Sunday, 24th November 2024

ಬೈಎಲೆಕ್ಷನ್‌ ಚರ್ಚೆ: ಅ.3ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ ಬೆಂಗಳೂರಿನಲ್ಲಿ ಅಕ್ಟೋಬರ್ 3ರಂದು ನಡೆಯ ಲಿದ್ದು, ಸಭೆಯಲ್ಲಿ ಎರಡು ವಿಧಾನ ಸಭಾ ಕ್ಷೇತ್ರ ಹಾಗೂ ವಿಧಾನ ಪರಿಷತ್ ಚುನಾವಣೆಗಳಿಗೆ ಪಕ್ಷದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ಇತರೆ ಹಿರಿಯ ನಾಯಕರು ಭಾಗವಹಿಸಲಿದ್ದಾರೆಂದು ವರದಿಗಳು ತಿಳಿಸಿವೆ.

ಅರುಣ್ ಸಿಂಗ್ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದು, ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸ ಲಿದ್ದಾರೆ. ಸಭೆಯಲ್ಲಿ ಉಪಚುನಾವಣೆ ನಡೆಯಲಿರುವ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಹುತೇಕ ಅಖೈರುಗೊಳ್ಳುವ ಸಾಧ್ಯತೆಗಳಿವೆ.

ಎರಡು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ ಸ್ಥಳೀಯ ಜಿಲ್ಲಾಧ್ಯಕ್ಷ ಮತ್ತು ಮುಖಂಡರ ಅಭಿಪ್ರಾಯ ಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಭಾನುವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸ ಲಾಗುತ್ತದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ವಿಸ್ತೃತವಾಗಿ ಚರ್ಚಿಸಿ ಬಳಿಕ ಕೆಲವರನ್ನು ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಿದ ಹೆಸರಿನ ಪಟ್ಟಿಯನ್ನು ಅರುಣ್ ಸಿಂಗ್ ದೆಹಲಿಗೆ ಕೊಂಡೊಯ್ಯಲಿದ್ದಾರೆ.

ಹಾನಗಲ್ ಮತ್ತು ಸಿಂದಗಿಯನ್ನು ಸುಲಭವಾದ ಕ್ಷೇತ್ರಗಳೆಂದು ಪರಿಗಣಿಸಬೇಡಿ. ರಾಜ್ಯದ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಈ ಚುನಾವಣೆ ಅತ್ಯಂತ ಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆನ್ನಲಾಗಿದೆ.