Tuesday, 19th November 2024

Bengaluru Tech Summit 2024: ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ ‘ಜಾಗತಿಕ ನಾವೀನ್ಯತಾ ಜಿಲ್ಲೆ’ ಸ್ಥಾಪನೆ: ಸಿಎಂ ಘೋಷಣೆ

Bengaluru Tech Summit 2024

ಬೆಂಗಳೂರು: ಭಾರತದಲ್ಲಿ ಮೊದಲ ಗ್ಲೋಬಲ್ ಕೇಪಬಿಲಿಟಿ ಸೆಂಟರ್ ನೀತಿಯನ್ನು (Global Capability Centres (GCC) Policy) ಕರ್ನಾಟಕ ಜಾರಿಗೆ ತಂದಿದ್ದು, ಈ ಕೇಂದ್ರಗಳನ್ನು ಸಶಕ್ತಗೊಳಿಸಲು ಉದ್ದೇಶಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಮೂರು ಜಾಗತಿಕ ನಾವೀನ್ಯತಾ ಜಿಲ್ಲೆಗಳನ್ನು (Global innovation districts) ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಜಿಸಿಸಿಗಳನ್ನು (Bengaluru Tech Summit 2024) ಸ್ಥಾಪಿಸಲು ಇವು ಮೀಸಲಾಗಿರುತ್ತವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಟೆಕ್ ಸಮ್ಮಿಟ್ 2024ರಲ್ಲಿ ಮಾತನಾಡಿದ ಸಿಎಂ ಅವರು, ಬೆಂಗಳೂರು ಜಾಗತಿಕ ನಾವೀನ್ಯತಾ ಜಿಲ್ಲೆಯು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರದ (KWIN City) ಭಾಗವಾಗಿರಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಅಂತರದಲ್ಲಿದ್ದು, ನಾವೀನ್ಯತೆ ಮತ್ತು ಸಂಶೋಧನೆಗೆ ಜಾಗತಿಕ ಕೇಂದ್ರವಾಗಿ ಪರಿಣಮಿಸಲಿದೆ ಎಂದು ಹೇಳಿದರು.

ಎಂಜಿನಿಯರಿಂಗ್ ಪ್ರತಿಭೆ ಮತ್ತು ಜಾಗತಿಕವಾಗಿ ಅತ್ಯಧಿಕ ಎಐ ವೃತ್ತಿಪರರನ್ನು ಹೊಂದಿರುವ ಕರ್ನಾಟಕ ಜಿಸಿಸಿಗಳಿಗೆ ಅತಿ ಪ್ರಿಯವಾದ ಗಮ್ಯವಾಗಿದೆ. ಎನ್‌ಐಪಿಯುಎನ್‌ಎ ಕರ್ನಾಟಕದಡಿಯಲ್ಲಿ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವ ಕಾರ್ಮಿಕಪಡೆಯನ್ನು ತಯಾರು ಮಾಡಲು ನಾವು ಕೈಗೊಂಡ ಯೋಜನೆಗಳು ಇನ್ನಷ್ಟು ಬಲಪಡಿಸಲಿವೆ. ಈಗ ತಾನೇ ಮೈಕ್ರೋ ಸಾಫ್ಟ್, ಇಂಟೆಲ್ , ಆಕ್ಸೆಂಚರ್ , ಐ.ಬಿ.ಎಂ ಮತ್ತು ಬಿ ಎಫ್ ಎಸ್ ಕಾಂಸಾರ್ಟಿಯಂ ಜತೆಗೆ ಸಹಿ ಹಾಕಲಾದ ಐದು ಒಪ್ಪಂದಗಳು ಕರ್ನಾಟಕದ ಒಂದು ಲಕ್ಷ ವ್ಯಕ್ತಿಗಳನ್ನು ಕೌಶಲಯುಕ್ತಗೊಳಿಸಲಿದೆ ಎಂದು ತಿಳಿಸಿದರು.

ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್
ಮೈಸೂರು ಬಳಿಯ ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (EMC) ಅನ್ನು ಸ್ಥಾಪಿಸಲಾಗುತ್ತದೆ. ಇದು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕದ ಪಾತ್ರವನ್ನು ಸಧೃಢಗೊಳಿಸುತ್ತದೆಯಲ್ಲದೆ, ಉದ್ಯೋಗಗಳನ್ನು ಸೃಷ್ಟಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲಿದೆ ಎಂದು ತಿಳಿಸಿದರು.

ಇನ್ನು ಮಂಗಳೂರಿನ ಫಿನ್ ಟೆಕ್ ಲೀಡರ್‌ಶಿಪ್‌ನಿಂದ ಹುಬ್ಬಳ್ಳಿ ಧಾರವಾಡದ ಇವಿ ಪ್ರಗತಿ ಮತ್ತು ಡ್ರೋನ್‌ಗಳು ಹಾಗೂ ಮೈಸೂರು ಪಿಸಿಬಿ ಕ್ಲಸ್ಟರ್ ಆಗುವವರೆಗೆ ಕ್ಲಸ್ಟರ್ ಆಧಾರಿತ ಅನು ಸಂಧಾನದ ಮೂಲಕ ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಸಾಧಿಸಲಾಗುತ್ತಿದೆ. ಬೆಂಗಳೂರಿನ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುತ್ತಲೇ ಪ್ರಾದೇಶಿಕ ಬಲವನ್ನು ಸಜ್ಜುಗೊಳಿಸಲು ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಸೂಕ್ತ ನೀತಿ ಮತ್ತು ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ.

ಟೆಕ್ ಆಧಾರಿತ ವಲಯಗಳನ್ನು ಉತ್ತೇಜಿಸಲು ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯದ ಮೇಲೆ ನಮ್ಮ ಸರ್ಕಾರವು ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಗ್ರಾಮೀಣ ಸಂಪರ್ಕಕ್ಕಾಗಿ ‘ನಮ್ಮ ಗ್ರಾಮ ನಮ್ಮ ಯೋಜನೆ ‘ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳು ಸಂಪರ್ಕ ಮತ್ತು ಆರ್ಥಿಕ ಅವಕಾಶಗಳನ್ನು ಕರ್ನಾಟಕದಾದ್ಯಂತ ವೃದ್ಧಿಸಿದೆ.

20ನೇ ಶತಮಾನದ ಆರಂಭದಲ್ಲಿ ಬೆಂಗಳೂರು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಯ ಕೇಂದ್ರವಾಗಿ ಬೆಳೆಯಿತು. ತನ್ಮೂಲಕ ಕೈಗಾರಿಕಾ ಬೆಳವಣಿಗೆಗೆ ಇಂಬು ನೀಡಿತು. 2000 ಇಸವಿಯ ಆರಂಭದಲ್ಲಿ ಎಸ್.ಎಂ.ಕೃಷ್ಣ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿ ಪಾರ್ಕ್ ಪ್ರಾರಂಭಿಸುವ ಮೂಲಕ ಬೆಂಗಳೂರು ಪರಿವರ್ತನೆಯ ಕಡೆಗೆ ಹೊರಳಿಕೊಂಡಿತು. ಈ ಮೂಲಕ ನಗರದ ಜಾಗತಿಕ ಟೆಕ್ ಎಂಬ ಪ್ರಖ್ಯಾತಿ ಪಡೆಯಲು ತಳಪಾಯ ಹಾಕಲಾಯಿತು ಎಂದು ಹೇಳಿದರು.

ಸಾಫ್ಟ್ ವೇರ್, ಬಯೋ ಟೆಕ್ನಾಲಜಿ, ಏರೋಸ್ಪೇಸ್ ಹಾಗೂ ಅಭಿವೃದ್ಧಿಗೊಂಡ ಉತ್ಪಾದನೆಯಲ್ಲಿ ತನ್ನ ಪ್ರಭಾವಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ವಿಶ್ವದಾದ್ಯಂತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂದು ತನ್ನನ್ನು ಸ್ಥಾಪಿಸಿಕೊಂಡಿದೆ. ಐ.ಟಿ, ಡೀಪ್ ಟೆಕ್, ಬಯೋ ಟೆಕ್ನಾಲಜಿ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿಯನ್ನು ರಾಜ್ಯದ ವ್ಯಾಪಕ ಪ್ರತಿಭೆ, ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್ ಅಪ್ ಪರಿಸರ ಮತ್ತು ಸದೃಢವಾದ ಮೂಲಸೌಕರ್ಯ ವ್ಯವಸ್ಥೆ ಉತ್ತೇಜಿಸಿದೆ ಎಂದು ತಿಳಿಸಿದರು.

    ಬಿಯಾಂಡ್ ಬೆಂಗಳೂರು ಕಾರ್ಯಕ್ರಮಗಳ ಮೂಲಕ ಬೆಳವಣಿಗೆಯ ಸೌಲಭ್ಯಗಳನ್ನು ಟೆಕ್ ವಲಯದಿಂದಾಚೆಗೂ ಕೊಂಡೊಯ್ಯುವುದರಲ್ಲಿ ನಮಗೆ ನಂಬಿಕೆಯಿದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ತಂತ್ರಜ್ಞಾನ, ವಿದ್ಯಾರ್ಥಿಗಳಿಗೆ ಇ – ಶಿಕ್ಷಣದ ಸುಧಾರಣೆ ಮತ್ತು ಎಲ್ಲಾ ನಾಗರಿಕ ಸೇವೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. 2022ರಿಂದ 2023 ರವರೆಗೆ 18.2% ಏರಿಕೆಯನ್ನು ಕಂಡಿರುವ ಕರ್ನಾಟಕದ ಸ್ಟಾರ್ಟಪ್ ಪರಿಸರ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಒಟ್ಟು 3,036 ಸ್ಟಾರ್ಟಪ್‌ಗಳನ್ನು ಹೊಂದಿರುವ ಕರ್ನಾಟಕ ಭಾರತದ ಒಟ್ಟು ಸ್ಟಾರ್ಟಪ್‌ಗಳಲ್ಲಿ 8.7% ಸ್ಟಾರ್ಟಪ್‌ಗಳನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಈ ಯಶಸ್ಸು ಉದ್ಯಮಿಗಳಿಗೆ ನಮ್ಮ ಬೆಂಬಲ ಮತ್ತು ವೈವಿಧ್ಯಮಯ ಅವಕಾಶಗಳನ್ನು ಬಿಂಬಿಸುತ್ತದೆ ಎಂದು ತಿಳಿಸಿದರು.

    ಈ ಸುದ್ದಿಯನ್ನೂ ಓದಿ | Stock Market: ಕೊನೆಗೂ ಸೆನ್ಸೆಕ್ಸ್‌, ನಿಫ್ಟಿ ಕುಸಿತಕ್ಕೆ ಬ್ರೇಕ್‌, ಎನ್‌ಟಿಪಿಸಿ ಗ್ರೀನ್‌ ಎನರ್ಜಿ ಐಪಿಒ ಶುರು

    ಇಂಡಿಯನ್ ವೆಂಚರ್ ಮತ್ತು ಆಲ್ಟರ್ನೇಟ್ ಕ್ಯಾಪಿಟಲ್ ಅಸೋಸಿಯೇಷನ್ (IVCA) ನೊಂದಿನ ನಮ್ಮ ಸಹಯೋಗವು 100 ಧನಸಹಾಯ ಒದಗಿಸುವ ಸಂಸ್ಥೆಗಳೊಂದಿಗೆ 200 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳನ್ನು ಜೋಡಿಸಿದ್ದು , ಬಂಡವಾಳ, ಮಾರ್ಗದರ್ಶನ ಮತ್ತು ಬೆಳವಣಿಗೆಯ ಅವಕಾಶಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.