Wednesday, 20th November 2024

Bhairathi Ranagal Movie: ʼಭೈರತಿ ರಣಗಲ್ʼ ಚಿತ್ರದ ಸಕ್ಸೆಸ್‌ ಮೀಟ್‌; ಮಫ್ತಿ 2 ಚಿತ್ರದ ಸುಳಿವು ನೀಡಿದ ಶಿವಣ್ಣ!

Bhairathi Ranagal Movie

ಬೆಂಗಳೂರು: ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ, ನರ್ತನ್ ನಿರ್ದೇಶನದಲ್ಲಿ ಶಿವರಾಜಕುಮಾರ್ (Shiva Rajkumar) ನಾಯಕರಾಗಿ ನಟಿಸಿರುವ ‘ಭೈರತಿ ರಣಗಲ್ʼ ಚಿತ್ರ (Bhairathi Ranagal Movie) ಕಳೆದ ನವೆಂಬರ್ 15 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ʼಮಫ್ತಿʼ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರವನ್ನು ಕನ್ನಡ ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಬಂದು ಜನರು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಕನ್ನಡ ಚಿತ್ರಗಳಿಗೆ ಜನರು ಬರುತ್ತಿಲ್ಲ ಎಂಬ ಮಾತನ್ನು ʼಭೈರತಿ ರಣಗಲ್ʼ ಚಿತ್ರ ದೂರ ಮಾಡಿದೆ. ಶಿವರಾಜಕುಮಾರ್ ಅವರ ಅದ್ಭುತ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್‌ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ʼಮಫ್ತಿ 2ʼ ಮಾಡಬೇಕೆಂಬುದು ಅಭಿಮಾನಿಗಳ ಆಸೆ

ʼಮಫ್ತಿʼ ಚಿತ್ರದಲ್ಲಿ ನನ್ನ ʼಭೈರತಿ ರಣಗಲ್ʼ ಪಾತ್ರವನ್ನು ನೀವು ಇಷ್ಟಪಟ್ಟಿದ್ದಿರಿ. ಆದರೆ ʼಭೈರತಿ ರಣಗಲ್ʼ ಚಿತ್ರದ ರಣಗಲ್ ಪಾತ್ರವನ್ನು ನೀವು ಹೃದಯಕ್ಕೆ ತೆಗೆದುಕೊಂಡಿದ್ದೀರ. ನಿಮಗೆ ತುಂಬು ಹೃದಯದ ಧನ್ಯವಾದ ಎಂದು ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿ ಮಾತನಾಡಿದ ಶಿವರಾಜಕುಮಾರ್, ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಎರಡನೇ ಚಿತ್ರವಿದು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದಕ್ಕೆ ಈ ಚಿತ್ರ ಉದಾಹರಣೆ. ಈ ಯಶಸ್ಸು ನನ್ನೊಬ್ಬನದಲ್ಲ. ಇಡೀ ತಂಡದು. ಮುಂದೆ ʼಮಫ್ತಿ 2ʼ ಮಾಡಬೇಕೆಂಬುದು ಅಭಿಮಾನಿಗಳ ಆಸೆ. ಖಂಡಿತ ಮಾಡುತ್ತೇನೆ. ಆದರೆ ಶೀರ್ಷಿಕೆ ʼಮಫ್ತಿ 2ʼ ಅಂತ ಇರುವುದಿಲ್ಲ. ಸದ್ಯದಲ್ಲೇ ಆ ಚಿತ್ರದ ಶೀರ್ಷಿಕೆಯನ್ನು ತಿಳಿಸುತ್ತೇನೆ ಎಂದರು.

ಅಪ್ಪಾಜಿ ಅವರು ಹೇಳಿದ ಹಾಗೆ ಈ ಯಶಸ್ಸಿಗೆ ಮುಖ್ಯ ಕಾರಣ ಅಭಿಮಾನಿ ದೇವರುಗಳು. ಅವರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ ಎಂದು ಮಾತು ಆರಂಭಿಸಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್, ನರ್ತನ್ ಅವರು ಬಂದು ಈ ಚಿತ್ರದ ಕಥೆ ಹೇಳಿದಾಗ, ನಾನು ಅವರು ʼಮಫ್ತಿʼಯ ಸೀಕ್ವೆಲ್ ಹೇಳಬಹುದು ಅಂದುಕೊಂಡೆ. ಅವರು ಪ್ರೀಕ್ವೆಲ್ ಹೇಳಿದರು. ಈ ಚಿತ್ರದ ಯಶಸ್ಸಿನ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣರಾದ ಇಡೀ ತಂಡಕ್ಕೆ ಧನ್ಯವಾದ. ನಮ್ಮ ಸಂಸ್ಥೆಯಿಂದ ಮುಂದೆ ಕೂಡ ಉತ್ತಮ ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದರು.

ಈ ಚಿತ್ರ ಆಗಲು ಮುಖ್ಯ ಕಾರಣ ಶಿವಣ್ಣ ಅವರ ಅಭಿಮಾನಿಗಳು. ಅವರು ʼಮಫ್ತಿʼ ಚಿತ್ರದ ಯಶಸ್ಸಿನ ನಂತರ, ʼರಣಗಲ್ʼ ಚಿತ್ರ ಮಾಡಿ ಎಂದು ಹೇಳಿದ್ದರು. ಈ ಚಿತ್ರ ಆಗಲು ಅವರೆ ಮುಖ್ಯ ಕಾರಣ ಎನ್ನಬಹುದು. ಆನಂತರ ನನ್ನನ್ನು ಕರೆದು ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ʼಭೈರತಿ ರಣಗಲ್ʼ ಚಿತ್ರ ಮಾಡಲು ಅಡ್ವಾನ್ಸ್ ನೀಡಿದ್ದು ಗೀತಾ ಶಿವರಾಜಕುಮಾರ್ ಅವರು. ಅವರಿಗೆ ಹಾಗೂ ರಣಗಲ್ ಪಾತ್ರಕ್ಕೆ ಜೀವ ತುಂಬಿದ ಶಿವರಾಜಕುಮಾರ್ ಅವರಿಗೆ ಮತ್ತು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದ ಎಂದರು ನಿರ್ದೇಶಕ ನರ್ತನ್.

ಕನ್ನಡ ಚಿತ್ರಗಳು ಓಡುತ್ತಿಲ್ಲ ಎಂಬುದು ಸುಳ್ಳು. ಉತ್ತಮ ಚಿತ್ರಗಳು ಬಂದರೆ ಜನ ಖಂಡಿತವಾಗಿ ಜನ ನೋಡುತ್ತಾರೆ. ಅದಕ್ಕೆ ಈ ಚಿತ್ರವೇ ಉದಾಹರಣೆ. ಬಿಡುಗಡೆಯಾದ ದಿನದಿಂದ ಎಲ್ಲಾ ಚಿತ್ರಮಂದಿರಗಳಲ್ಲೂ ʼಭೈರತಿ ರಣಗಲ್ʼ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರದಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗಲಿದೆ. ವಿತರಕರ ಮುಖದಲ್ಲಿ ಸಂತೋಷ ಕಂಡರೆ ಆ ಸಿನಿಮಾ ಗೆದ್ದ ಹಾಗೆ ಎಂದರು ವಿತರಕ ಜಗದೀಶ್.

ಈ ಸುದ್ದಿಯನ್ನೂ ಓದಿ | International Men’s Day 2024: ಇಂಟರ್ ನ್ಯಾಷನಲ್ ಮೆನ್ಸ್ ಡೇ ಸ್ಪೆಷಲ್‌ಗೆ ಫ್ಯಾಷೆನಬಲ್ ಆಗಿ ಕಾಣಿಸಿಕೊಂಡ ಸೆಲೆಬ್ರೆಟಿಗಳಿವರು!

ಚಿತ್ರದಲ್ಲಿ ನಟಿಸಿರುವ ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಮುಂತಾದ ಕಲಾವಿದರು, ಛಾಯಾಗ್ರಾಹಕ ನವೀನ್ ಕುಮಾರ್, ಸಂಕಲನಕಾರ ಅಕ್ಷಯ್ ಮುಂತಾದ ತಂತ್ರಜ್ಞರು ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು. ವೀರೇಶ ಚಿತ್ರಮಂದಿರದ ಕುಶಾಲ್, ನರ್ತಕಿ ಚಿತ್ರಮಂದಿರದ ವೆಂಕಟೇಶ್ ಹಾಗೂ ಮೈಸೂರಿನ ಗಾಯತ್ರಿ ಚಿತ್ರಮಂದಿರದ ಜಯರಾಂ ಅವರು ʼಭೈರತಿ ರಣಗಲ್ʼ ಚಿತ್ರಕ್ಕೆ ಚಿತ್ರಮಂದಿರಕ್ಕೆ ಹರಿದು ಬರುತ್ತಿರುವ ಜನಸಾಗರ ಕಂಡು ಸಂತೋಷವಾಗಿದೆ ಎಂದರು. ನಿರ್ಮಾಪಕರಾದ ರಾಜಕುಮಾರ್, ಕೆ.ಪಿ.ಶ್ರೀಕಾಂತ್, ಸುಧೀಂದ್ರ, ಕೃಷ್ಣ ಸಾರ್ಥಕ್, ನಾಗೇಂದ್ರ, ಪುನೀತ್ ಮುಂತಾದವರು ಸಕ್ಸಸ್ ಮೀಟ್ ನಲ್ಲಿ ಉಪಸ್ಥಿತರಿದ್ದರು.