ಬೆಂಗಳೂರು: ಬೆಂಗಳೂರು ಉತ್ತರ ಭಾಗದಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ (Bengaluru Rain) ಸುರಿದ ಹಿನ್ನೆಲೆಯಲ್ಲಿ ಹಲವೆಡೆ ರಸ್ತೆಗಳು ಜಲಾವೃತವಾಗಿ, ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಭಾರಿ ಮಳೆಗೆ ವ್ಯಕ್ತಿಯೊಬ್ಬರು ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ದೇವನಹಳ್ಳಿಯ ದೊಡ್ಡ ಸಾಗರದಲ್ಲಿ ನಡೆದಿದೆ.
ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ವೆಂಕಟೇಶ್ ಎಂಬಾತ ಬಚಾವ್ ಆಗಿದ್ದಾರೆ.
ಸೋಮವಾರ ಸಂಜೆ ಸುಮಾರಿಗೆ ಗಾರೆ ಕೆಲಸ ಮುಗಿಸಿಕೊಂಡು ವೆಂಕಟೇಶ್ ಎಂಬಾತ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಳೆ ನೀರಿನ ರಭಸಕ್ಕೆ ನಿಲ್ಲಲಾಗದೇ ಜಾರಿ ಚರಂಡಿಗೆ ಬಿದ್ದಿದ್ದಾರೆ. ಅರ್ಧ ಕಿಲೋ ಮೀಟರ್ ಕೊಚ್ಚಿಕೊಂಡು ಹೋಗಿದ್ದಾರೆ. ನಂತರ ಅವರನ್ನು ಗಮನಿಸಿದ ಗ್ರಾಮಸ್ಥರು ರಕ್ಷಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Karnataka Rain: ಅ.24ರವರೆಗೆ ರಾಜ್ಯದಲ್ಲಿ ಮುಂದುವರಿಯುತ್ತೆ ಮಳೆ ಅಬ್ಬರ; ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಎಚ್ಚರಿಕೆ!
ಯಲಹಂಕದ ಹಲವು ಅಪಾರ್ಟ್‌ಮೆಂಟ್‌ಗಳು ಜಲಾವೃತ, ಬೋಟ್‌ಗಳಲ್ಲಿ ಜನರ ಸ್ಥಳಾಂತರ
ಬೆಂಗಳೂರು: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ (Bengaluru Rain) ರಾಜಧಾನಿಯ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವು ಬಡಾವಣೆಗಳಿಗೆ ನೀರು ನುಗ್ಗಿ ಪ್ರವಾಹ ಸ್ಥಿತಿ ಸೃಷ್ಟಿಯಾಗಿದೆ. ಇನ್ನು ಯಲಹಂಕ ವ್ಯಾಪ್ತಿಯಲ್ಲಿ ಹಲವು ಕೆರೆಗಳು ತುಂಬಿ ಹರಿಯುತ್ತಿದ್ದು, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು, ಬೋಟ್‌ಗಳ ಮೂಲಕ ಜನರನ್ನು ಸ್ಥಳಾಂತರಿಸುತ್ತಿದ್ದಾರೆ.
ಯಲಹಂಕ, ಕೊಡಿಗೇಹಳ್ಳಿ, ಟಾಟಾ ನಗರ, ಭದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಹೆಬ್ಬಾಳ ಹಾಗೂ ದೊಡ್ಡಬೊಮ್ಮಸಂದ್ರ ಕೆರೆ ಸುತ್ತಮುತ್ತಲ ಪ್ರದೇಶಗಳು ಜಲಾವೃತವಾಗಿರುವುದರಿಂದ ಜನ ಸಂಕಷ್ಟ ಅನುಭವಿಸುವಂತಾಗಿದೆ.
ಅಪಾರ್ಟ್‌ಮೆಂಟ್‌ನಲ್ಲಿ ಮುಳುಗಿದ ನೂರಾರು ವಾಹನ
ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಜಲಾವೃತವಾಗಿರುವುದರಿಂದ ಸುಮಾರು 3000ಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದು, ಪಾರ್ಕಿಂಗ್ ಸ್ಥಳದಲ್ಲಿದ್ದ ನೂರಾರು ಬೈಕ್, ಕಾರುಗಳು ಮುಳುಗಿವೆ.
ಮಳೆ ಹಾನಿ ಪರಿಶೀಲಿಸಿದ ಸಚಿವ ಕೃಷ್ಣಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ ಅವರು ಟಾಟಾ ನಗರ, ಭದ್ರಪ್ಪ ಲೇಔಟ್‌ಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದ್ದು, ‘ದಿಢೀರ್ ಮೋಡ ಕವಿದ ಕಾರಣ ದೊಡ್ಡಬೊಮ್ಮಸದ್ರ ಕೆರೆಯು 18 ವರ್ಷಗಳಲ್ಲೇ ಮೊದಲ ಬಾರಿಗೆ ಗರಿಷ್ಠ ಸಾಮರ್ಥ್ಯವನ್ನು ತಲುಪಿದ್ದು, ಚರಂಡಿ ಹಾಗೂ ರಸ್ತೆಗಳಿಗೆ ನೀರು ಹರಿದು ಪ್ರವಾಹ ಉಂಟಾಗಿದೆ. ಜಿಕೆವಿಕೆ ಪ್ರದೇಶ ಮತ್ತು ವಿದ್ಯಾರಣ್ಯಪುರದಲ್ಲಿ ಭಾರಿ ಮಳೆ ಕಾರಣ ದೊಡ್ಡಬೊಮ್ಮಸದ್ರ ಕೆರೆಗೆ ನೀರು ನುಗ್ಗಿ ಪ್ರವಾಹ ಉಂಟಾಗಿದ್ದು, ಜನರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿಸಿದ್ದಾರೆ.
Service road from kogilu junction towards IAF is closed to enable rescue pic.twitter.com/eGb1j05D31
— ACP Traffic Northeast Pradeep (@acpnortheasttr) October 22, 2024
ಯಲಹಂಕ ವಲಯ ವ್ಯಾಪ್ತಿಯ ಕೆಲ ಪ್ರದೇಶಗಳು ಜಲಾವೃತವಾಗಿದ್ದರಿಂದ ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿರುವ ಅವರು, ಭಾರಿ ಮಳೆಯಿಂದಾಗಿ ಜಲಾವೃತವಾಗಿರುವ ಪ್ರದೇಶಗಳಲ್ಲಿ ಕೂಡಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚು ಸಮಸ್ಯೆಯಿರುವ ಕಡೆ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Karnataka Rain: ಮುಂದಿನ 3 ದಿನ ಬೆಂಗಳೂರು ಸೇರಿ ಹಲವೆಡೆ ಅಬ್ಬರಿಸಲಿದೆ ಹಿಂಗಾರು ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಮಲ್ಲೇಶ್ವರದಲ್ಲಿ ನೆಲಕ್ಕುರುಳಿದ ಬೃಹತ್ ಮರ; ಒಬ್ಬರಿಗೆ ಗಾಯ
ಮಲ್ಲೇಶ್ವರದ ಹಳ್ಳಿಮನೆ ಹೊಟೆಲ್ ಎದುರಿನ ಬೃಹತ್ ಮರವೊಂದು ಬುಡ ಸಮೇತ ಉರುಳಿ ಬಿದ್ದಿದ್ದರಿಂದ ಒಂದು ಆಟೋ, ಕೆಲವು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಹೊಟೇಲ್‌ನ ಸಿಬ್ಬಂದಿಯೊಬ್ಬರಿಗೆ ಗಾಯವಾಗಿದೆ. ಇನ್ನು ಯಲಹಂಕ ಸಮೀಪದ ಕೋಗಿಲು ಕೆರೆ ಉಕ್ಕಿ ಹರಿಯುತ್ತಿರುವುದರಿಂದ ಕೋಗಿಲು ಜಂಕ್ಷನ್ ಜಲಾವೃತವಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.