ಹುಬ್ಬಳ್ಳಿ: ಕೋವಿಡ್ ಲಸಿಕೆಯನ್ನು ಟೀಕಿಸುವ ಸಿದ್ದರಾಮಯ್ಯ ಅವರಿಗೆ 100 ಕೋಟಿ ಡೋಸ್ ಲಸಿಕೆ ಪಡೆದ ಜನರೇ ಎದ್ದುನಿಂತು ಉತ್ತರಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಶುಕ್ರವಾರ ಮಾತನಾಡಿದ ಅವರು ಲಸಿಕೆ ಎಂಬುದೇ ಸುಳ್ಳು ಎಂದು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಪ್ರಶ್ನೆಗಳು ಬರುತ್ತವೆ ಎನ್ನುವ ಕಾರಣಕ್ಕಾಗಿಯೇ ಲಸಿಕೆ ಪಡೆದವರ ಮಾಹಿತಿ ಸಂಗ್ರಹಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಅದಕ್ಕೆ ಜೋಡಿಸಲಾಗಿದೆ. ವೈಜ್ಞಾನಿಕವಾಗಿ ದಾಖಲೆ ನೋಂದಣೆ ಮಾಡಿಯೇ ಲಸಿಕೆ ನೀಡಲಾಗಿದೆ. 100 ಕೋಟಿ ಡೋಸ್ ಲಸಿಕೆ ಕೊಟ್ಟಿದ್ದು ನಿಜ. ಅವರ ಆರೋಪದಲ್ಲಿ ಏನೂ ನಿಜವಿಲ್ಲ ಎಂದರು.
ಉಪಚುನಾವಣೆಯಲ್ಲಿ ಬಿಜೆಪಿಯವರು ಚೀಲದಲ್ಲಿ ಹಣ ಹೊತ್ತು ತಂದಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿ ‘ಕುಂದಗೋಳ ಸೇರಿದಂತೆ ಹಿಂದಿನ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ವಿರೋಧ ಪಕ್ಷದಲ್ಲಿದ್ದಾಗ ಸಿದ್ದ ರಾಮಯ್ಯ ಸೇರಿದಂತೆ ಹಲವರು ಈ ರೀತಿ ಹೇಳುವುದು ರೆಡಿಮೇಡ್ ಕಾಮನ್ ಡೈಲಾಗ್’ ಎಂದು ಜರಿದರು.