ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ನಡವಳಿಕೆ, ಅಧಿಕಾರದ ದರ್ಪದಿಂದ ಮೆರೆಯುತ್ತಿದ್ದಾರೆ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದರು. ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದನ್ನು ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಇಂದು ಬೆಳಗಾವಿ ಸುವರ್ಣಸೌಧದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ (BJP Protest) ನಡೆಸಲಾಯಿತು. ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸ್ವಾಮೀಜಿ, ರೈತಾಪಿ ವರ್ಗದ ಧರಣಿ- ಹೋರಾಟದ ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಬೇಕಿತ್ತು
ಇಲ್ಲೇ ಸುವರ್ಣ ಸೌಧದಲ್ಲಿ ಇದ್ದರೂ ಸಹ ಮುಖ್ಯಮಂತ್ರಿಗಳು ಮನಸ್ಸು ಮಾಡಲಿಲ್ಲ. ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡುವ ಸೌಜನ್ಯವನ್ನು ತೋರಲಿಲ್ಲ. ಬದಲಾಗಿ ಅಮಾಯಕರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದು, ಚನ್ನಮ್ಮನ ನಾಡಿನಲ್ಲಿ ಲಾಠಿಚಾರ್ಜ್ ಆಗಿರುವುದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.
ಮುಖ್ಯಮಂತ್ರಿಗಳು ಯಾವ ಕಾರಣಕ್ಕೆ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಪಡೆಯುತ್ತೇವೆ. ದರ್ಪದಿಂದ ಮೆರೆದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಎರಡೂ ಸದನದಲ್ಲಿ ಇದನ್ನು ಆಗ್ರಹಿಸಲಿವೆ ಎಂದು ಅವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Job Fair: ಜ.19ರಂದು ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳ
ಕಾಂಗ್ರೆಸ್ ಸರ್ಕಾರದವರು ಮೂರೂ ಬಿಟ್ಟಿದ್ದಾರೆ. 136 ಶಾಸಕರಿದ್ದೇವೆ. ಅಧಿಕಾರ ಶಾಶ್ವತ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯನವರ ಸರ್ಕಾರ ಇದ್ದಂತಿದೆ. ಹಿಂದಿನ ಅವಧಿಯಲ್ಲೂ ಇದೇ ರೀತಿ ನಡೆದುಕೊಂಡಿದ್ದು, ಸಿಎಂ ಅವರನ್ನು ಸದನದಲ್ಲಿ ಪ್ರಶ್ನಿಸುತ್ತೇವೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನೆ ಸಂದರ್ಭದಲ್ಲಿ ರಾಜ್ಯದ ಮಾಜಿ ಸಚಿವರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Money Tips: ಮೊದಲ ಬಾರಿ ಆರೋಗ್ಯ ವಿಮೆ ಮಾಡಿಸುತ್ತಿದ್ದೀರಾ? ಈ ಅಂಶಗಳನ್ನು ಮರೆಯದಿರಿ
ಯಾರಿಗೂ ತೊಂದರೆ ಆಗದಂತೆ ಸರ್ಕಾರ ಆದೇಶಿಸಬೇಕಿತ್ತು. ಹೋರಾಟಗಾರರನ್ನು ಕರೆದು ಮಾತನಾಡಬೇಕಿತ್ತು. ಅವರಿಗೆ ಮನಸ್ಸಿಲ್ಲ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಲಾಠಿಚಾರ್ಜ್ ಮಾಡಿ ರಕ್ತ ಸುರಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಲಕ್ಷಣವಲ್ಲ.
-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ.
ಲಿಂಗಾಯತ ಪಂಚಮಸಾಲಿ ಸಮಾಜದ ಸುದೀರ್ಘ ಹೋರಾಟ ನ್ಯಾಯಯುತವಾಗಿದೆ. ಹಿಂದೆ ಬಿಜೆಪಿ ಸರ್ಕಾರವು ಸಾಕಷ್ಟು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿತ್ತು. ಆಗ ಶಾಂತ ರೀತಿಯ ಹೋರಾಟಕ್ಕೆ ನಾವು ಸ್ಪಂದಿಸಿದ್ದೇವೆ. ಈಗ ಇಲ್ಲಿ ನಡೆದ ಹೋರಾಟಕ್ಕೆ ಸಿದ್ದರಾಮಯ್ಯನವರ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಹೋರಾಟ ವಿಫಲಗೊಳಿಸುವ ಪ್ರಯತ್ನವೇ ಇದೆಲ್ಲ ಅನಾಹುತಕ್ಕೆ ಕಾರಣ.
-ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಬಸವಣ್ಣನವರ ಅನುಯಾಯಿಗಳ ಮೇಲೆ ದಯೆ ಇಲ್ಲದಂತೆ, ರಕ್ತ ಬರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಸರ್ಕಾರದ ಕಡೆಯಿಂದ ಇವರೇ ಕಲ್ಲುಗಳನ್ನು ತೂರಿ, ಲಾಠಿಚಾರ್ಜ್ ಮಾಡಿದ್ದನ್ನು ನೋಡಿದರೆ ಇದೆಲ್ಲ ಪೂರ್ವಯೋಜಿತ ಅನಿಸುತ್ತದೆ.
-ಆರ್. ಅಶೋಕ್, ವಿಪಕ್ಷ ನಾಯಕ
ಕೈಯಲ್ಲಿ ಶರಣು; ಕಂಕುಳಲ್ಲಿ ದೊಣ್ಣೆ. ಇದೇ ದೊಣ್ಣೆ ನಿನ್ನೆ ಕೆಲಸ ಮಾಡಿದೆ. ನಿಜಲಿಂಗಪ್ಪನವರ ಕಾಲದಿಂದ ಕಾಂಗ್ರೆಸ್ ಪಕ್ಷವು ಲಿಂಗಾಯತರು, ವೀರಶೈವ ಸಮಾಜದ ವಿರುದ್ಧ ಇದೇ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ವೀರೇಂದ್ರ ಪಾಟೀಲರಿಗೆ ಯಾವ ರೀತಿ ಮಾಡಿದ್ದರು ಎಂಬುದು ಅಚ್ಚಳಿಯದೆ ಉಳಿದಿದೆ.
-ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ನಾಯಕ
ಮುಖ್ಯಮಂತ್ರಿಗಳೇ, ನೀವು ರಾಣಿ ಚನ್ನಮ್ಮನವರ ವಂಶಜರ ರಕ್ತ ಹರಿಸಿದ್ದೀರಿ. ಅವರ ಶಾಪ ಕಾಂಗ್ರೆಸ್ ಪಕ್ಷಕ್ಕೆ ತಟ್ಟಲಿದೆ.
-ಸಿ.ಸಿ. ಪಾಟೀಲ್, ಮಾಜಿ ಸಚಿವ
ಈ ಸುದ್ದಿಯನ್ನೂ ಓದಿ | Reliance Jio: ಹೊಸ ವರ್ಷಕ್ಕೆ ‘ನ್ಯೂ ಇಯರ್ ವೆಲ್‌ಕಮ್ ಪ್ಲಾನ್ -2025’ ಬಿಡುಗಡೆ ಮಾಡಿದ ಜಿಯೋ!