Friday, 22nd November 2024

Bidar News: 10 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

Bidar News

ಬೀದರ್: ಎನ್‌ಎ ನಿವೇಶನಗಳ ಮಾರಾಟದ ಅನುಮೋದನೆಗಾಗಿ ರಿಯಲ್ ಎಸ್ಟೇಟ್ ಉದ್ಯಮಿಯಿಂದ 10 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (BUDA) ಆಯಕ್ತ, ಯೋಜನಾ ಸದಸ್ಯ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೀದರ್‌ನ (Bidar News) ಪ್ರತಾಪ ನಗರದಲ್ಲಿ ನಡೆದಿದೆ.

ಬುಡಾ ಆಯುಕ್ತ ಶ್ರೀಕಾಂತ ಚಿಮಕೋಡೆ, ಯೋಜನಾ ಸದಸ್ಯ ಚಂದ್ರಕಾಂತ ರೆಡ್ಡಿ, ಆಪ್ತ ಸಿದ್ದೇಶ್ವರ ಬಂಧಿತರು. ನಗರದ ಗುಂಪಾ ನಿವಾಸಿಯಾಗಿರುವ ಸತೀಶ ನೌಬಾದೆ ಎಂಬುವರು ಚಿಕ್ಕಪೇಟ್ ಗ್ರಾಮದಲ್ಲಿ 2.11 ಎಕರೆ ಭೂಮಿಗೆ 2022ರಲ್ಲಿ ವಸತಿ ಉದ್ದೇಶಕ್ಕಾಗಿ ವಿನ್ಯಾಸ ಮಂಜೂರಾತಿ ಆದೇಶ ಪಡೆದುಕೊಂಡಿದ್ದು, ನಿಯಮದಂತೆ ಆರಂಭಿಕ ಹಂತದಲ್ಲಿ ಶೇ.40 ರಷ್ಟು ಅನುಪಾತದ ನಿವೇಶನಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ ಶೇ. 60ರಷ್ಟು ನಿವೇಶನಗಳ ಬಿಡುಗಡೆಗಾಗಿ ಬುಡಾ ಆಯುಕ್ತ ಶ್ರೀಕಾಂತ ಚಿಮಕೋಡೆ, ಯೋಜನಾ ಸದಸ್ಯ ಚಂದ್ರಕಾಂತ ರೆಡ್ಡಿ50 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದರಿಂದ ನೊಂದಿದ್ದ ಸತೀಶ್ ನ. 22 ರಂದು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸತೀಶ ಅವರು ಶುಕ್ರವಾರ ಮುಂಗಡವಾಗಿ 10 ಲಕ್ಷ ರೂ. ನೀಡಲು ಬುಡಾ ಕಚೇರಿಗೆ ಹೋದಾಗ ಆಯುಕ್ತರು, ತಮ್ಮ ಪರಿಚಯದ ಸಿದ್ದೇಶ್ವರ ಎಂಬುವರ ಕೈಯಲ್ಲಿ ಕೊಡಲು ತಿಳಿಸಿದ್ದಾರೆ. ಅದರಂತೆ ಸಿದ್ದೇಶ್ವರ ಹಣ ಪಡೆಯುವಾಗ ಲೋಕಾಯುಕ್ತ ಡಿಎಸ್‌ಪಿ ಹಣಮಂತರಾಯ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಈ ಸುದ್ದಿಯನ್ನೂ ಓದಿ | Honey Trap: ಸರ್ಕಾರಿ ನೌಕರನಿಗೆ ಹನಿಟ್ರ್ಯಾಪ್; 2.5 ಕೋಟಿ ರೂ. ವಸೂಲಿ ಮಾಡಿದ್ದ ಗ್ಯಾಂಗ್‌ ಅರೆಸ್ಟ್‌!

ಬೆಂಗಳೂರಲ್ಲಿ ಶಾಕಿಂಗ್‌ ಘಟನೆ; ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ!

ಬೆಂಗಳೂರು: ಇಬ್ಬರು ಮಕ್ಕಳನ್ನು ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ (Self Harming) ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶುಭಂ ಸಾಹು (7), ಶಿಯಾ ಸಾಹು (3) ಕೊಲೆಯಾದ ಮಕ್ಕಳು ಎಂದು ಗುರುತಿಸಲಾಗಿದೆ. ಮಮತಾ ಸಾಹು, ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿಯಾಗಿದ್ದಾರೆ.

ಜಾರ್ಖಂಡ್ ಮೂಲದ ಮಮತಾ ದಂಪತಿ ಕಳೆದ 6 ತಿಂಗಳಿಂದ ಸುಬ್ರಮಣ್ಯಪುರದಲ್ಲಿ ವಾಸವಿದ್ದರು. ಮಮತಾ ಪತಿ ಆಟೋ ಡ್ರೈವರ್‌ ಆಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದರು. ಇತ್ತೀಚಿಗೆ ದಂಪತಿ ನಡುವೆ ಗಲಾಟೆಯಾಗಿ, ಮಮತಾ ಸಾಹು ಊರಿಗೆ ತೆರಳಲು ಸಿದ್ಧಳಾಗಿದ್ದಳು. ಆಟೋ ಚಾಲಕನಾಗಿದ್ದ ಪತಿ ನೆನ್ನೆ ಕೆಲಸಕ್ಕೆ ಹೋಗಿದ್ದಾಗ ಮಮತಾ ಮಕ್ಕಳಿಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಪತಿಗೆ ಸೆಲ್ಫಿ ಫೋಟೊ ಕಳಿಸಿದ್ದ ಮಮತಾ, ಚಾಕು ತೆಗೆದುಕೊಂಡು ತಾನೂ ಕತ್ತು ಕೊಯ್ದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಫೋಟೊ ನೋಡಿದ್ದ ಪತಿ ಮನೆಗೆ ಬರುವಷ್ಟರಲ್ಲಿ ಮಕ್ಕಳಿಬ್ಬರೂ ಮೃತಪಟ್ಟಿದ್ದರು. ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಮಮತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಯಿಯಿಂದಲೇ ಕೃತ್ಯ ನಡೆದಿರುವ ಶಂಕೆಯಿದೆ. ಆದರೆ, ಪತಿಯಿಂದಲೇ ಹತ್ಯೆ ನಡೆದಿದೆ ಎಂದು ಮಮತಾ ಸಾಹು ಆರೋಪಿಸಿದ್ದಾಳೆ. ಆದರೆ ಘಟನೆ ನಡೆದ ಸಂದರ್ಭದಲ್ಲಿ ಆಕೆಯ ಪತಿ ಇರಲಿಲ್ಲ ಎನ್ನಲಾಗಿದೆ. ಮಕ್ಕಳಿಬ್ಬರ ತಂದೆ ನೀಡಿರುವ ದೂರಿನನ್ವಯ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದಂಪತಿಯ ಆರೋಪ ಪ್ರತ್ಯಾರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಪೊಲೀಸರು ತಿಳಿಸಿದ್ದಾರೆ.