Friday, 1st November 2024

ಸಂಕಷ್ಟದ ಸನ್ನಿವೇಶದಲ್ಲಿ ರೂಪಿಸಲಾದ ಆಯವ್ಯಯ ಇದು: ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು: ಸೋಮವಾರದ ಆಯವ್ಯಯ ಮಂಡನೆಯ ನಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಪತ್ರಿಕಾಗೋಷ್ಠಿಗೆ ಟಿಪ್ಪಣಿ ನೀಡಿದರು.

ಇಂದು ನಾನು 8ನೇ ಬಾರಿಗೆ ಆಯವ್ಯಯ ಮಂಡಿಸಿದ್ದೇನೆ. ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ರೂಪಿಸಲಾದ ಆಯವ್ಯಯ ಇದು.

ನೈಸರ್ಗಿಕ ವಿಕೋಪ, ಪ್ರವಾಹ ಮತ್ತು ಕೋವಿಡ್ 19ರ ಕಾರಣ ಇಡೀ ರಾಜ್ಯ ತಲ್ಲಣಗೊಂಡು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಲಾಕ್‍ಡೌನ್ ಮತ್ತಿತರ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳು ನಡೆಯದೆ ರಾಜಸ್ವ ಸಂಗ್ರಹಣೆಗೆ ದೊಡ್ಡ ಪೆಟ್ಟು ಬಿದ್ದಿತ್ತು. ಆದರೂ ಕೂಡ ಧೃತಿಗೆಡದೆ ಬದ್ಧ ವೆಚ್ಚಗಳನ್ನು (ಸಂಬಳ, ಪಿಂಚಣಿ, ಸಾಲ ಮರುಪಾವತಿ ಇತ್ಯಾದಿ) ಸಕಾಲದಲ್ಲಿ ಪಾವತಿಸಿ ಅಭಿವೃದ್ಧಿಗೂ ಅನುದಾನ ಒದಗಿಸಿದ್ದೇನೆ. ಆಯವ್ಯಯದ ಅಂದಾಜಿಗೆ ಎದುರಾಗಿ ಶೇ. 94 ರಷ್ಟು ವೆಚ್ಚವನ್ನು ಸಾಧಿಸುವ ಭರವಸೆ ನನಗಿದೆ. (ಸುಮಾರು ಶೇ. 85 ರಷ್ಟು ಸಾಧನೆಯಾಗಬಹುದೆಂದು ಅಂದಾಜಿಸಿದ್ದೆವು. ಅದಕ್ಕೂ ಹೆಚ್ಚು ಸಾಧನೆಯಾಗಿರುವುದು ನನಗೆ ಸಮಾಧಾನ ತಂದಿದೆ.)

ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಪರಿಸ್ಥಿತಿ ತುಸು ಸುಧಾರಿಸಿ ದ್ದರಿಂದ ಇದು ಸಾಧ್ಯವಾಗಿದೆ. ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನದ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಈ ದೃಷ್ಟಿಯಿಂದ ಇದು ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಆಗಿದೆ.

ಪ್ರತಿಕೂಲ ಪರಿಸ್ಥಿತಿಯಲ್ಲಿ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಬಜೆಟ್ ರೂಪಿಸುವ ಸಾಹಸ ಮಾಡಿದ್ದೇನೆ. ಕಳೆದ ವರ್ಷದ ಆಯ ವ್ಯಯದ ಗಾತ್ರಕ್ಕಿಂತಲೂ 8,314 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. (ಈ ವರ್ಷ – 2,46,207 ಕೋಟಿ ರೂ; ಕಳೆದ ವರ್ಷ-2,37,893 ಕೋಟಿ ರೂ.; ಈ ವರ್ಷ ಶೇ. 3.5 ರಷ್ಟು ಹೆಚ್ಚಳ.)

ಯಾರಿಗೂ ಹೊರೆಯಾಗದ ಜನಸ್ನೇಹಿ ಬಜೆಟ್ ಇದಾಗಿದೆ. ಯಾವುದೇ ತೆರಿಗೆ ಹೆಚ್ಚಳ ಇಲ್ಲ ಮತ್ತು ಹೊಸ ತೆರಿಗೆ ಪ್ರಸ್ತಾಪವೂ ಇಲ್ಲ.
ಆಯವ್ಯಯದಲ್ಲಿ ಎಲ್ಲ ವರ್ಗಗಳಿಗೆ, ಎಲ್ಲ ವಲಯಗಳಿಗೆ ಹಾಗೂ ಎಲ್ಲ ಜಿಲ್ಲೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮ ತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

ಮಹಿಳಾ ದಿನಾಚರಣೆಯಂದು ಮಂಡಿಸಿರುವ ಈ ಆಯವ್ಯಯದಲ್ಲಿ ಮಹಿಳೆಯರ ಸ್ವಾವಲಂಬನೆ, ಸುರಕ್ಷತೆ, ಉದ್ಯಮಶೀಲತೆ ಮತ್ತು ಅಭ್ಯುದಯಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡ ಲಾಗಿದೆ. ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ. 4ರ ರಿಯಾಯಿತಿ ದರದಲ್ಲಿ 2 ಕೋಟಿ ರೂ. ವರೆಗೆ ಸಾಲ ಸೌಲಭ್ಯ.

“ಸಂಜೀವಿನಿ” ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಆರು ಸಾವಿರ ಸಣ್ಣ ಉದ್ಯಮಗಳ ಸ್ಥಾಪನೆಗೆ ನೆರವು; 60 ಸಾವಿರ ಮಹಿಳೆಯರಿಗೆ ಅನುಕೂಲ. ನಗರ ಪ್ರದೇಶಗಳ ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳ ನ್ನಾಗಿ ಮೇಲ್ದರ್ಜೆಗೇರಿಸಿ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುವುದು.

ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ‘ವನಿತಾ ಸಂಗಾತಿ’ ಯೋಜನೆ ಜಾರಿ. ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲಿ ಮಹಿಳಾ ಸಬಲೀಕರಣ ಮತ್ತು ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು.

ನಾಗರಿಕ ಸ್ನೇಹಿ ಉಪಕ್ರಮಗಳು

*ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಡಿಬಿಟಿ ಮೂಲಕವೇ ಆರ್ಥಿಕ ನೆರವು ನೀಡಲು ಕ್ರಮ.
*ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲ್ಯಾಬ್
*ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆ ಸರಳೀಕರಣ. ಭೂ ಕಂದಾಯ ಅಧಿನಿಯಮ ತಿದ್ದುಪಡಿಗೆ ಕ್ರಮ.
*ಮಾಹಿತಿ ತಂತ್ರಜ್ಞಾನ ವಲಯಕ್ಕೆ ಉತ್ತೇಜನ ನೀಡಲು ಸ್ಟಾರ್ಟ್-ಅಪ್ ನೀತಿ ಪರಿಷ್ಕರಣೆ.
*ಸೈಬರ್ ಭದ್ರತಾ ಕಾರ್ಯನೀತಿ ಹಾಗೂ ದತ್ತಾಂಶ ಕೇಂದ್ರ ಕಾರ್ಯನೀತಿ ರೂಪಿಸಲು ಕ್ರಮ.

ಮುಂಗಡಪತ್ರವನ್ನು ಆರು ವಲಯಗಳಾಗಿ ಗಡಿಸಲಾಗಿದ್ದು, ನಿಗದಿಪಡಿಸಿದ ಅನುದಾನದ ವಿವರ

1. ಕೃಷಿ ಮತ್ತು ಪೂರಕ ಚಟುವಟಿಕೆಗಳು 31,028 ಕೋಟಿ ರೂ.
2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ 62,150 ಕೋಟಿ ರೂ.
3. ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ 52,529 ಕೋಟಿ ರೂ.
4. ಬೆಂಗಳೂರು ಸಮಗ್ರ ಅಭಿವೃದ್ಧಿ 7795 ಕೋಟಿ ರೂ.
5. ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ 2645 ಕೋಟಿ ರೂ.
6. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ 52,519 ಕೋಟಿ ರೂ.

ಆಯವ್ಯಯದ ಗಾತ್ರ – 2,46,207 ಕೋಟಿ ರೂ.

*2020-21ರಲ್ಲಿ ವಿತ್ತೀಯ ಕೊರತೆ 46,072 ಕೋಟಿ ರೂ. ಗಳಾಗಿತ್ತು. 2021-22ನೇ ಸಾಲಿಗೆ ಇದು 59,240 ಕೋಟಿ ರೂ. ಗಳಾಗಲಿದೆ.
*ಕಳೆದ ವರ್ಷ ರಾಜಸ್ವ ಹೆಚ್ಚಳ 143 ಕೋಟಿ ರೂ. ಗಳೆಂದು ಅಂದಾಜಿಸಲಾಗಿತ್ತು. ಈ ವರ್ಷ ರಾಜಸ್ವ ಕೊರತೆ 15,134 ಕೋಟಿ ರೂ.ಗಳಾಗಲಿದೆ ಎಂದು ಅಂದಾಜಿಸಲಾಗಿದೆ.

ಸ್ವೀಕೃತಿಗಳು
*ಸಾಲ ಸೇರಿ ಒಟ್ಟು ಸ್ವೀಕೃತಿ 2,43,734 ಕೋಟಿ ರೂ.
*ರಾಜಸ್ವ ಸ್ವೀಕೃತಿ 1,72,271 ಕೋಟಿ ರೂ. ಗಳಾಗಲಿದ್ದು, ಕಳೆದ ವರ್ಷಕ್ಕಿಂತ 7,649 ಕೋಟಿ ರೂ. ಕಡಿಮೆ ಆಗಲಿದೆ.
*ಕಳೆದ ವರ್ಷ ತೆರಿಗೆಯೇತರ ಆದಾಯ 7767 ಕೋಟಿ ರೂ. ಇತ್ತು. ಈ ವರ್ಷ ಅದು ಹೆಚ್ಚಾಗಿದ್ದು, 8,258 ಕೋಟಿ ರೂ. ಗಳಾಗಲಿದೆ. (ಶೇ. 6.3 ರ ಹೆಚ್ಚಳ) ಇದು ತೃಪ್ತಿ ತರುವ ಸಂಗತಿ.
*ಈ ವರ್ಷ ಜಿಎಸ್‍ಟಿ ಪರಿಹಾರ ಹೊರತು ಪಡಿಸಿ ಅನುದಾನದ ರೂಪದಲ್ಲಿ ಕೇಂದ್ರ ಸರ್ಕಾರ 15,538 ಕೋಟಿ ರೂ. ಗಳನ್ನು ನೀಡಲಿದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚು. (15,454 ಕೋಟಿ ರೂ.)

ಕೃಷಿ ವಲಯ:

*ಸಾವಯವ ಕೃಷಿ ಉತ್ತೇಜನಕ್ಕೆ 500 ಕೋಟಿ ರೂ.ಗಳ ಯೋಜನೆ ಜಾರಿ.
*ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಪ್ರವೇಶಾತಿಯಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಶೇ. 40 ರಿಂದ ಶೇ. 50 ಕ್ಕೆ ಹೆಚ್ಚಳ.
*ಸಣ್ಣ ಟ್ರಾಕ್ಟರುಗಳಿಗೆ ನೀಡುತ್ತಿದ್ದ ಸಹಾಯಧನ 25-45 ಪಿಟಿಓ ಹೆಚ್.ಪಿ. ಟ್ರಾಕ್ಟರ್‍ಗಳಿಗೆ ವಿಸ್ತರಣೆ.
*ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಸಂಸ್ಕರಣೆ ಮತ್ತು ಕೊಯ್ಲೋತ್ತರ ನಿರ್ವಹಣಾ ಘಟಕಗಳಿಗೆ ಕೇಂದ್ರದ ಶೇ. 35ರ ಸಹಾಯಧನದ ಜೊತೆಗೆ ರಾಜ್ಯ ಸರ್ಕಾರದಿಂದ ಶೇ. 15ರಷ್ಟು ಹೆಚ್ಚುವರಿ ಸಹಾಯಧನ; ಇದಕ್ಕಾಗಿ 50 ಕೋಟಿ ರೂ. ಗಳ ಅನುದಾನ.
*ಅಡಿಕೆ ಬೆಳಗಾರರನ್ನು ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತ ಸಂಶೋಧನೆ ಹಾಗೂ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ರೂ. ಮೀಸಲು
*ರಾಮನಗರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ.
*ಗೋ ಸಂಪತ್ತಿನ ರಕ್ಷಣೆಗಾಗಿ ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ಸ್ಥಾಪನೆ.
*‘ಸಮಗ್ರ ಗೋಸಂಕುಲ ಸಮೃದಿ’್ಧ ಯೋಜನೆಯಡಿ ಒಂದು ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ರೈತರಿಗೆ ಹೊರರಾಜ್ಯದ ದೇಶಿ ತಳಿಗಳನ್ನು ಪರಿಚಯಿಸಲು ಕ್ರಮ.
*ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿಲೋಲೀಟರ್ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿಯ ಬದಲು ಡೀಸೆಲ್ ಡೆಲಿವರಿ ಪಾಯಿಂಟ್‍ನಲ್ಲಿಯೇ ಕರರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಕ್ರಮ.
*2021-22ನೇ ಸಾಲಿನಲ್ಲಿ ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ’ ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ 62 ಕೋಟಿ ರೂ. ಅನುದಾನ.

ನೀರಾವರಿ:

*ರಾಜ್ಯದ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ಅನುಕೂಲವಾಗುವಂತೆ 21 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದೆ.
*ಪ್ರಮುಖ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಹಂತ 3, ಎತ್ತಿನಹೊಳೆ, ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ.
*ಕೃಷ್ಣಾ ಮೇಲ್ದಂಡೆ ಹಂತ 3 ಸೇರಿದಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಎಲ್ಲ ಯೋಜನೆಗಳಿಗೆ ಒಟ್ಟು 5500 ಕೋಟಿ ರೂ ಅನುದಾನ ನಿಗದಿ ಪಡಿಸಲಾಗಿದೆ.
*ಪಶ್ಚಿಮವಾಹಿನಿ ಯೋಜನೆ ಕುರಿತ ಮಾಸ್ಟರ್ ಪ್ಲಾನ್ ಅಡಿ, ಮುಂದಿನ 5 ವರ್ಷಗಳಲ್ಲಿ 3986 ಕೋಟಿ ರೂ. ವೆಚ್ಚದಲ್ಲಿ 1348 ಕಿಂಡಿ ಅಣೆಕಟ್ಟು ನಿರ್ಮಾಣ. 2021-22ನೇ ಸಾಲಿನಲ್ಲಿ 500 ಕೋಟಿ ರೂ. ಅನುದಾನ.

ಶಿಕ್ಷಣ/ಆರೋಗ್ಯ/ಇತರೆ ಅಭಿವೃದ್ಧಿ ವಲಯ

*ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ. ಪಂಚಾಯತ್ ರಾಜ್ ಸಂಸ್ಥೆಗಳ ಮುಖಾಂತರ ಶಾಲಾ ಶೌಚಾಲಯಗಳ ನಿರ್ವಹಣೆ ಹಾಗೂ ದುರಸ್ತಿಗೆ 100 ಕೋಟಿ ರೂ.
*ಪ್ರೌಢಶಾಲೆ ಹಾಗೂ ಉನ್ನತ ಶಿಕ್ಷಣ ವಲಯದಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಕ್ರಮ. ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಂ ವ್ಯವಸ್ಥೆ ಜಾರಿ.
*ಆರೋಗ್ಯ ಸೇವೆ ಬಲಪಡಿಸಲು ಆದ್ಯತೆ. 250 ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ; ಬೆಂಗಳೂರಿನಿಂದಾಚೆಗೂ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಿವಮೊಗ್ಗ ಮತ್ತು ಮೈಸೂರಿನಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಪ್ರಾರಂಭ. ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹಾಗೂ ದಾವಣಗೆರೆಯಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪ ಕೇಂದ್ರಗಳ ಪ್ರಾರಂಭ.
*ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಕೋಟಿ ರೂ. ವೆಚ್ಚದಲ್ಲಿ 50 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭ. 5 ಸಾವಿರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅನುಕೂಲ.
*ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸ್ವಂತ ಕಟ್ಟಡ ಹೊಂದಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಶೇ. 5ರ ಸಂಖ್ಯಾಬಲ ಹೆಚ್ಚಳ ಮಾಡುವ ಮೂಲಕ 5 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು.
*ಪ್ರಸಕ್ತ ಆಯವ್ಯಯದಲ್ಲಿ ಅಲ್ಪಸಂಖ್ಯಾತರ ಏಳಿಗೆಗಾಗಿ 1500 ಕೋಟಿ ರೂ. ಮೀಸಲು.
*ವಿವಿಧ ವಸತಿ ಯೋಜನೆಗಳಡಿ ಅನುಮೋದನೆಗೊಂಡು, ಪ್ರಾರಂಭವಾಗದೇ ಇರುವ ಮನೆಗಳನ್ನು ಪೂರ್ಣಗೊಳಿಸಲು ಸರ್ಕಾರದ ಆದ್ಯತೆ; ಪ್ರಗತಿಯಲ್ಲಿರುವ 9.74 ಲಕ್ಷ ಮನೆಗಳಿಗೆ ಮೂರು ವರ್ಷಗಳಲ್ಲಿ 10,194 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ.
*ಜಲ ಜೀವನ್ ಮಿಷನ್ ಯೋಜನೆಯಡಿ 2021-22ನೇ ಸಾಲಿನಲ್ಲಿ 4316.50 ಕೋಟಿ ರೂ. ವೆಚ್ಚದಲ್ಲಿ 21.75 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲು ಕ್ರಮ. ಹಳ್ಳಿಗಳಿಗೆ ಬಲ್ಕ್ ನೀರು ಸರಬರಾಜು ಮಾಡಲು 25,740 ಕೋಟಿ ರೂ. ವೆಚ್ಚದ ಯೋಜನೆ.
*ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 5 ವರ್ಷಗಳಲ್ಲಿ 900 ಕೋಟಿ ರೂ. ಗಳ ವೆಚ್ಚದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಯೋಜನೆಗಳ ಅನುಷ್ಠಾನ.
*ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ರೂ.ಗಳ ಅನುದಾನ; ವಿಶೇಷ ಅಭಿವೃದ್ಧಿ ಯೋಜನೆ ಮುಂದುವರಿಕೆಗೆ 3,000 ಕೋಟಿ ರೂ. (ಡಿ.ಎಂ. ನಂಜುಂಡಪ್ಪ ವರದಿಯನ್ವಯ)
*ರೈಲ್ವೆ ಮಂತ್ರಾಲಯದೊಂದಿಗೆ 50:50ರ ವೆಚ್ಚ ಹಂಚಿಕೆಯ ಆಧಾರದಲ್ಲಿ 7984 ಕೋಟಿ ರೂ. ಅಂದಾಜು ವೆಚ್ಚದ ಏಳು ಹೊಸ ರೈಲ್ವೆ ಯೋಜನೆ; ಇದರಿಂದ ರಾಜ್ಯದ ರೈಲ್ವೆ ಜಾಲಕ್ಕೆ 1173 ಕಿ.ಮೀ. ರೈಲು ಮಾರ್ಗ ಸೇರ್ಪಡೆ.
*ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ; ಯಾದಗಿರಿ ಜಿಲ್ಲೆಯಲ್ಲಿ ಬಲ್ಕ್ ಡ್ರಗ್ ಪಾರ್ಕ್, ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ, ಎರಡು ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್‍ಷಿಪ್‍ಗಳು ಹಾಗೂ ಪೀಣ್ಯ ಕೈಗಾರಿಕಾ ಟೌನ್‍ಷಿಪ್ ಸ್ಥಾಪನೆಗೆ ಕ್ರಮ. ಕಲಬುರಗಿಯಲ್ಲಿ ಸೌರವಿದ್ಯುತ್ ಪಾರ್ಕ್, ವಿಜಯಪುರ ಜಿಲ್ಲೆಯಲ್ಲಿ ಆಹಾರ ಪಾರ್ಕ್ ಸ್ಥಾಪನೆ. ಬೀದರ್ ಜಿಲ್ಲೆ ಕೃಷಿ ಯಂತ್ರೋಪಕರಣಗಳ ಪಾರ್ಕ್ ಮತ್ತು ವಿಶೇಷ ಪ್ಯಾಕೇಜ್.
*ಬೆಂಗಳೂರು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ.
*ಬೆಂಗಳೂರು ನಗರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಕ್ರಮ; ಉಪ ನಗರ ರೈಲು ಯೋಜನೆಗೆ 2021-22ನೇ ಸಾಲಿಗೆ 850 ಕೋಟಿ ರೂ. ಅನುದಾನ. ನಮ್ಮ ಮೆಟ್ರೋ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ.
*ಬೆಂಗಳೂರಿನ ಮಲ್ಲೇಶ್ವರದಲ್ಲಿ ಮೈಸೂರು ಲ್ಯಾಂಪ್ಸ್ ವರ್ಕ್ಸ್ ನಿಯಮಿತಕ್ಕೆ ಸೇರಿದ ಪ್ರದೇಶದಲ್ಲಿ Experience Bengaluru ಕೇಂದ್ರ ಅಭಿವೃದ್ಧಿ.
*ಬೈಯ್ಯಪ್ಪನಹಳ್ಳಿಯಲ್ಲಿರುವ ಎನ್.ಜಿ.ಇ.ಎಫ್.ನಲ್ಲಿ ಹಾಗೂ ಇನ್ನೂ ಮೂರು ಕಡೆಗಳಲ್ಲಿ ವೃಕ್ಷೋದ್ಯಾನಗಳ ಅಭಿವೃದ್ಧಿ.
*ಬೆಂಗಳೂರು ನಗರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ 57 ಜನಾರೋಗ್ಯ ಕೇಂದ್ರಗಳ ಸ್ಥಾಪನೆ; ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ 33 ಕೋಟಿ ರೂ.
*ಬೆಳಗಾವಿ ಮತ್ತು ರಾಯಚೂರಿನಲ್ಲಿ ವರ್ತುಲ ರಸ್ತೆ ನಿರ್ಮಾಣ.
*ಪ್ರವಾಸೋದ್ಯಮದ ಅಭಿವೃದ್ಧಿಗೆ 500 ಕೋಟಿ ರೂ.ಗಳ ಯೋಜನೆ ರೂಪಿಸಲಾಗುವುದು. ಕಡಲ ಕಿನಾರೆಗಳ ಅಭಿವೃದ್ಧಿ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ.
*ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಸಮಾಜದ ಸರ್ವವರ್ಗಗಳ ಹಿತರಕ್ಷಣೆಗೆ ಸ್ಪಂದಿಸುವ ಬಜೆಟ್ ನೀಡಲಾಗಿದೆ.