Saturday, 14th December 2024

Bhairathi Ranagal: ಶಿವಣ್ಣ ಅಭಿನಯದ ʼಭೈರತಿ ರಣಗಲ್ʼ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್‌

Bhairathi Ranagal

ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿನಯದ ʼಭೈರತಿ ರಣಗಲ್ʼ (Bhairathi Ranagal) ಚಿತ್ರದ ʼಕಾವಲಿಗʼ ಲಿರಿಕಲ್ ಸಾಂಗ್ ಸೋಮವಾರ ಬಿಡುಗಡೆಯಾಗಿದೆ. ನವೆಂಬರ್‌ 15ರಂದು ಕನ್ನಡ ಸೇರಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಈ ಚಿತ್ರದ ಟೈಟಲ್​ ಸಾಂಗ್​ ಇತ್ತೀಚೆಗೆ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಲಿರಿಕಲ್ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಗರಿಗೆದರಿ ಹೆದರಿಸುವ ವಿಧಿಯನ್ನೇ ಅಡಗಿಸಲು! ಕಂಕಣದಿ ನಿಂತವನು ಯಾರಿವನು?, ‘ಮಾಯದಿರೋ ಮನದ ಗಾಯಕೆ, ಮಮತೆ ಮದ್ದು ಹಚ್ಚೊ ಸೇವಕ’ ಎಂಬ ಸಾಲುಗಳಿರುವ ಕಾವಲಿಗ ಹಾಡಿಗೆ ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ನಿರ್ದೇಶಕ ನರ್ತನ್ ಹಾಗೂ ಶಿವಣ್ಣ ಅವರ ಕಾಂಬಿನೇಶನ್‌ನಲ್ಲಿ ಬಂದಿದ್ದ ʼಮಫ್ತಿʼ ಚಿತ್ರದ ಪ್ರೀಕ್ವೆಲ್ ಆಗಿರುವ ʼಭೈರತಿ ರಣಗಲ್ʼ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Singham Again Trailer: ಬಹುನಿರೀಕ್ಷಿತ ಸಿಂಘಂ ಅಗೇನ್ ಸಿನಿಮಾದ ಟ್ರೇಲರ್ ಬಿಡುಗಡೆ: 5 ನಿಮಿಷದ ವಿಡಿಯೋದಲ್ಲಿ ರಿವೀಲ್ ಆಯ್ತು ಸ್ಟೋರಿ

‘ಗೀತಾ ಪಿಕ್ಚರ್ಸ್​’ ಮೂಲಕ ಗೀತಾ ಶಿವರಾಜ್​ಕುಮಾರ್​ ಅವರು ‘ಭೈರತಿ ರಣಗಲ್​’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ರವಿ ಬಸ್ರೂರ್‌ ಅವರ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ‌ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ ʼಭೈರತಿ ರಣಗಲ್ʼ ಚಿತ್ರಕ್ಕಿದೆ.