ಬೆಂಗಳೂರು: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ 5 ಸ್ಥಳ ಅಂತಿಮ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ಒಂದು ಸ್ಥಳ ಅಂತಿಮಗೊಳಿಸಿ ಘೋಷಣೆ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಹತ್ತ್ವದ ಸಭೆಯ ನಂತರ ಮಾತನಾಡಿದ ಎಂ.ಬಿ. ಪಾಟೀಲ್ ಅವರು, ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಸಾರ್ವಜನಿಕರು ಮತ್ತು ಉದ್ಯಮಗಳಿಗೆ ಇನ್ನೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ. ಇದಕ್ಕಾಗಿ ಸರ್ಕಾರವು ಐದು ಸ್ಥಳಗಳನ್ನು ಗುರುತಿಸಿದೆ. ಆದರೆ ಇವುಗಳ ಪೈಕಿ ಯಾವುದನ್ನೂ ಅಂತಿಮ ಮಾಡಿಲ್ಲ. ಈ ಬಗ್ಗೆ ಇನ್ನೊಂದು ವಾರದಲ್ಲಿ ಸಭೆ ಸೇರಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಈಗಾಗಲೇ ತೀರ್ಮಾನಿಸಲಾಗಿದೆ ಎನ್ನುವ ವರದಿಗಳಿಗೆ ಆಧಾರವಿಲ್ಲ. ದಾಬಸ್‌ಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ ಒಟ್ಟು ಐದು ಸ್ಥಳಗಳನ್ನು ನಾವು ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ಇವತ್ತು ಇನ್ನೂ ಒಂದು ಸ್ಥಳದ ಬಗ್ಗೆಯೂ ಚರ್ಚೆ ಆಗಿದೆ. ಇವುಗಳ ಬಗ್ಗೆ ವಸ್ತುಸ್ಥಿತಿ ಆಧರಿಸಿ ಮತ್ತು ಸಾಧಕ-ಬಾಧಕಗಳನ್ನು ಗಮನಿಸಿ, ವರದಿ ಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಮತ್ತೊಂದು ಸುತ್ತು ಸಭೆ ಸೇರಿ, ಸ್ಥಳವನ್ನು ಬಹಿರಂಗ ಮಾಡಲಾಗುವುದು ಎಂದು ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Money laundering: ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರಿ ಅಕ್ರಮ; ಸಿಇಒ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್
ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ ಮಾಡುವಲ್ಲಿ ಯಾರಿಗೂ ರಾಜಕೀಯ ಹಿತಾಸಕ್ತಿಗಳೇನಿಲ್ಲ. ಬೆಂಗಳೂರಿನ ಜನತೆಗೆ ಮತ್ತು ಉದ್ಯಮಿಗಳ ಅನುಕೂಲವಷ್ಟೇ ಇಲ್ಲಿ ಮುಖ್ಯ. ಇದರಿಂದ ನಮ್ಮ ಆರ್ಥಿಕ ಬೆಳವಣಿಗೆಗೆ ಒಳ್ಳೆಯ ಕೊಡುಗೆ ಬರಬೇಕು. ಇದರ ಜೊತೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಅಂತಿಮವಾಗಿ ಬೆಂಗಳೂರು ನಗರವು ಇನ್ನೊಂದು ಸ್ತರಕ್ಕೆ ಏರಬೇಕು ಎನ್ನುವುದಷ್ಟೇ ಸರ್ಕಾರದ ಗುರಿಯಾಗಿದೆ. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮಗೆ ಸ್ಥಳಾವಕಾಶಕ್ಕೇನೂ ಕೊರತೆ ಇಲ್ಲ. ಬೆಂಗಳೂರಿನ ಸುತ್ತಮುತ್ತಲೂ ಜಾಗವಿದ್ದು, ಇದರಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.