Saturday, 14th December 2024

ಮಾನಸಿಕ‌ ರೋಗ ನಿವಾರಣೆಗೆ ಧೈರ್ಯವೇ ಮದ್ದು!

ಡಾ.ವೆಂಕಟೇಶ್‌ ಬಾಬು, ಮನೋವೈದ್ಯ, ಫೋರ್ಟಿಸ್ ಆಸ್ಪತ್ರೆ

ಇಂದು ವಿಶ್ವ ಆರೋಗ್ಯ ದಿನ

ಇಂದಿನ ಅತಿದೊಡ್ಡ ರೋಗವೆಂದರೆ ಮಾನಸಿಕ ರೋಗ. ಇದು ಯಾವುದೇ ವಯಸ್ಸಿನ ಮಿತಿ ಇಲ್ಲದೇ ಪ್ರತಿಯೊಬ್ಬರನ್ನು ಒಂದಲ್ಲ‌ಒಂದು ಘಟ್ಟದಲ್ಲಿ ಈ ರೋಗ ಆವರಿಸುತ್ತದೆ. ಆದರೆ,ಇದರಿಂದ ಹೊರಬರಲಾಗದೇ ಎಷ್ಟೋ ಮಂದಿ ಸಾವಿನ‌ಹಾದಿ ಹಿಡಿದಿದ್ದಾರೆ. ಇಂದು ವಿಶ್ವ ಮಾನಸಿಕ ಆರೋಗ್ಯ ದಿನ.
ಪ್ರತಿ 40 ಸೆಕೆಂಡಿಗೆ ಒಬ್ಬರು, ಈ ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದರೆ ಯಾರಿಗಾದರೂ ಗಾಬರಿ ಮತ್ತು ವಿಷಾದವಾಗುತ್ತದೆ.

ನಮ್ಮ ದೇಶದಲ್ಲಿ ಪ್ರತಿವರ್ಷ 1 ಲಕ್ಷದ 35 ಸಾವಿರ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 12 ರಿಂದ15 ಲಕ್ಷ ಜನ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ನಿರಾಶೆ, ಹತಾಶೆ, ದುಃಖ, ಸೋಲು, ನಿರುದ್ಯೋಗ, ದೈಹಿಕ – ಮಾನಸಿಕ ಹಿಂಸೆಗೆ ಒಳಗಾಗುವುದು, ಅಪಮಾನ, ನಂಬಿದವರಿಂದಲೇ ಮೋಸಹೋಗುವುದು, ಹಣಕಾಸಿನ ಮುಗ್ಗಟ್ಟು, ಅನೇಕ ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಕಾರಣಾಂಶಗಳಾದರೆ, ಕೋಪ, ರೋಷ, ದ್ವೇಷಗಳು, ಭಯ ಆತಂಕಗಳೂ ಆತ್ಮ ಹತ್ಯೆಗೆ ಪ್ರೇರಣೆ ನೀಡುತ್ತೇವೆ. ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡಾಗ ಪತ್ರಿಕೆ – ಟೀವಿಗಳಲ್ಲಿ ಅದಕ್ಕೆ ದೊರೆಯುವ ಪ್ರಚಾರ, ಅನೇಕರ ಮನಸ್ಸಿನಲ್ಲಿ ನೋವು ಅವಮಾನವಾದಾಗ ನಾವು ಆತ್ಮಹತ್ಯೆ ಮಾಡಿಕೊಳ್ಳ ಬೇಕೆಂಬ ಯೋಚನೆಯನ್ನು ಹುಟ್ಟುಹಾಕುತ್ತದೆ.

ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇಕಡಾ 35 ರಷ್ಟು ಜನ 15 ರಿಂದ 30 ವರ್ಷ ವಯಸ್ಸಿನ ಒಳಗಿನವರು ಎಂಬುದು ಮತ್ತೊಂದು ಆತಂಕವನ್ನುಂಟು ಮಾಡುವ ವಿಷಯ. ಈ ವಯಸ್ಸಿನವರಲ್ಲಿ ಕಾಲಕ್ಕೆ ತಕ್ಕಂತೆ ಆಸೆ, ನಿರೀಕ್ಷೆಗಳು ಹೆಚ್ಚು; ಸ್ಪರ್ಧೆಯೂ ಹೆಚ್ಚು. ಹೀಗಾಗಿ ನಿರಾಶೆ ಹತಾಶೆಯೂ ವಿಪರೀತ. ಜೀವನ ಕೌಶಲ ನಿಭಾಯಿಸುವ ಸಾಮರ್ಥ್ಯವಿನ್ನೂ ಬೆಳೆದಿರುವುದಿಲ್ಲ, ಭಾವೋದ್ವೇಗದಿಂದ ಸಾಯುವ ನಿರ್ಧರವನ್ನು ಬಹಳಬೇಗ ಮಾಡಿಬಿಡುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡುವವರಲ್ಲಿ ಸ್ತ್ರೀಯರೇ ಹೆಚ್ಚು. ಆದರೆ ಆತ್ಮಹತ್ಯೆ ಮಾಡಿಕೊಂಡು ಸಾಯುವವರಲ್ಲಿ ಪುರುಷರ ಸಂಖ್ಯೆಯೇ ಅಧಿಕ.

ಆತ್ಮಹತ್ಯೆ ನಿರ್ಧಾರದ ಆ ಘಟ್ಟ:
ಕೆಲವು ಪ್ರಕರಣಗಳಲ್ಲಿ ಆತ್ಮಹತ್ಯೆ ನಿರ್ಧಾರ ಥಟ್ಟನೆ ಬಂದು ಬಿಡುತ್ತದೆ. ಕೆಲವೇ ಕ್ಷಣಗಳಲ್ಲಿ ಆತ್ಮಹತ್ಯೆ ಪ್ರಯತ್ನ ನಡದೇ ಹೋಗುತ್ತದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಆತ್ಮಹತ್ಯೆಯ ನಿರ್ಧಾರ ಒಂದು ಪ್ರಕ್ರಿಯೆ. ನಿಧಾನವಾಗಿ ಹಂತ ಹಂತವಾಗಿ ಕೆಲವು ದಿನಗಳ ಅವಧಿಯಲ್ಲಿ ಮುಂದುವರೆದು ಆತ್ಮಹತ್ಯಾ ಪ್ರಯತ್ನದಲ್ಲಿ ಕೊನೆಗೊಳ್ಳುತ್ತದೆ. ಮೊದಲು ಬದುಕು ಬೇಡ, ಬದುಕುವುದು ಕಷ್ಟ, ಹಿಂಸೆ ಎನಿಸುತ್ತದೆ ನಂತರ ಸಾವು ಬಂದರೆ ಚೆಂದ ಎನಿಸುತ್ತದೆ. ಸಾವು ಸಮಸ್ಯೆಗೆ ಪರಿಹಾರ, ಸಾವು ತನ್ನನೋವು – ಕಷ್ಟಕ್ಕೆ ಮುಕ್ತಿ ನೀಡುತ್ತದೆ. ತಾನು ಸತ್ತು, ಸಂಬಂಧಪಟ್ಟವರಿಗೆ ಪಾಠ ಕಲಿಸಬೇಕು ಎನಿಸುತ್ತದೆ. ಈ ಅವಧಿಯಲ್ಲಿ ಯಾರಾದರೂ ವ್ಯಕ್ತಿಯೊಂದಿಗೆ ಮಾತನಾಡಿ ,‘ಸಾವು ಸಮಸ್ಯೆಗೆ ಪರಿಹಾರವಲ್ಲ, ನಿನ್ನ ಸಹಾಯಕ್ಕೆ ನಾನಿದ್ದೇನೆ, ಸಮಸ್ಯೆ ಪರಿಹಾರಕ್ಕೆ ಮಾರ್ಗ ತೋರಿಸುತ್ತೇನೆ, ಸಂಬಂಧಪಟ್ಟವರ ಆಸರೆ – ಸಹಾನುಭೂತಿಯನ್ನು ಕೊಡಿಸುತ್ತೇನೆ. ಸಾಯುವುದು ಬೇಡ, ಬದುಕಿದ್ದರೆ ಒಳ್ಳೆಯ ದಿನಗಳನ್ನು ಕಾಣಬಹುದು ಜಯಸಿಗುತ್ತದೆ, ಎಂದು ಧೈರ್ಯ ಹೇಳಿದರೆ ಸಾಂತ್ವನ ಮಾಡಿದರೆ ಆತ್ಮಹತ್ಯೆಯ ನಿರ್ಧಾರವನ್ನು ವ್ಯಕ್ತಿ ಕೈಬಿಡುತ್ತಾನೆ. ಆತ್ಮಹತ್ಯೆ ತಡೆಯುವಲ್ಲಿಇದು ಬಹಳಮುಖ್ಯ ವಿಧಾನ – ಅಂದರೆ ಯಾರ ನಕಾರಾತ್ಮಕ ಘಟನೆಗಳನ್ನು ಎದುರಿಸುತ್ತಿದ್ದಾರೋ, ಆರ್ಥಿಕ, ಕೌಟುಂಬಿಕ – ಔದ್ಯೋಗಿಕ – ಸಾವು – ಅಗಲಿಕೆಗಳನ್ನು ಎದುರಿಸುತ್ತಿದ್ದಾರೋ ಅವರಿಗೆ ಆಸರೆ/ ಪ್ರೋತ್ಸಾಹ / ಸಾಂತ್ವನ / ಆಪ್ತಸಮಾಲೋಚನೆಯನ್ನು ಮಾಡಬೇಕು. ಅಗತ್ಯಬಿದ್ದರೆ ಮನೋವೈದ್ಯರು, ಮನಶಾಸ್ತ್ರಜ್ಞರಲ್ಲಿಗೆ ಕಳುಹಿಸಿಕೊಡಬೇಕು.

ಆಪ್ತಸಮಾಲೋಚನೆ ಬೇಕು:
ಆತ್ಮಹತ್ಯೆ ಪ್ರಯತ್ನ ಮಾಡಿ, ಬದುಕುಳಿದವರಿಗೆ ಆಪ್ತಸಮಾಲೋಚನೆ ಅಗತ್ಯವಿದೆ. ಅವರ ಮನೆಯವರಿಗೂ ಆಪ್ತಸಮಾಲೋಚನೆ ಬೇಕು. ಸಮಸ್ಯೆಯನ್ನು, ಯಾವ ಸಂದರ್ಭ ಯಾರಿಂದ ಏನು ತೊಂದರೆ, ಸಮಸ್ಯೆಯನ್ನು ಬಗೆಹರಿಸಲು ಯಾರು ಏನು ಮಾಡಬೇಕು, ವ್ಯಕ್ತಿಗೆ ಎಷ್ಟು ನೆರವು ಬೇಕು ಎಂದು ಎಲ್ಲರೂ ಯೋಚಿಸಿ ಕಾರ್ಯಪ್ರವೃತ್ತರಾಗಬೇಕು.

ಖಿನ್ನತೆಗೆ ಒಳಗಾದ ವ್ಯಕ್ತಿಯನ್ನು ಗುರುತಿಸಿ:
1. ಪರೀಕ್ಷೆಯಲ್ಲಿ ಫೇಲಾದವರು
2. ಆರ್ಥಿಕ ಸಂಕಷ್ಟ ತೀವ್ರ ನಷ್ಟವನ್ನು ಅನುಭವಿಸುತ್ತಿರುವುದು
3. ಸಾಲದ ಸುಳಿಯಲ್ಲಿ ಸಿಲುಕಿದವರು
4. ಹಿಂಸಾಚಾರ – ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಸ್ತ್ರೀಯರು
5. ನಿರುದ್ಯೋಗಿಗಳು
6. ಪ್ರಾಣಾಂತಕ /ಸಾಮಾಜಿಕ ಕಳಂಕವನ್ನುಂಟು ಮಾಡುವ ರೋಗಗಳಿಂದ ಬಳಲುತ್ತಿರುವವರು
7. ಪ್ರೀತಿ ವಂಚಿತರು, ಒಂಟಿಯಾಗಿರುವವರು
8. ನಂಬಿದವರಿಂದಲೇ ಮೋಸ ವಂಚನೆಗೆ ಒಳಗಾದವರು
9. ಅವಮಾನಕ್ಕೆ ಒಳಗಾದವರು

ಮಾನಸಿಕ ಆರೋಗ್ಯ ವೃದ್ಧಿಸಿ:
ಎಲ್ಲರಲ್ಲಿ ಅದರಲ್ಲೂ ಮುಖ್ಯವಾಗಿ ಹರೆಯ ಮತ್ತು ಯುವಜನಾಂಗದಲ್ಲಿ ಜೀವನಪ್ರೀತಿಯನ್ನು ಹೆಚ್ಚಿಸಬೇಕಾಗಿದೆ. ಇತಿಮಿತಿಯ ಆಸೆ –ಆಕಾಂಕ್ಷೆಗಳಿಂದ ನಿರಾಶೆ ಹತಾಶೆಯುಂಟಾಗುವುದು ತಪ್ಪುತ್ತದೆ. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಒಂದು ಗುರಿಯನ್ನು ಮುಟ್ಟಲಾಗದಿದ್ದರೆ ಮತ್ತೊಂದು ಗುರಿಯನ್ನು ಆಯ್ಕೆಮಾಡಿಕೊಳ್ಳಬೇಕು. ಪ್ರೋತ್ಸಾಹಿಸುವ ಸಾಂತ್ವನ ಹೇಳುವ ಜನರು ಹತ್ತಿರ ಇರಬೇಕು. ಈಸಬೇಕು ಇದ್ದು ಜೈಸಬೇಕು ಎಂಬ ನಾಣ್ಣುಡಿಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಸಾವು ಯಾವ ಸಮಸ್ಯೆಗೂ ಪರಿಹಾರವಲ್ಲ. ನಾವೆಲ್ಲ ಆತ್ಮಹತ್ಯೆಯನ್ನು ತಡೆಗಟ್ಟೋಣ. ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳೋಣ.