Thursday, 21st November 2024

Building Collapse: ಬಂಗಾರಪೇಟೆಯಲ್ಲಿ ಏಕಾಏಕಿ ಕುಸಿದ 3 ಅಂತಸ್ತಿನ ಕಟ್ಟಡ; ತಪ್ಪಿದ ಭಾರಿ ಅನಾಹುತ!

Building Collapse

ಕೋಲಾರ: ಬಂಗಾರಪೇಟೆ ನಗರದಲ್ಲಿ 3 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದಿರುವ ಘಟನೆ (Building Collapse) ಶುಕ್ರವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಳಪೆ ಕಾಮಗಾರಿಯಿಂದ ಕಟ್ಟಡ ಕುಸಿದಿರುವ ಶಂಕೆ ವ್ಯಕ್ತವಾಗಿದ್ದು, ಪುರಸಭೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಂಗಾರಪೇಟೆ ನಗರದ ದಂಡು ರಸ್ತೆಯಲ್ಲಿರುವ ರಾಜ್ ಕುಮಾರ್ ಎಂಬುವವರ 3 ಅಂತಸ್ತಿನ ಕಟ್ಟಡ ಕುಸಿದಿದೆ. ನೆಲ ಅಂತಸ್ತಿನ ನವೀಕರಣ ಕಾರ್ಯ‌ ನಡೆಯುತ್ತಿದ್ದಾಗ ಇತ್ತೀಚೆಗೆ ಗೋಡೆ ಕುಸಿದಿತ್ತು ಎನ್ನಲಾಗಿದೆ. ಹೀಗಾಗಿ ಕಟ್ಟಡ ವಾಲಿದ್ದರಿಂದ ಮನೆಯಲ್ಲಿದ್ದ ಮೂರು ಕುಟುಂಬಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ಖಾಲಿ ಮಾಡಿಸಿದ್ದಾರೆ. ಇದೀಗ ಕಟ್ಟಡ ಕುಸಿದಿದ್ದು, ಮುಂಭಾಗದ ಖಾಸಗಿ ಶಾಲೆಗೆ ಕಾಂಪೌಂಡ್‌ಗೂ ಹಾನಿಯಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪುರಸಭೆ ಅಧಿಕಾರಿಗಳೊಂದಿಗೆ ಶಾಸಕ ಎಸ್‌.ಎನ್. ನಾರಾಯಣಸ್ವಾಮಿ ಅವರು ಭೇಟಿ ಪರಿಶೀಲನೆ ನಡೆಸಿ, ಘಟನೆಗೆ ಕಾರಣ ತಿಳಿಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೆಸಿಬಿಗಳ ಮುಖಾಂತರ ಕಟ್ಟಡದ ಅವಶೇಷಗಳ ತೆರವು ಮಾಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ | Tirupati Laddu row: ತಿರುಪತಿ ಲಡ್ಡು ವಿವಾದ; ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಎತ್ತಿನಹೊಳೆ ಕಾಮಗಾರಿ ಗುಂಡಿಗೆ ಬಿದ್ದು ಇಬ್ಬರು ಮಕ್ಕಳ ‌ಸಾವು

Tiptur News

ತಿಪಟೂರು: ಮನೆಯಿಂದ ಗುರುವಾರ ಸಂಜೆ ಕಾಣೆಯಾಗಿದ್ದ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ (Tiptur News) ತಿಪಟೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಹುಚ್ಚನಹಟ್ಟಿಯ ಮನೋಹರ್(8), ಯದುವೀರ್ (10) ಮೃತ ಮಕ್ಕಳು.

ಗುರುವಾರ ಮಕ್ಕಳು ಆಟವಾಡಲು ಹೋಗಿ ಕಾಣೆಯಾಗಿರುವ ಬಗ್ಗೆ ತಿಪಟೂರು ಗ್ರಾಮಾಂತರ ಠಾಣೆಗೆ ಪೋಷಕರು ದೂರು ನೀಡಿದ್ದರು. ಮಕ್ಕಳಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರಿಗೆ ಶುಕ್ರವಾರ ಬೆಳಗ್ಗೆ ಅದೇ ಗ್ರಾಮದ ಬಳಿ ಹಾದುಹೋಗಿರುವ ಎತ್ತಿನಹೊಳೆ ನಾಲೆಯ ಗುಂಡಿಯಲ್ಲಿ ಇಬ್ಬರು ಮಕ್ಕಳ ಶವ ಪತ್ತೆಯಾಗಿವೆ.

ನೀರಿನಲ್ಲಿ ಆಟವಾಡಲು ಹೋದ ವೇಳೆ ಮಕ್ಕಳು ಗುಂಡಿಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಮಕ್ಕಳ ಮೃತದೇಹ ಕಂಡು ಹೆತ್ತವರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ | Viral Video: ದೇಗುಲದೊಳಗೇ ಹಿಂದೂ ಯುವತಿಯೊಂದಿಗೆ ಚಕ್ಕಂದ! ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಅನ್ಯಕೋಮಿನ ಯುವಕ; ವಿಡಿಯೋ ಫುಲ್‌ ವೈರಲ್‌

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಎತ್ತಿನಹೊಳೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ನಮ್ಮ ಮಕ್ಕಳ ಸಾವಿಗೆ ನ್ಯಾಯ ಬೇಕಿದೆ ಎಂದು ಪೋಷಕರು, ಮಕ್ಕಳ ಶವದ ಮುಂದೆ ಕುಳಿತು ಕಣ್ಣೀರಿಡುತ್ತಾ ಪ್ರತಿಭಟಿಸುತ್ತಿರುವ ದೃಶ್ಯ ಹೃದಯ ಕಲಕುವಂತಿದೆ.