Tuesday, 19th November 2024

Bharat Rice Distribution: ಹುಬ್ಬಳ್ಳಿ- ಧಾರವಾಡದಲ್ಲೂ ಭಾರತ್ ಅಕ್ಕಿ ವಿತರಣೆ

bharat rice

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ (Hubballi Dharawad) ಅವಳಿ ನಗರದಲ್ಲಿ ಭಾರತ್ ಬ್ರ್ಯಾಂಡ್ ಅಡಿ ನೇರ ಗ್ರಾಹಕರಿಗೆ ಆಹಾರೋತ್ಪನ್ನ ವಿತರಿಸಲು (Bharat Food Distribution) ಕೇಂದ್ರ ಆಹಾರ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ (Prahlad Joshi) ಕ್ರಮ ಕೈಗೊಂಡಿದ್ದಾರೆ. ಅದರಂತೆ, ಕಡಿಮೆ ದರದಲ್ಲಿ ಭಾರತ್‌ ಅಕ್ಕಿಯನ್ನು (Bharat Rice) ಗ್ರಾಹಕರಿಗೆ ವಿತರಿಸಲಾಗುತ್ತಿದೆ.

ಹುಬ್ಬಳ್ಳಿ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಇಂದು ಬೆಳಗ್ಗೆ ಕಡಿಮೆ ಬೆಲೆಯಲ್ಲಿ ಪೂರೈಸುವ “ಭಾರತ್ ಬ್ರ್ಯಾಂಡ್” ಆಹಾರ ಉತ್ಪನ್ನಗಳ ವಿತರಣೆಗೆ ಚಾಲನೆ ನೀಡಲಾಗುತ್ತಿದ್ದು, ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭಾರತ್ ಬ್ರ್ಯಾಂಡ್ ಅಡಿ ಅಗತ್ಯವಸ್ತುಗಳನ್ನು ಮಾರಾಟ ಮಾಡಲಾಗಿತ್ತು. ಇದಕ್ಕೂ ಮುನ್ನ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಿತರಿಸಲಾಗಿದೆ.

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರ ನೆರವಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನೇರ ಆಹಾರ ಉತ್ಪನ್ನ ಪೂರೈಕೆ, ಈಗ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತವರು ಕ್ಷೇತ್ರದಲ್ಲಿ ಆರಂಭಗೊಂಡಿದೆ. ಅಗತ್ಯ ಆಹಾರೋತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ ಮೊದಲಿಗೆ ದೆಹಲಿಯಲ್ಲಿ 29 ರೂ. ದರದಲ್ಲಿ 10 ಕೆಜಿ ಪ್ಯಾಕೆಟ್ ಭಾರತ್ ಅಕ್ಕಿ ಬಿಡುಗಡೆ ಮಾಡಿತ್ತು. ನಂತರ ಮೊಬೈಲ್ ವಾಹನಗಳ ಮೂಲಕ ದೇಶಾದ್ಯಂತ ಹಂಚಿತು.

ಕ್ರಮೇಣ, ಭಾರತ್ ಅಕ್ಕಿ ಜತೆಗೆ ಆಯಾ ರಾಜ್ಯ ಮತ್ತು ಪ್ರದೇಶವಾರು ಬೇಡಿಕೆಗೆ ತಕ್ಕಂತೆ ಕಡಿಮೆ ಬೆಲೆಯಲ್ಲಿ ಭಾರತ್ ಬೇಳೆ, ಭಾರತ್ ಗೋಧಿ, ಭಾರತ್ ಹಿಟ್ಟು ವಿತರಣೆ ಆರಂಭಿಸಿದೆ. ದೇಶದ ಪ್ರಮುಖ ನಗರಗಳು ಹಾಗೂ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಗಗನಮುಖಿ ಆಗುತ್ತಿದ್ದಂತೆಯೇ ಕೆಜಿಗೆ 35 ರೂ. ದರದಲ್ಲಿ ಈರುಳ್ಳಿ ಪೂರೈಸಿ ಗ್ರಾಹಕರ ಕೈಗಿಟ್ಟಿತು. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ದಿನಗಳಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಈರುಳ್ಳಿ ಜತೆಗೆ “ಭಾರತ್ ಬ್ರ್ಯಾಂಡ್” ಅಡಿ ಕಡಿಮೆ ಬೆಲೆಗೆ ಆಹಾರೋತ್ಪನ್ನ ಪೂರೈಸಲಾಗಿತ್ತು.

ಭಾರತ್ ಅಕ್ಕಿ, ಭಾರತ್ ಬೇಳೆ, ಭಾರತ್ ಗೋಧಿ ಹಿಟ್ಟು, ಅಕ್ಕಿ ಹಿಟ್ಟು ಹೀಗೆ ಅಗತ್ಯ ಆಹಾರ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ವಾಹನಗಳಲ್ಲಿ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಬಳಿಕ ಈಗ ಚೋಟಾ ಮುಂಬೈ ಎಂದೇ ಖ್ಯಾತಿಯಾದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಹ ಭಾರತ್ ಬ್ರ್ಯಾಂಡ್ ಅಡಿ ನೇರ ಗ್ರಾಹಕರಿಗೆ ಆಹಾರೋತ್ಪನ್ನ ವಿತರಿಸಲಾಗುತ್ತಿದೆ.

ಇದನ್ನೂ ಓದಿ: Pralhad Joshi: ಆಸ್ತಿ ಕಳೆದುಕೊಂಡ ರೈತರೇನು ಪ್ರಿಯಾಂಕಾ ಗಾಂಧಿ ಮನೆ ಮುಂದೆ ನಿಲ್ಲಬೇಕೆ?: ಜೋಶಿ ತಿರುಗೇಟು