ವಿಶ್ವವಾಣಿ ಸಂದರ್ಶನ: ವೆಂಕಟೇಶ್ ಆರ್.ದಾಸ್
ರಾಜ್ಯದ ಉಪಚುನಾವಣೆ ರಣ-ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಎರಡು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರ ಉಪಚುನಾವಣೆ ಆಡಳಿತ ಪಕ್ಷ ಬಿಜೆಪಿಗೆ ಬಹುಮುಖ್ಯ ಎನಿಸಿದೆ. ಬಿಜೆಪಿ ವೈಫಲ್ಯ ಮತ್ತು ಆರೋಪಗಳನ್ನು ಲಾಭವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ನಿಂದ ಈಗಾಗಲೇ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ. ಮಸ್ಕಿ ಮತ್ತು ಬಸವ ಕಲ್ಯಾಣ ಎರಡೂ ಕ್ಷೇತ್ರಗಳು ಬರುವ ಕಲ್ಯಾಣ ಕರ್ನಾಟಕ ವಿಭಾಗದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು, ಉಪ ಚುನಾವಣೆ ಮತ್ತು ರಾಜಕೀಯ ಬೆಳವಣಿಗೆಗಳ ಕುರಿತು ‘ವಿಶ್ವವಾಣಿ’ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಉಪ ಚುನಾವಣೆಯ ಮೇಲೆ ನಿಮ್ಮ ಪಕ್ಷದ ಕಣ್ಣಿದೆ, ಸಿದ್ಧತೆಗಳೇನು?
ಎರಡು ವಿಧಾನಸಭಾ ಕ್ಷೇತ್ರಗಳೂ ಕಾಂಗ್ರೆಸ್ನ ಶಾಸಕರನ್ನು ಹೊಂದಿದ್ದ ಕ್ಷೇತ್ರಗಳೇ. ಮಸ್ಕಿಯಲ್ಲಿ ನಮ್ಮ ಪಕ್ಷದ ಶಾಸಕರು
ಆಪರೇಷನ್ ಕಮಲಕ್ಕೆ ಒಳಗಾಗಿ, ಬಿಜೆಪಿ ಸೇರಿದ್ದಾರೆ. ಬಸವ ಕಲ್ಯಾಣದಲ್ಲಿ ನಮ್ಮ ಪಕ್ಷದ ಶಾಸಕರ ನಿಧನದ ಹಿನ್ನೆಲೆಯಲ್ಲಿ
ಚುನಾವಣೆ ನಡೆಯುತ್ತಿದೆ. ಹೀಗಾಗಿ, ಎರಡು ಕಾಂಗ್ರೆಸ್ನ ಭದ್ರಕೋಟೆ ಎನ್ನಬಹುದು. ನಾವು ಬೆಳಗಾವಿ ಲೋಕಸಭಾ ಕ್ಷೇತ್ರದ
ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸದಿರುವುದನ್ನು ಬಿಟ್ಟರೆ, ಉಳಿದ ಮೂರು ಕ್ಷೇತ್ರದ ಅಭ್ಯರ್ಥಿಗಳನ್ನು ಒಂದು ವಾರದ
ಹಿಂದೆಯೇ ಘೋಷಣೆ ಮಾಡಿದ್ದೇವೆ. ಅಭ್ಯರ್ಥಿಗಳು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದರೆ. ಪಕ್ಷದ
ಉಸ್ತುವಾರಿ ಗಳು, ನಾಯಕರು ಮುಂದಿನ ದಿನಗಳಲ್ಲಿ ಪ್ರಚಾರದಲ್ಲಿ ಭಾಗವಹಿಸುತ್ತೇವೆ. ನಮ್ಮ ಪಕ್ಷ ಈ ಕ್ಷೇತ್ರಗಳಲ್ಲಿ ಬೇರುಮಟ್ಟ ದಲ್ಲಿ ಗಟ್ಟಿಯಾಗಿದ್ದು, ಉತ್ತಮ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಈ ಹಿನ್ನೆೆಲೆಯಲ್ಲಿ ನಮಗೆ ಉಪಚುನಾವಣೆಯಲ್ಲಿ
ಉತ್ತಮ ಫಲಿತಾಂಶ ಸಿಗಲಿದೆ.
ಕಾಂಗ್ರೆೆಸ್ ಗೆಲುವಿಗೆ ಯಾವ ಅಂಶಗಳು ಕಾರಣವಾಗಲಿವೆ?
ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಕ್ಕೆ ನಮ್ಮ ಸರಕಾರ ಇದ್ದಾಗ ನೀಡಿದ್ದ ಕೊಡುಗೆಗಳು ಬಹುಮುಖ್ಯ
ಕಾರಣವಾಗಲಿವೆ. ಅದರಲ್ಲೂ 2 ವಿಧಾನಸಭಾ ಚುನಾವಣೆ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಹಿಂದಿನ ಯುಪಿಎ
ಸರಕಾರ ನೀಡಿದ ವಿಶೇಷ ಸ್ಥಾನಮಾನ ಅಭಿವೃದ್ಧಿಯ ಮುನ್ನೋಟವಾಗಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು
ಮನಮೋಹನ್ ಸಿಂಗ್ ಅವರ ಕಾರಣಕ್ಕೆ ನಮಗೆ ಆ ಸ್ಥಾನಮಾನ ಸಿಕ್ಕಿತು. ಅದಕ್ಕಾಗಿ ಅನೇಕ ಸ್ಥಳೀಯ ನಾಯಕರು ಹೋರಾಟ
ನಡೆಸಿದರು. ಸಿದ್ದರಾಮಯ್ಯ ಸರಕಾರದಲ್ಲಿ ಐದು ವರ್ಷಗಳ ಕಾಲ ವಿಶೇಷ ಅನುದಾನ ಬಿಡುಗಡೆಯಾಯಿತು. ಉದ್ಯೋಗ,
ಶಿಕ್ಷಣದಲ್ಲಿ ಮೀಸಲು ಕಲ್ಪಿಸಲಾಯಿತು. ಇದರಿಂದ ಸಾವಿರಾರು ಜನ ಡಾಕ್ಟರ್, ಎಂಜಿನಿಯರ್ ಸೇರಿ ಉನ್ನತ ವ್ಯಾಸಂಗ ಮಾಡಿದರು.
78 ಸಾವಿರ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಯಿತು. ಈ ಭಾಗದ ಅನೇಕ ಜಿಲ್ಲೆಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಇದು ಸಹಕಾರಿಯಾಯಿತು. ಇದು ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಪರ ಹೆಚ್ಚಿನ ಒಲವು ಮೂಡಿಸುವಂತೆ ಮಾಡಿದೆ.
ಬಿಜೆಪಿಯನ್ನು ಹಣಿಯಲು ನಿಮ್ಮ ಮುಂದಿರುವ ಅಸ್ತ್ರಗಳೇನು?
ಬಿಜೆಪಿ ಸರಕಾರದ ಜನವಿರೋಧಿ ಆಡಳಿತ ಜನತೆಯಲ್ಲಿ ಭ್ರಮನಿರಸನ ಮೂಡಿಸಿದೆ. ಹೈಕ ಭಾಗದ ಅನೇಕ ಅನುದಾನಗಳನ್ನು ಬಿಜೆಪಿ ಸರಕಾರ ತಡೆಹಿಡಿದಿದೆ. ಬ್ಯಾಕ್ಲಾಕ್ ಹುದ್ದೆಗಳ ನೇಮಕ ನಿಲ್ಲಿಸಿದೆ. ಹೊಸ ನೀರಾವರಿ ಯೋಜನೆಗಳ ಘೋಷಣೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಎಂಬ ಹೆಸರು ಘೋಷಣೆ ಮಾಡಿದರೆ ಸಾಲದು, ಈ ಭಾಗದ ಕಲ್ಯಾಣದ ಮೂಲಕ ಮೈಸೂರು ಕರ್ನಾಟಕದ ಭಾಗಕ್ಕೆ ಸರಿಸಮಾನವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕಿತ್ತು. ಆದರೆ, ಸರಕಾರ
ಅಂತಹ ಪ್ರಯತ್ನ ಮಾಡಿಲ್ಲ. ಕೈಗಾರಿಕಾ ವಲಯಕ್ಕೆ ಉತ್ತೇಜನ ನೀಡಿಲ್ಲ. ಬೇರೆ ಬೇರೆ ಅವಾಂತರಗಳಲ್ಲಿ ಬಿಜೆಪಿ ಆಡಳಿತ ಯಂತ್ರ
ಕುಸಿದಿದೆ.
1500 ಕೋಟಿ ಅನುದಾನ ಘೋಷಣೆ ಮಾಡಿ, 1300 ಕೋಟಿ ಕ್ರಿಯಾಯೋಜನೆ ರೂಪಿಸಿದರು. ಆದರೆ, ಯಾವುದೇ ಅನುದಾನ
ಬಿಡುಗಡೆಯಾಗಿಲ್ಲ. ಹೀಗಾಗಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿದೆ. ಪ್ರವಾಹದ ಸಂದರ್ಭದಲ್ಲಿ ಬಿಜೆಪಿ ಸರಕಾರ
ಸಂಪೂರ್ಣ ವಿಫಲವಾಗಿದೆ. ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸುವಲ್ಲಿ, ಕಳೆದುಕೊಂಡ ಬೆಳೆ, ಮನೆ ಮತ್ತಿತರ ಸೌಕರ್ಯ
ಮರಳಿ ಒದಗಿಸುವಲ್ಲಿ ಸರಕಾರ ಸಂಪೂರ್ಣವಾಗಿ ಎಡವಿದೆ ಎನ್ನಬಹುದು. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷ
ಚುನಾವಣೆಯಲ್ಲಿ ಮತ ಭೇಟೆ ನಡೆಸಲಿದೆ.
ಸಿಡಿ ಪ್ರಕರಣವನ್ನು ಕಾಂಗ್ರೆಸ್ ಎಷ್ಟು ಗಂಭೀರವಾಗಿ ಪರಿಗಣಿಸಿದೆ?
ಸಿಡಿ ಪ್ರಕರಣದಿಂದ ಬಿಜೆಪಿ ರಾಜ್ಯದ ಮರ್ಯಾದೆಯನ್ನು ಹಾಳು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿ ನಾವು ಸದನದಲ್ಲಿ ಕಳೆದ ಮೂರು ದಿನಗಳಿಂದ ಹೋರಾಟ ನಡೆಸಿದ್ದೇವೆ. ಕಾನೂನು ಹೋರಾಟಕ್ಕೆ ಅಗತ್ಯ ಸಹಕಾರ ನೀಡುತ್ತೇವೆ. ಜನರಲ್ಲಿ ಬಿಜೆಪಿ ನಾಯಕರ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇವೆ. ಬಿಜೆಪಿ ಜನರನ್ನು ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದು, ಅಭಿವೃದ್ಧಿ ಕೆಲಸಗಳನ್ನು ಮಾಡುವ ಬದಲು ಭ್ರಷ್ಟಾಚಾರ, ಸಿಡಿ ಪ್ರಕರಣ, ಭಿನ್ನಮತೀಯ ಚಟುವಟಿಕೆ ನಡೆಸುತ್ತಲೇ ಕಾಲಹರಣ ಮಾಡುತ್ತಿದೆ. ಸಿಡಿ ಪ್ರಕರಣದಲ್ಲಿ ಒಬ್ಬ ಮಹಿಳೆಗೆ ಅನ್ಯಾಯವಾಗಲು ಕಾಂಗ್ರೆಸ್ ಬಿಡುವುದಿಲ್ಲ. ನಮ್ಮ ನಾಯಕರು ಸಿಡಿ ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಅಗತ್ಯ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕಿದೆ. ಸರಕಾರ ಸೂಕ್ತ ತನಿಖೆ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಉಳ್ಳವರ ಪರ ತನಿಖೆ ದಿಕ್ಕು ಬದಲಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ ಮೇಲಿದೆ. ಅದನ್ನು ಮಾಡದಿದ್ದರೆ, ಅವರನ್ನು ಎಚ್ಚರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುವುದು ಶತಸಿದ್ಧ. ನಾವು ಹೋರಾಟ ಮಾಡಿ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇವೆ.
ಸುಧಾಕರ್ 225 ಶಾಸಕರ ಚಾರಿತ್ರ್ಯ ಪ್ರಶ್ನೆ ಮಾಡಿದ್ದಾರಲ್ಲ, ಇದಕ್ಕೆ ನಿಮ್ಮ ನಿಲುವೇನು?
ಸುಧಾಕರ್ ಅವರ ಹೇಳಿಕೆ ಅವರ ಮನೋಭಾವನೆಯನ್ನು ತೋರಿಸುತ್ತದೆ. ಅವರನ್ನು ಪಾಪಪ್ರಜ್ಞೆ ಕಾಡುತ್ತಿದೆ. ಇದರಿಂದಾ
ಗಿಯೇ ಅವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲಿ ವಿಚಲಿತರಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಅವರ ಹೇಳಿಕೆಯಿಂದ ಎಲ್ಲ ಪಕ್ಷದ ಶಾಸಕರ ಮನಸಿಗೆ ನೋವಾಗಿದೆ. ಬಿಜೆಪಿ ನಾಯಕರ ಇಂತಹ ನಡೆಯಿಂದ ನೈತಿಕತೆಯ ಅಧಃಪತನವಾಗುತ್ತಿದೆ ಎಂದೇ ಹೇಳಬೇಕು.
ಕಳಂಕಿತರು, ಕಪ್ಪು ಚುಕ್ಕಿ ಇರುವವರು ಯಾವುದೇ ಕಾರಣಕ್ಕೂ ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ. ಇದನ್ನು ಅರಿತು
ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ವೈಯಕ್ತಿಕ ಬದುಕಿನಲ್ಲಿ ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವನಾಗಿ ಇಂತಹ ಮಾತುಗಳನ್ನಾಡುವುದು ಮತ್ತು ಸಿಡಿ ಭಯದಿಂದ ನ್ಯಾಯಾಲಯದ ತಡೆಯಾಜ್ಞೆ ತರುವುದು ಶೋಭೆ ತರುವಂತಹದ್ದಲ್ಲ.
ಕಾಂಗ್ರೆಸ್ನ ನಾಯಕತ್ವದಲ್ಲಿಯೇ ಭಿನ್ನಾಭಿಪ್ರಾಯಗಳಿದೆಯಲ್ಲ, ಇದಕ್ಕೆ ಏನು ಹೇಳುತ್ತೀರಿ?
ಕಾಂಗ್ರೆಸ್ನಲ್ಲಿ ಅಂತಹ ಯಾವುದೇ ಪರಿಸ್ಥಿತಿಯಿಲ್ಲ. ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯ ಭ್ರಷ್ಟಾಚಾರ ಹಣಿಯಲು ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಕೇಂದ್ರದ ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿ ನೀತಿಯನ್ನು ಜನರಿಗೆ ವಿವರಿಸಲು ಅಗತ್ಯ ಕಾರ್ಯಕ್ರಮ ಮಾಡುತ್ತಿದ್ದೇವೆ.
ಪಕ್ಷ ಸಂಘಟನೆ ದೃಷ್ಟಿಯಿಂದ ಸಾಮಾಜಿಕ ಪ್ರಾತಿನಿಧ್ಯ, ಪ್ರಾಂತ್ಯವಾರು ಪ್ರಾತಿನಿಧ್ಯ ನೀಡಿದ್ದೇವೆ. ಐವರು ಕಾರ್ಯಾಧ್ಯಕ್ಷರಿದ್ದು, ಪ್ರಾಂತ್ಯವಾರು ಕೆಲಸ ಮಾಡುತ್ತಿದ್ದೇವೆ. ಆ ಮೂಲಕ ಪಕ್ಷವನ್ನು ಬಲಪಡಿಸುವ ಕಾರ್ಯ ನಡೆಯುತ್ತಿದೆ. ಜನರು ಬಿಜೆಪಿಯ ಜನವಿರೋಧಿ ಆಡಳಿತದಿಂದ ಬೇಸತ್ತಿದ್ದು, ಅದನ್ನು ಬಳಸಿಕೊಂಡು ಬಿಜೆಪಿ ವಿರುದ್ಧ ಜನಾಭಿಪ್ರಾಯ ಮೂಡಿಸುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾರ್ಯಾಧ್ಯಕ್ಷರು
ಹಾಗೂ ಮತ್ತಿತರ ನಾಯಕರ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಪಕ್ಷ ಸಂಘಟನೆ ಮಾಡಿ, ಉಪಚುನಾವಣೆ ಗೆಲ್ಲುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಹೋರಾಟ ನಡೆಸುತ್ತೇವೆ.