Sunday, 15th December 2024

Billava community: ಬಿಲ್ಲವ ಹೆಣ್ಣುಮಕ್ಕಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಅರಣ್ಯಾಧಿಕಾರಿ ಬಂಧನ

ಮಂಗಳೂರು: ಬಿಲ್ಲವ ಸಮುದಾಯದ ಹೆಣ್ಣುಮಕ್ಕಳ (Billava community) ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಲ್ಲವ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆಡಿಯೊ ವೈರಲ್‌ ಆಗಿದ್ದರಿಂದ ಅಧಿಕಾರಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಹೀಗಾಗಿ ಅರಣ್ಯಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಹಿಂದೂ ಜಾಗರಣಾ ವೇದಿಕೆ ಮುಖಂಡ ಸಚಿನ್ ವಲಳಂಬೆ ನೀಡಿದ ದೂರಿನಡಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಬೆಳ್ಳಾರೆ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಅಧಿಕಾರಿ ಬಿಲ್ಲವ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೊವನ್ನು ಹಿಂದೂ ಸಂಘಟನೆಗಳು ಹಂಚಿಕೊಂಡಿದ್ದವು. ಇದರಿಂದ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.

ಸುರೇಶ್ ಎಂಬ ಹಿಂದೂ ಕಾರ್ಯಕರ್ತನ ಜೊತೆ ಅಧಿಕಾರಿ ದೂರವಾಣಿ ಸಂಭಾಷಣೆ ಮಾಡಿದ್ದರು ಎನ್ನಲಾದ ಆಡಿಯೊ ವೈರಲ್ ಆಗಿತ್ತು. “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ ಬಿಲ್ಲವ ಹುಡುಗಿಯರು ವೇಶ್ಯೆಯರಾಗಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆ ಕೂಡ ಇದೆ. ಹಿಂದುತ್ವದ ಹುಡುಗರು ಅವರನ್ನು ವೇಶ್ಯೆಯರನ್ನಾಗಿ ಮಾಡಿದ್ದಾರೆ” ಎಂದು ಫೋನ್‌ನಲ್ಲಿ ಅಧಿಕಾರಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಸುದ್ದಿಯನ್ನೂ ಓದಿ | Salman khan : 60 ಬಾಡಿಗಾರ್ಡ್‌ಗಳ ಜತೆ ಬಿಗ್‌ ಬಾಸ್‌ ಶೂಟಿಂಗ್‌ಗೆ ತೆರಳಿದ ಸಲ್ಮಾನ್ ಖಾನ್‌!

ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಈ ಹಿಂದೆ ಕೂಡ ವಿವಾದದಿಂದಾಗಿ ಸೇವೆಯಿಂದ ಅಮಾನತ್ತಾಗಿದ್ದರು. ಇದೀಗ ಹಿಂದೂ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.