Saturday, 5th October 2024

Bengaluru News: ಅ.6ರಂದು ಬೆಂಗಳೂರಿನ ಸೋಸಲೆ ವ್ಯಾಸರಾಜರ ಸಂಸ್ಥಾನ ಮಠದಲ್ಲಿ ನವರಾತ್ರಿ ಸಂಗೀತೋತ್ಸವ

Bengaluru News

ಬೆಂಗಳೂರು: ಶರನ್ನವರಾತ್ರಿ ಅಂಗವಾಗಿ ಬೆಂಗಳೂರಿನ (Bengaluru News) ಗಾಂಧಿ ಬಜಾರಿನ ಬೆಣ್ಣೆ ಗೋವಿಂದಪ್ಪ ಛತ್ರದಲ್ಲಿರುವ ಶ್ರೀ ಸೋಸಲೆ ವ್ಯಾಸರಾಜರ ಮಹಾ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿರುವ ಸಂಗೀತೋತ್ಸವದಲ್ಲಿ ಅ. 6ರ ಸಂಜೆ 6ಕ್ಕೆ ಮೈಸೂರಿನ ಯುವ ಪ್ರತಿಭೆ ಎ.ಆರ್. ಅಪ್ರಮೇಯ ಅವರ ಗಾಯನ ಆಯೋಜನೆಗೊಂಡಿದೆ. ಈ ಸಂದರ್ಭದಲ್ಲಿ ಅವರು ದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಪಕ್ಕವಾದ್ಯದಲ್ಲಿ ಎಚ್.ಎನ್. ರಘುನಂದನ (ವಯೋಲಿನ್) ಮತ್ತು ಕುಮಾರಿ ಜ್ಯೋತ್ಸ್ನಾ ಹೆಬ್ಬಾರ್ (ಮೃದಂಗ) ಸಹಕಾರ ನೀಡಲಿದ್ದಾರೆ.

ಯುವ- ನವ ಕಲಾವಿದರ ಪರಿಚಯ

ನಾಡಿನ ಮಹತ್ವದ ಗಾಯಕರಲ್ಲಿ ಅಗ್ರಪಂಕ್ತಿಯಲ್ಲಿರುವ ಶಿವಮೊಗ್ಗದ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅವರ ವಿದ್ಯಾರ್ಥಿ ಅಪ್ರಮೇಯ. ಹಾಡುಗಾರಿಕೆಯನ್ನು ಅನನ್ಯ ಭಾವದಿಂದ ಸ್ವೀಕರಿಸಿದ ಯುವಕ. ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದಲ್ಲಿ ಶಾಸ್ತ್ರೀಯ ಸಂಗೀತ ಸೀನಿಯರ್ ಹಂತದ ಕಲಿಕೆಯಲ್ಲಿ ಇದ್ದಾರೆ. ಶೃಂಗೇರಿ ಎಚ್.ಎಸ್. ನಾಗರಾಜ್‌ರ ಗರಡಿಯಲ್ಲಿ ವಿದುಷಿ ಗಾಯತ್ರಿ ಮಯ್ಯ ಮತ್ತು ವಿದುಷಿ ರಜನಿ ರಾಮಧ್ಯಾನಿ ಅವರ ಮಾರ್ಗದರ್ಶನವೂ ಇವರಿಗೆ ಪ್ರಾಪ್ತವಾಗಿದೆ. ಶಿವಮೊಗ್ಗ ಮೂಲದ, ಸದ್ಯ ವಿಜಯವಾಣಿ ಪತ್ರಿಕೆ ಮೈಸೂರು ಆವೃತ್ತಿ ಮುಖ್ಯ ಉಪಸಂಪಾದಕರಾಗಿರುವ ರಘುರಾಮ-ವಾರುಣಿ ಅವರ ಪುತ್ರ. ದಾಸರ ಕೀರ್ತನೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾನೆ.

ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ನಾಳೆ ʼಅಡ್ವೊಕೇಟ್ ಡೈರಿʼ ಕೃತಿ ಲೋಕಾರ್ಪಣೆ

ಜ್ಯೋತ್ಸ್ನಾ ಹೆಬ್ಬಾರ್

ಚೇತನ್ ರಾಘವೇಂದ್ರ ಮತ್ತು ಜ್ಯೋತಿ ಚೇತನ್ ಅವರ ಪುತ್ರಿ. ಬಿ ಇ (ಆರ್ಕಿಟೆಕ್ಚರ್) ಪದವಿ ಪೂರ್ಣಗೊಳಿಸಿದ್ದು, ಸದ್ಯ ಕಲಾ ಚಟುವಟಿಕೆಗಳಿಗೆ ಪೂರ್ಣಾವಧಿ ಸಮಯ ನೀಡುತ್ತಿದ್ದಾರೆ. ಕಲಾವಿದರ ಕುಟುಂಬದಲ್ಲೇ ಜನಿಸಿದ್ದರಿಂದ ಬಾಲ್ಯದಿಂದಲೇ ವೀಣೆ ಮತ್ತು ಮೃದಂಗದತ್ತ ಆಕರ್ಷಣೆ. ತಾಯಿ ಮತ್ತು ಕಲಾವಿದೆ ಜ್ಯೋತಿ ಚೇತನ್ ಅವರಲ್ಲೇ ವೀಣೆ ಅಭ್ಯಾಸ ಮಾಡಿ ಸೀನಿಯರ್ ಹಂತದ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ನಾಡಿನ ಹಿರಿಯ, ಪ್ರಖ್ಯಾತ ವಿದ್ವಾಂಸ ಎಚ್.ಎಸ್. ಸುಧೀಂದ್ರ ಅವರಲ್ಲಿ ಮೃದಂಗ ಪಾಠ ಕಲಿಯುತ್ತಿದ್ದಾರೆ. ಸಿಸಿಆರ್‌ಟಿ ಸ್ಕಾಲರ್‌ಶಿಪ್ ಮತ್ತು ಸಂಗೀತ ನೃತ್ಯ ಅಕಾಡೆಮಿ ಶಿಷ್ಯವೇತನಕ್ಕೆ ಈಕೆ ಭಾಜನರಾಗಿರುವುದು ವಿಶೇಷ.

ಎಚ್.ಎನ್. ರಘುನಂದನ

ಗುರು ಎಚ್.ಕೆ. ಸುಬ್ಬರಾವ್ ಮತ್ತು ವಿದ್ವಾನ್ ಹೊಸಹಳ್ಳಿ ವಿ. ರಘುರಾಮ್ ಅವರ ಶಿಷ್ಯ ಎಚ್.ಎನ್. ರಘುನಂದನ ಅವರು ವಯೋಲಿನ್ ಕ್ಷೇತ್ರದ ಭರವಸೆಯ ಯುವತಾರೆ. 12 ವರ್ಷದಿಂದ ಕಲಿಕೆಯಲ್ಲಿ ಪಳಗಿದ ಇವರು ಕಳೆದ ಒಂದೂವರೆ ವರ್ಷದಿಂದ ಕಛೇರಿಗಳಿಗೆ ಒಗ್ಗಿಕೊಂಡು ಸಾಧನೆಯ ಹಾದಿಯಲ್ಲಿದ್ದಾರೆ. ಗಾನಕಲಾ ಪರಿಷತ್, ಗಾಯನ ಸಮಾಜ ಸೇರಿದಂತೆ ಶಿವಮೊಗ್ಗ, ಬೆಂಗಳೂರು ಮತ್ತು ಹಾಸನದ ವಿವಿಧ ವೇದಿಕೆಗಳಲ್ಲಿ ಇವರ ಕಲಾಭಿವ್ಯಕ್ತಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈತ ಬೆಂಗಳೂರಿನ ಬಿಜಿಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ( ಸಿಎಸ್ ಆ್ಯಂಡ್ ಡಿಸೈನ್) ವಿದ್ಯಾರ್ಥಿ.

ಈ ಸುದ್ದಿಯನ್ನೂ ಓದಿ | Job Guide: ನಬಾರ್ಡ್‌ನಲ್ಲಿ ಉದ್ಯೋಗಾವಕಾಶ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಈ ಮೂವರು ಯುವ ತಾರೆಗಳು ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನದ ವೇದಿಕೆಯಲ್ಲಿ ಕಲಾ ಪ್ರೌಢಿಮೆ ಪ್ರಸ್ತುತ ಪಡಿಸುತ್ತಿರುವುದು ವಿಶೇಷದಲ್ಲಿ ವಿಶೇಷವಾಗಿದೆ.