ಬೆಂಗಳೂರು: ಕೆಲವು ದಿನಗಳಿಂದ ಮರೆಯಾಗಿದ್ದ ಮಳೆ ಮತ್ತೆ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದೆ (Bengaluru Rains). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡು-ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಲವೆಡೆ ಅವಾಂತರ ಎಬ್ಬಿಸಿದೆ. ಬಂಗಾಳಕೊಲ್ಲಿಯ ಟರ್ಫ್ ಎಫೆಕ್ಟ್ನಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಶನಿವಾರ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ರಸ್ತೆಗಳು ಹೊಳೆಯಂತಾಗಿವೆ. ನಗರದಲ್ಲಿ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದೆ.
ಮಳೆ ಅವಾಂತರ
ಮಳೆಗೆ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಜಲಾವೃತವಾಗಿದೆ. ಇಲ್ಲಿನ 603 ಫ್ಲಾಟ್ಗಳಲ್ಲಿ ಸುಮಾರು 2 ಸಾವಿರ ನಿವಾಸಿಗಳಿದ್ದು, ಅವರನ್ನು ಟ್ರ್ಯಾಕ್ಟರ್ ಮೂಲಕ ರಕ್ಷಿಸಲಾಗಿದೆ. ಇಲ್ಲಿ ಪಾರ್ಕ್ ಮಾಡಲಾಗಿದ್ದ 80ಕ್ಕೂ ಹೆಚ್ಚು ಕಾರು, 100ಕ್ಕೂ ಹೆಚ್ಚು ಬೈಕ್ಗಳು ನೀರಿನಲ್ಲಿ ಮುಳುಗಿವೆ. ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ, ನೀರನ್ನ ಪೂರೈಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಬಿನ್ನಿಪೇಟೆಯ ಬಿನ್ನಿ ಇಟಾ ಮಾಲ್ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದಿದೆ. ಇದರಿಂದ ವಿದ್ಯುತ್ ಕಂಬ ವಾಲಿದ್ದು, 10ಕ್ಕೂ ಹೆಚ್ಚು ಬೈಕ್ಗಳು ಜಖಂ ಆಗಿವೆ. ಯಲಹಂಕದ ಅಟ್ಟೂರಿನಲ್ಲಿ ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಟಿ.ದಾಸರಹಳ್ಳಿಯ ಮಹೇಶ್ವರಿನಗರ, ಬೆಂಗಳೂರು-ಹೊಸೂರು ಹೆದ್ದಾರಿ, ಸರ್ಜಾಪುರ ಮುಖ್ಯರಸ್ತೆ, ಮಂಜುನಾಥನಗರ, ಬಸವೇಶ್ವರನಗರದಲ್ಲಿಯೂ ಮಳೆ ಅನಾಹುತ ಉಂಟು ಮಾಡಿದೆ. ಹಲವೆಡೆ ಪ್ರಯಾಣಿಕರಿಗೆ ಟ್ರಾಫಿಕ್ ಬಿಸಿಯೂ ತಟ್ಟಿದೆ.
ಇನ್ನೊಂದು ವಾರ ಧಾರಾಕಾರ ಮಳೆ
ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೊಂದು ವಾರ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅ. 6ರಿಂದ 12ವರೆಗೆ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಅ. 7ರಿಂದ 9ರವೆರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿ ಯೆಲ್ಲೊ ಅಲರ್ಟ್ ಘೋಷಿಸಿದೆ.
ಇನ್ನು ಅ. 6ರಂದು ರಾಮನಗರ, ಹಾಸನ, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಅ. 6ರಂದು ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ಕೊಡಗು, ಮೈಸೂರು ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗಲಿದೆ. ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಹವಾಮಾನ ಅ. 8ರವರೆಗೆ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Scholarship: ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬಿಸಿಲನಾಡಿಗೆ ತಂಪೆರೆದ ಮಳೆ
ಬಿಸಿಲಿನಿಂದ ಕಂಗೆಟ್ಟಿದ್ದ ಗಣಿಜಿಲ್ಲೆ ಬಳ್ಳಾರಿಯ ಮಂದಿ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಶುಕ್ರವಾರ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಳ್ಳ, ಕೊಳ್ಳಗಳು ತುಂಬಿ ಹರಿದಿವೆ. ಕೆಲವೆಡೆ ನೀರು ನುಗ್ಗಿ ರಸ್ತೆ ಸಂಪರ್ಕ ಕಡಿತಗೊಂಡು ಅವಾಂತವೂ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಹಿಂಗಾರು ರಾಜ್ಯದಲ್ಲಿ ಭರ್ಜರಿಯಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದು, ಬೆಳೆ ಕಟಾವು ಮಾಡಲು ಮುಂದಾದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.