ಬೆಂಗಳೂರು: ಬೆಂಗಳೂರು ನಗರದ ಸಿಂಧಿ ಮಹಾವಿದ್ಯಾಲಯದಲ್ಲಿ ಅಂತರ್-ಕಾಲೇಜು ಸಾಂಸ್ಕೃತಿಕ ಉತ್ಸವ ʼಕ್ರೆಸಿಂಡೋ 2024ʼ ಕ್ಕೆ ಶುಕ್ರವಾರ ಚಾಲನೆ ದೊರೆಯಿತು. ʼಕಲಾ ಸಂಗ್ರಾಮ; ಎಂಬ ಥೀಮ್‌ನೊಂದಿಗೆ ಸೃಜನಶೀಲ ಮತ್ತು ಪ್ರತಿಭಾನ್ವೇಷಣೆಯ ಉತ್ಸವ (Bengaluru News) ನಡೆಯಲಿದೆ.
ʼಕ್ರೆಸಿಂಡೋ 2024ʼ ರ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ಕಥೆಗಾರ, ಸಿನಿಮಾ ನಿರ್ಮಾಪಕ, ವನ್ಯಜೀವಿ ಛಾಯಾಚಿತ್ರಗ್ರಾಹಕ ಅಮೋಘವರ್ಷ ಮಾತನಾಡಿ, ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ಹುಲಿ ಮತ್ತು ಆನೆಗಳಂಥ ವನ್ಯಜೀವಿಗಳಿಗೆ ಕರ್ನಾಟಕವು ತವರಾಗಿದ್ದು, ಇಂಥ ವನ್ಯಸಂಪತ್ತು ಹೊಂದಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಂಧಿ ಮಹಾವಿದ್ಯಾಲಯದ ಅಧ್ಯಕ್ಷ ಆಶಿಷ್ ಅಮರ್ ಲಾಲ್, ಕಾರ್ಯದರ್ಶಿ ಕಿರಣ್ ಎಸ್. ಚಾವ್ಲಾ, ಪ್ರಾಂಶುಪಾಲೆ ಡಾ.ಎನ್. ಆಶಾ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಲಾಸಂಗ್ರಾಮ್ ತಂಡವು ಭರತನಾಟ್ಯ. ಕೂಚಿಪುಡಿ, ಯಕ್ಷಗಾನ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿತು.
ಈ ಸುದ್ದಿಯನ್ನೂ ಓದಿ | Kumbha Sambhava Movie: ʼಕುಂಭ ಸಂಭವʼ ಚಿತ್ರದಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾದ ʼಭೀಮʼ ಖ್ಯಾತಿಯ ಪ್ರಿಯ!
1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಕಳೆದ 20 ವರ್ಷಗಳಿಂದಲೂ ಸಿಂಧಿ ಮಹಾವಿದ್ಯಾಲಯವು ವಾರ್ಷಿಕ ಕಲಾ ಉತ್ಸವವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷವೂ ಬೆಂಗಳೂರಿನ ಮೂಲೆ ಮೂಲೆಗಳ ಸಾವಿರಾರು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷವೂ ಎರಡು ದಿನಗಳ ಕಾಲ ಕಲಾಸಂಗ್ರಾಮ ಥೀಮ್ ನಡಿ ಕ್ರೆಸಿಂಡೋ ಉತ್ಸವ ನಡೆಯುತ್ತಿದ್ದು, ನಗರದ 150ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಸತತ 2 ದಿನಗಳ ಕಾಲ ಸಿಂಧಿ ಕಾಲೇಜು ಆವರಣದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ಮೇಳೈಸಲಿದ್ದು, ಸಮೂಹ ನೃತ್ಯ, ಗಾಯನ, ರಂಗೋಲಿ, ಯುಗಳ ನೃತ್ಯ, ಮೆಹಂದಿ, ಸ್ಟಾರ್ಟಪ್‌ಗಳಿಗೆ ಉದ್ಯಮ ಪ್ಲಾನ್, ಚಿತ್ರಕಲೆ, ಹಗ್ಗಜಗ್ಗಾಟ, ಬೆಂಕಿರಹಿತ ಅಡುಗೆ, ಫ್ಯಾಷನ್ ಶೋ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ 2 ಲಕ್ಷ ರೂ. ಬಹುಮಾನವನ್ನೂ ವಿತರಿಸಲಾಗುತ್ತದೆ. ನವೆಂಬರ್ 23 ರಂದು ಶನಿವಾರ ಕ್ರೆಸಿಂಡೋ 2024 ರ ಸಮಾರೋಪ ಸಮಾರಂಭ ನಡೆಯಲಿದೆ.