ನೇಹಿ ಸುತ್ತಿನಲ್ಲಿ ಅನುಪಯುಕ್ತ ಅಥವಾ ಬಿಸಾಡಿದ ವೈದ್ಯಕೀಯ ಸಾಮಗ್ರಿಗಳಿಂದ ತಯಾರಿಸಲಾದ ಉಡುಪಿನೊಂದಿಗೆ ಶೃತಿ ಅವರು ಕಾಣಿಸಿಕೊಂಡರು. ಹಾಗೆಯೇ ಕ್ರಿಯಾಶೀಲತೆಯೊಂದಿಗೆ ಮರುಬಳಕೆಯಾದಂತಹ ಕಪ್ಪು ಉಡುಪಿನೊಂದಿಗೆ ರಾಜಸ್ಥಾನಿ ಅಲಂಕಾರಗಳ ಮೂಲಕ ಪ್ರಗತಿ ಅವರು ಕಂಗೊಳಿಸಿದರು.

ಕಾರ್ಯಕ್ರಮದ ಕುರಿತು ಶ್ರೀಮತಿ ಪ್ರತಿಭಾ ಸೌಂಶಿಮಠ್ (ಆಸ್ಟ್ರಲ್ ಪೇಜೆಂಟ್ಸ್ ಸಂಸ್ಥಾಪ ಕರು ಮತ್ತು ಮಾಜಿ ಮಿಸೆಸ್ ಏಷ್ಯಾ ಇಂಟರ್ನ್ಯಾಶನಲ್ ಫೋಟೋಜೆನಿಕ್) ಮಾತನಾಡಿ, ʼಭಾರತದ ವೈವಿಧ್ಯತೆಯ ಜತೆಗೆ ಪ್ರತಿಭೆ ಹಾಗೂ ಸುಸ್ಥಿರದೆಡೆಗಿನ ಬದ್ಧತೆಯನ್ನು ನಮ್ಮ ರೂಪದರ್ಶಿಗಳು ಪ್ರದರ್ಶಿಸಿದರು. ಮಿಸೆಸ್ ಇಂಡಿಯಾ ಕರ್ನಾಟಕ ಎಂಬ ಹೆಸರಿನೊಂದಿಗೆ ಆರಂಭವಾದ ಆಸ್ಟ್ರಲ್ ಪೇಜೆಂಟ್ಸ್ ಇಂದು ಮಿಸ್ ಮತ್ತು ಮಿಸೆಸ್ ಇಂಡಿಯಾ ಆಸ್ಟ್ರಲ್ ಎಂಬ ಹೆಸರಿನೊಂದಿಗೆ ರಾಷ್ಟ್ರೀಯ ವೇದಿಕೆಯಾಗಿ ಬೆಳೆದು ನಿಂತಿದೆ. 2025ನೇ ಸಾಲಿನಿಂದ ಆಸ್ಟ್ರಲ್ ಪೇಜೆಂಟ್‌ಗಳನ್ನು ಮಿಸ್ ಮತ್ತು ಮಿಸೆಸ್ ಇಂಡಿಯಾ ಆಸ್ಟ್ರಲ್ ಆಗಿ ಪ್ರದರ್ಶಿಸಲಾಗುತ್ತಿದ್ದು, 16–25 ವರ್ಷದೊಳಗಿನ ಅವಿವಾಹಿತ ಮಹಿಳೆಯರಿಗೆ ಮತ್ತು 25 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ವಿಭಾಗಗಳನ್ನು ಇದು ಒಳಗೊಂಡಿರುತ್ತದೆ. ಜತೆಗೆ ವಿವಾಹಿತ ಮಹಿಳೆಯರಿಗೂ ವಿಭಾಗಗಳನ್ನು ಒಳಗೊಂಡಿರುತ್ತದೆ ಎಂದರು.

ಈ ಸುದ್ದಿಯನ್ನೂ ಓದಿ | Winter Torn Jacket Fashion: ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಟೊರ್ನ್ ಜಾಕೆಟ್ಸ್

ಮೂರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ರಾಷ್ಟ್ರೀಯ ನಿರ್ದೇಶಕಿಯಾಗಿರುವ ಪ್ರತಿಭಾ ಸೌಂಶಿಮಠ್ ಅವರು ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಪೇಜೆಂಟ್, ಮಿಸ್ ಅಂಡ್ ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ ನ್ಯಾಷನಲ್ ಮತ್ತು ಮಿಸ್ ಬಿಸಿನೆಸ್ ಗ್ಲೋಬಲ್ ಪೇಜೆಂಟ್ ವಿಭಾಗಗಳನ್ನು ಹುಟ್ಟುಹಾಕಿದ್ದು, ವಿವಾಹಿತರು ಮತ್ತು ಅವಿವಾಹಿತ ಮಹಿಳೆಯರಿಗೆ ಜಾಗತಿಕ ವೇದಿಕೆಯನ್ನು ಒದಗಿಸಿಕೊಡಲು ಮುಂದಾಗಿದ್ದಾರೆ. ಪ್ರಮುಖವಾಗಿ ಈ ಸ್ಪರ್ಧೆಯು ಮದುವೆಯಾಗದ 25 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಉತ್ತಮ ಅವಕಾಶಗಳನ್ನು ಒದಗಿಸುವುದರ ಜತೆಗೆ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿ ಹೊರಹೊಮ್ಮಲಿದೆ. ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಡಾ. ಶೃತಿ ಬಲ್ಲಾಳ್ ಮತ್ತು ಪ್ರಗತಿ ಅನೂನ್ ಅವರು ಕರ್ನಾಟಕಕ್ಕೆ ಕೀರ್ತಿ ತಂದಿರುವುದರ ಜತೆಗೆ ಭಾರತದಲ್ಲಿ ವಿನೂತನ ಸಾಧನೆ ಸೃಷ್ಟಿಸಿದ್ದಾರೆ. ಹಾಗೆಯೇ ಜಾಗತಿಕ ಯಶಸ್ಸಿಗೆ ಮೂಲ ಮಂತ್ರಗಳಾದ ವೈವಿಧ್ಯತೆ, ಸುಸ್ಥಿರತೆ ಮತ್ತು ಸಬಲೀಕರಣದ ಕುರಿತಂತೆ ತಮ್ಮ ಬದ್ಧತೆಯನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.