Friday, 22nd November 2024

ಬಿಜೆಪಿ ಮುಂದೆ…ಕೈ ಹಿಂದೆ…ದಳ ನಾಪತ್ತೆ

ಒಂದು ಕಡೆ ಅನುಕಂಪದ ಅಲೆಯಲ್ಲಿ ಮಂಗಲಾ ಅಂಗಡಿ

ಮತ್ತೊಂದು ಕಡೆ ಜಿಲ್ಲೆಯಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರೋ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು

ಜಾತಿ ಲೆಕ್ಕಚಾರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಎಫೆಕ್ಟ್ 

ವಿಶೇಷ ವರದಿ: ವಿನಾಯಕ ಮಠಪತಿ

ಬೆಳಗಾವಿ: ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ
ನಡೆಯುತ್ತಿದೆ. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಒಂದು ಕಡೆ ಅನುಕಂಪದ ಅಲೆಯನ್ನು ದಾಳವಾಗಿ ಇಟ್ಟುಕೊಂಡು ಬಿಜೆಪಿ ಮಂಗಲಾ ಅಂಗಡಿ ಅವರನ್ನು ಕಣಕ್ಕೆ ಇಳಿಸಿದೆ. ಮತ್ತೊಂದು ಕಡೆಯಲ್ಲಿ ಜಿಲ್ಲೆೆಯಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರೋ ಸತೀಶ್ ಜಾರಕಿಹೊಳಿಯನ್ನು ಕಾಂಗ್ರೆಸ್ ಅಖಾಡಕ್ಕೆ ಇಳಿಸಿದೆ. ಇಬ್ಬರ ನಡುವೆ ತೀವ್ರ ಪೈಪೋಟಿ ಇದ್ದು, ಚುನಾವಣೆಯಲ್ಲಿ ಎರಡೂ ಪಕ್ಷಗಳು ಹಲವು ಲೆಕ್ಕಾಚಾರ ಹಾಕಿಕೊಂಡು ಪ್ರಚಾರ ನಡೆಸುತ್ತಿವೆ. ಇದೆಲ್ಲದರ ಬೆಳಗಾವಿ ಲೋಕಸಭಾ ಚುನಾವಣೆಯ ಸಂಪೂರ್ಣ ವಿವರ ಇಲ್ಲಿದೆ.

ಏಪ್ರಿಲ್ 17ರಂದು ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದ ರಿವೆ. ಸ್ವತಂತ್ರ್ಯಾ ನಂತರದಲ್ಲಿ ಸದ್ಯ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ 18 ನೇ ಚುನಾವಣೆ ನಡೆಯುತ್ತಿದೆ. ಹಾಗೆಯೇ 2ನೇ ಬಾರಿಗೆ ಉಪ ಚುನಾವಣೆ ನಡೆಯು ತ್ತಿದ್ದು, ಸತತವಾಗಿ ನಾಲ್ಕು ಬಾರಿ ಬೆಳಗಾವಿ ಕ್ಷೇತ್ರದಿಂದ ಆಯ್ಕೆಯಾಗಿರುವುದೇ ಹೆಗ್ಗಳಿಕೆ. ಈ ಹಿಂದೆ ದಿ.ಎಸ್.ಬಿ.ಸಿದ್ನಾಳ್ 1980 ರಿಂದ 1996 ವರೆಗೆ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ತದನಂತರ, ದಿ. ಸುರೇಶ್ ಅಂಗಡಿ 2004 ರಿಂದ 2020ರ ವರೆಗೆ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಸಿದ್ನಾಳ್ ಅವರ ಸಾಧನೆ ಸಮಬಲ ಸಾಧಿಸಿದ್ದರು. ಆದರೆ, ಕಳೆದ ವರ್ಷ ಕರೋನಾ ಆರ್ಭಟದ ಸಂದರ್ಭ ದಲ್ಲಿ ಸುರೇಶ್ ಅಂಗಡಿ ಅಕಾಲಿಕ ಮರಣ ಹೊಂದಿದರು.

ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಾಬಲ್ಯ: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರ ಗಳು ಬರುತ್ತವೆ. ಪ್ರಮುಖವಾಗಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಶಾಸಕರಿದ್ದರೆ, ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಅರಭಾವಿ ಕ್ಷೇತ್ರ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ, ಗೋಕಾಕ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ, ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್, ಬೆಳಗಾವಿ ಉತ್ತರ ಅನಿಲ್ ಬೆನಕೆ, ರಾಮದುರ್ಗ ಮಹಾದೇವಪ್ಪ ಯಾದವಾಡ, ಸವದತ್ತಿ ಕ್ಷೇತ್ರದಲ್ಲಿ ಆನಂದ ಮಾಮನಿ.

ಇನ್ನುಳಿದಂತೆ ಬೈಲಹೊಂಗಲದಲ್ಲಿ ಕಾಂಗ್ರೆಸ್ಸಿನವರಾದ ಮಹಾಂತೇಶ್ ಕೌಜಲಗಿ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದು, ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಜಾಸ್ತಿ ಇದೆ.

ತನ್ನದೇ ದಾರಿಯಲ್ಲಿ ಪಕ್ಷಗಳ ಪ್ರಚಾರ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಸಲ ದಿ.ಅಂಗಡಿ ಗೆಲವು ಸಾಧಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಅಂಗಡಿ ಅತಿ ಹೆಚ್ಚು ಮತಗಳ ಅಂತರದಿಂದಲೇ ಗೆದ್ದಿದ್ದರು. ಈ ಸಲ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರೈಲ್ವೆೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು. ಒಂದು ವರ್ಷದ ಅವಧಿಯಲ್ಲಿ ಅನೇಕ ರೈಲ್ವೆೆ ಯೋಜನೆಯನ್ನು ಬೆಳಗಾವಿ, ಕರ್ನಾಟಕ ಜನರಿಗೆ ನೀಡಿದ್ದರು. ಬೆಳಗಾವಿ-ಬೆಂಗಳೂರು ಮಾರ್ಗದ ನೇರ ರೈಲು, ಬೆಳಗಾವಿ-ಧಾರವಾಡ ಮಾರ್ಗದ ನೇರ ರೈಲು ಮಾರ್ಗ ತರುವಲ್ಲಿ ಯಶಸ್ವಿ ಯಾದರು. ಜತೆಗೆ ಬೆಂಗಳೂರು ಸಬರಬನ್ ರೈಲು ಯೋಜನೆಗೆ ಚಾಲನೆ ನೀಡಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಅಬ್ಬರ ಪ್ರಚಾರ ನಡೆಸುತ್ತಿದ್ದಾರೆ. ಇಬ್ಬರು ತಮ್ಮದೇ ಲೆಕ್ಕಚಾರದಲ್ಲಿ ತೊಡಗಿಕೊಂಡಿದ್ದಾರೆ.

ಲಿಂಗಾಯತ ಹಾಗೂ ಮರಾಠ ಮತದಾರನ್ನು ಗಮನದಲ್ಲಿಟ್ಟು ಕೊಂಡು ಬಿಜೆಪಿ ಗೆಲುವಿನ ಕಾರ್ಯತಂತ್ರ ರೂಪಿಸಿದೆ. ಮತ್ತೊಂದು ಕಡೆ ಹಿಂದುಳಿದ, ದಲಿತ ಹಾಗೂ ಮುಸ್ಲಿಂ ಮತದಾರರನ್ನು ಕ್ರೋಡೀಕರಿಸುವ ಮೂಲಕ ಕ್ಷೇತ್ರದಲ್ಲಿ 20 ವರ್ಷಗಳ  ಬಳಿಕ ಗೆಲುವು ಸಾಧಿಸಲು ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ. ಮತದಾರನ ಮನಸ್ಸಿನಲ್ಲಿ ಏನಿದೆ ಎಂಬುದು ಮೇ 2ಕ್ಕೆ ಗೊತ್ತಾಗ ಲಿದೆ.

ಚರ್ಚೆಗೆ ಬರದ ಸಿಡಿ ವಿವಾದ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಅಬ್ಬರ ಪ್ರಚಾರ ನಡೆಯುತ್ತಿದೆ. ಈ ನಡುವೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಎಲ್ಲಿಯೂ ಚರ್ಚೆಗೆ ಬರುತ್ತಿಲ್ಲ. ಇದು ಕಾಂಗ್ರೆಸ್, ಬಿಜೆಪಿ ಮೇಲೆ ನೇರ ಪರಿಣಾಮ ಬಿರೋ ಸಾಧ್ಯತೆ ಇದೆ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದು, ಕಾಂಗ್ರೆಸ್‌ಗೆ ಲಾಭವಾಗಲಿದೆ. ಆದರೆ ಚುನಾವಣೆಯಿಂದ ದೂರ ಉಳಿದರೆ ಬಿಜೆಪಿಯಲ್ಲಿ ಮೂಲೆ ಗುಂಪಾಗುವ ಆತಂಕ ಸಹ ಇಬ್ಬರೂ ನಾಯಕರಿಗೆ ಇದೆ. ಕಾಂಗ್ರೆಸ್ ನಲ್ಲಿಯೂ ಹಲವು ಲೆಕ್ಕಾಚಾರಗಳು ಇವೆ.

ಸತೀಶ್ ಜಾರಕಿಹೊಳಿ ಗೆದ್ದರೆ ದೆಹಲಿಯಲ್ಲಿ ತಮ್ಮದೇ ಆದ ಪ್ರಭಾವ ಹೊಂದ ಬಹುದು ಎಂಬ ತಂತ್ರಗಾರಿಕೆ ಇದೆ. ತಮ್ಮದೇ ಆಗಿರೋ ಲೆಕ್ಕಚಾರ, ತಂತ್ರಗಾರಿಕೆ ಮೂಲಕ ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯುತ್ತಿದ್ದು, ಮತದಾರ ಯಾರ ಕೈ ಹಿಡಿಯಲಿದ್ದಾನೆ. ಚುನಾವಣೆಯಲ್ಲಿ ಯಾವ ವಿಚಾರ ಮುಖ್ಯವಾಗಲಿದೆ ಎಂಬುದು ಕಾದು ನೋಡಬೇಕು.

ಜಾತಿ ಲೆಕ್ಕಾಚಾರ
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಚಾರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಈವರೆಗೆ ಆಯ್ಕೆಯಾದ ಸಂಸದರ ಪಟ್ಟಿ ನೋಡಿದ್ರೆ ಇಲ್ಲಿ ವೀರಶೈವ ಲಿಂಗಾಯತರದ್ದೇ ಪ್ರಾಬಲ್ಯ ಇದೆ. 17 ಚುನಾವಣೆಯಲ್ಲಿ ಪ್ರಬಲ ಕೋಮಿನ ಜನರೇ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ರಾಷ್ಟ್ರಿಯ ಹಾಗೂ ಪ್ರಾದೇಶಿಕ ಪಕ್ಷಗಳು ಸಹ ಅವರಿಗೆ ಟಿಕೆಟ್ ನೀಡಿವೆ. ಈ ಸಲ
ಮಾತ್ರ ಹಿಂದುಳಿದ ಹಾಗೂ ದಲಿತ ಮತಗಳ ಮೇಲೆ ಕಣ್ಣಿಟ್ಟು ಸತೀಶ್ ಜಾರಕಿಹೊಳಿ ಕಣಕ್ಕೆ ಇಳಿದಿದ್ದಾರೆ. ಈ ಹಿಂದೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾದವರಲ್ಲಿ ವೀರಶೈವ ಲಿಂಗಾಯತ ಸಮುದಾಯದ 14 ಅಭ್ಯರ್ಥಿಗಳು. ಮುಸ್ಲಿಂ, ಕುರುಬ ಹಾಗೂ ಬ್ರಾಹ್ಮಣ ಸಮುದಾಯದ ತಲಾ ಒಬ್ಬರು ಸಂಸದರಾಗಿ ಆಯ್ಕೆಯಾಗಿದ್ದರು.