Monday, 20th May 2024

ಭೋವಿ ಸಮಾಜದವರು ಕಲ್ಲು ಹೊಡೆಯುವ ಮೂಲಕ ಜೀವನ ಸಾಗಿಸುತ್ತಿದ್ದಾರೆ: ಡಾ.ತಿಪ್ಪೆರುದ್ರಸ್ವಾಮಿ

ಮಾನ್ವಿ: ರಾಜ್ಯದಲ್ಲಿ ಭೋವಿ ಸಮಾಜದವರ ಜನಸಂಖ್ಯೆ ೧ ಕೋಟಿ ಇದ್ದು ಇನ್ನು ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದು ಅನೇಕ ಹೋರಾಟಗಳ ಫಲವಾಗಿ ಭೋವಿ ಸಮಾಜಕ್ಕೆ ಯಡಿಯೂರಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ ಭೋವಿ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ ೨ಸಾವಿರ ಕೋಟಿ ಅನುದಾನವನ್ನು ನೀಡಿದರೆ ಎಂದು ಭಾರತೀಯ ಭೋವಿ ಸಮಾಜ ಸೇವ ಸಂಘದ ರಾಜ್ಯ ಕಾರ್ಯದರ್ಶಿ ಡಾ.ತಿಪ್ಪೆರುದ್ರ ಸ್ವಾಮಿ ತಿಳಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಭೋವಿ ಸಮಾಜ ದವರು ಇನ್ನೂ ಕಲ್ಲು ಹೊಡೆಯುವ ಮೂಲಕ ಜೀವನ ಸಾಗಿಸುತ್ತಿದ್ದು ಹಿಂದಿನ ಸರಕಾರಗಳು ಬಂಡೆಗಳನ್ನು ಹೊಡೆಯಲು ನೀಡಿರುವ ಪರವಾನಿಗೆಯನ್ನು ಕಸಿದು ಕೊಳ್ಳಲಾಗುತ್ತಿದೆ. ಅದರಿಂದ ರಾಜ್ಯ ಸರಕಾರವು ಭೋವಿ ಸಮಾಜದ ಕುಲಕಸುಬನ್ನು ಉಳಿಸಲು ಕಲ್ಲು ಮತ್ತು ಮರಳು ಗಣಿಗಾರಿಕೆ ಯಲ್ಲಿ ಭೋವಿ ಸಮಾಜದವರಿಗೆ ಮೀಸಲಾತಿ ಕಲ್ಪಿಸಬೇಕು. ಸಮಾಜದವರು ಜಿಲ್ಲಾ ಕೇಂದ್ರಗಳಲ್ಲಿನ ಅಂಬೇಡ್ಕರ್ ಅಭಿವೃದ್ದಿ ನಿಗಮಗಳಲ್ಲಿ ಅರ್ಜಿ ಪಡೆದು ನಿಗಮಕ್ಕೆ ಸಲ್ಲಿಸಿದ್ದಲ್ಲಿ ೫ ಸಾವಿರದಿಂದ ೫ಲಕ್ಷದವರೆಗೂ ಆರ್ಥಿಕ ನೆರವನ್ನು ಪಡೆಯುವ ಅವಕಾಶವಿದೆ.

ಭೂಮಿಯಿರುವ ರೈತರು ತಮ್ಮ ಜಮೀನುಗಳಿಗೆ ಕೊಳವೆಬಾವಿ, ವಿದ್ಯುತ್‌ಸಂಪರ್ಕ ಪಡೆಯಬಹುದು ಮನೆಗಳ ನಿರ್ಮಾಣಕ್ಕೆ ೫ ಲಕ್ಷದವರೆಗೂ ಆರ್ಥಿಕ ಸೌಲಭ್ಯ ಪಡೆಯಬಹುದು,ಜಮೀನು ರಹಿತ ರೈತ ಕೂಲಿಗಳಿಗೆ ಒಂದು ಎಕರೆ ಜಮೀನು ಪಡೆಯಲು ಅವಕಾಶವಿದೆ. ಕುರಿ,ಹಸು,ಜಾನುವಾರು ಸಾಕಾಣಿಕೆಗೆ ಕೂಡ ಆರ್ಥಿಕ ನೆರವನ್ನು ನಿಗಮವು ನೀಡುವುದರಿಂದ ಸಮಾಜದ ಬಡ ಜನರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಸರಕಾರದ ಸೌಲಭ್ಯ ಪಡೆಯುವಂತೆ ತಿಳಿಸಿದರು.

ಮಾಜಿ ಗ್ರಾ.ಪಂ.ಸದಸ್ಯೆ ಹಂಪಯ್ಯ,ಜಿಲ್ಲಾ ಭೋವಿ ನೌಕರರ ಸಂಘದ ಅಧ್ಯಕ್ಷ ಯಲಪ್ಪ ನಿಲೋಗಲ್ ಇದ್ದರು.

error: Content is protected !!