Wednesday, 23rd October 2024

Bengaluru Rain: ರಾಜಧಾನಿಯಲ್ಲಿ ಮತ್ತೆ ಮಳೆಯಾರ್ಭಟ; ಬಿಟಿಎಂ ಲೇಔಟ್‌ನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ, ಮುಳುಗಿದ ವಾಹನಗಳು!

Bengaluru Rain

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ (Bengaluru Rain) ಬುಧವಾರವೂ ವರುಣಾರ್ಭಟ ಮುಂದುವರಿದಿದ್ದು, ಹಲವೆಡೆ ರಸ್ತೆಗಳು, ಬಡಾವಣೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರಮುಖ ರಸ್ತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಭಾರಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಇನ್ನು ಯಲಹಂಕ ಭಾಗದಲ್ಲಿ ವಿವಿಧ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಬೆನ್ನಲ್ಲೇ ಇದೀಗ ನಗರದ ಬಿಟಿಎಂ ಲೇಔಟ್‌ನಲ್ಲಿ (BTM layout) ತಗ್ಗು ಪ್ರದೇಶಗಳು ಜಲಾವೃತವಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ವಿಧಾನಸೌಧ, ಕೆ.ಆರ್.ಸರ್ಕಲ್‌, ಮೈಸೂರು ಬ್ಯಾಂಕ್ ಸರ್ಕಲ್​, ಮೆಜೆಸ್ಟಿಕ್‌, ಕೆ.ಆರ್‌.ಮಾರ್ಕೆಟ್‌, ಕಾರ್ಪೊರೇಷನ್ ಸರ್ಕಲ್​, ಶಾಂತಿನಗರ, ಡಾಲರ್ಸ್ ಕಾಲೋನಿ, ಹೆಬ್ಬಾಳ, ಸಂಜಯ್ ನಗರ, ಬಿಇಎಲ್ ರೋಡ್, ಎಂಎಸ್ ರಾಮಯ್ಯ ಆಸ್ಪತ್ರೆ, ಬಿಡಿಎಂ ಲೇಔಟ್‌ ಸೇರಿ ಹಲವೆಡೆ ಬುಧವಾರ ಸಂಜೆ ಭಾರಿ ಮಳೆಯಾಗಿದೆ. ಇದರಿಂದ ರಸ್ತೆಗಳಲ್ಲಿ ಭಾರಿ ಪ್ರಮಾಣದ ಮಳೆ ನೀರು ನಿಂತು ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಬಿಟಿಎಂ ಲೇಔಟ್‌ನಲ್ಲಿ ಭಾರಿ ಮಳೆಯಿಂದ ಹಲವು ರಸ್ತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ನೂರಾರು ವಾಹನಗಳು ಮುಳುಗಿವೆ. ಜಲಾವೃತವಾದ ರಸ್ತೆಗಳಲ್ಲಿ ತೆರಳಲು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ಈ ಸುದ್ದಿಯನ್ನೂ ಓದಿ | Diwali Bank Hoildays 2024: ಗಮನಿಸಿ; ದೀಪಾವಳಿ ಪ್ರಯುಕ್ತ ಸತತ 4 ದಿನ ಬ್ಯಾಂಕ್‌ಗಳಿಗೆ ರಜೆ: ಇಲ್ಲಿದೆ ವಿವರ

ಗುಬ್ಬಿಯಲ್ಲಿ ನಿರಂತರ ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಸಾವು

ತುಮಕೂರು: ರಾಜ್ಯದಲ್ಲಿ ವಿವಿಧೆಡೆ ಭಾರಿ ಮಳೆ (Karnataka Rain) ಸುರಿಯುತ್ತಿದ್ದು, ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡವೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿಯಲ್ಲಿ ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಹಿಳೆ ಸ್ನಾನಕ್ಕೆ ತೆರಳಿದ್ದ ವೇಳೆ ಗೋಡೆ ಕುಸಿದು ದುರಂತ ಸಂಭವಿಸಿದೆ.

ಸಹನಾ (27) ಮೃತ ಮಹಿಳೆ. ಗೋಡೆ ಕುಸಿದು ಮಣ್ಣಿನ ಅಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಸಹನಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.