ಬೆಂಗಳೂರು: ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2024 (Bengaluru Tech Summit 2024) ಇದೇ 19ರಿಂದ 21ರವರೆಗೆ ನಡೆಯಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ನವೋದ್ಯಮಗಳು ಮತ್ತು ಜಾಗತಿಕ ಮಟ್ಟದ ಹೂಡಿಕೆದಾರರನ್ನು ಒಂದೇ ವೇದಿಕೆಯಲ್ಲಿ ತರಲು ಈ ಶೃಂಗಸಭೆ ಆಯೋಜಿಸಲಾಗಿದೆ. ಆಸ್ಟ್ರೇಲಿಯ, ಬ್ರಿಟನ್, ಫ್ರಾನ್ಸ್, ಆಸ್ಟ್ರಿಯ, ಡೆನ್ಮಾರ್ಕ್, ಫಿನ್ಲೆಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಡ್ಜರ್ಲೆಂಡ್, ಇಸ್ರೇಲ್ ಮತ್ತು ಅಮೆರಿಕದ ಸಹಯೋಗದಲ್ಲಿ ಶೃಂಗಸಭೆ ನಡೆಯಲಿದೆ. ಈ ದೇಶಗಳ ನಿಯೋಗಗಳು ಭಾಗಿಯಾಗಲಿವೆ ಎಂದು ಖರ್ಗೆಯವರು ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಜರ್ಮನಿಯ ಆರ್ಥಿಕ ಇಲಾಖೆಯ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಮೂರು ದಿನಗಳ ಶೃಂಗಸಭೆಯಲ್ಲಿ ನವೋದ್ಯಮಗಳಿಗೆ ಸಂಬಂಧಿಸಿದಂತೆ ಹಲವು ವಿಚಾರಗೋಷ್ಠಿಗಳು ನಡೆಯಲಿವೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಶೃಂಗಸಭೆಯಲ್ಲಿ 118 ನವೋದ್ಯಮಗಳು ಭಾಗಿಯಾಗಲಿವೆ. 50ಕ್ಕೂ ಅಧಿಕ ಜಾಗತಿಕ ಹೂಡಿಕೆದಾರರು ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಶಕ್ತಿ ಯೋಜನೆಯಡಿ ಗಂಡು ಮಕ್ಕಳಿಗೂ ಉಚಿತ ಪ್ರಯಾಣ: ಡಿಕೆಶಿ
ಬೆಂಗಳೂರು : ಈಗಾಗಲೇ ಕಾಂಗ್ರೆಸ್ (Congress) ಸರ್ಕಾರ ಶಕ್ತಿ ಯೋಜನೆಯ (Shakti scheme) ಅಡಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿದೆ. ಇದೀಗ ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡು ಮಕ್ಕಳಿಗೂ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದೆ ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DCM DK Shivakumar) ಭರವಸೆ ನೀಡಿದ್ದಾರೆ.
ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ 135ನೇ ಜಯಂತಿ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಿದ್ದ ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳೊಂದಿಗಿನ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉಪಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.
ನೀಲಸಂದ್ರದ ಬಿಬಿಎಂಪಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಚರಣ್, ‘ನಿಮ್ಮ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೀರಿ. ಅದರಲ್ಲಿ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ಉಚಿತ ಸಂಚಾರಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದ್ದೀರಿ. ಇದರಿಂದ ನಮ್ಮ ಅಮ್ಮ, ಅಕ್ಕ, ತಂಗಿಯರು, ಸ್ನೇಹಿತೆ ಯರಿಗೆ ಅನುಕೂಲ ಆಗುತ್ತಿದೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ಲವೇ? ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಅವರು, ನಿಮ್ಮ ತಾಯಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ಅನ್ನಭಾಗ್ಯದಡಿ 10 ಕೇಜಿ ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್, ಎಲ್ಲ ಹೆಣ್ಣು ಮಕ್ಕಳಿಗೂ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗುತ್ತಿದೆ. ಈಗ ನೀನು ಕೇಳಿರುವ ಪ್ರಶ್ನೆಗೆ, ಶಕ್ತಿ ಯೋಜನೆಯಡಿ ಒಂದು ವಯೋಮಾನದ ವರೆಗಿನ ಗಂಡು ಮಕ್ಕಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಯೋಚಿಸಿ ಮುಂದೆ ಕ್ರಮ ವಹಿಸಲಾಗುವುದು ಎಂದರು.
ಇದನ್ನೂ ಓದಿ: Covid Scam: ಕೋವಿಡ್ ಅಕ್ರಮ ತನಿಖೆಗೆ ಎಸ್‌ಐಟಿ ರಚನೆ: ಬಿಎಸ್‌ವೈ, ಶ್ರೀರಾಮುಲುಗೆ ರಾಜ್ಯ ಸರ್ಕಾರ ಶಾಕ್