ನವದೆಹಲಿ: ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಲಾಗಿದೆ. ಕರ್ನಾಟಕ ರಾಜ್ಯದ ನಾಲ್ಕು ಉಪ ಚುನಾವಣೆಗಳಿಗೆ ಪ್ರತ್ಯೇಕ ಅಧಿಸೂಚನೆ ಮೂಲಕ ದಿನಾಂಕ ವನ್ನು ನಂತರ ಪ್ರಕಟಿಸಲಾಗುವುದು.
ನವದೆಹಲಿಯ ವಿಜ್ಞಾನ ಭವನದಲ್ಲಿ ಫೆ.26ರಂದು ಸುದ್ದಿಗೋಷ್ಠಿ ನಡೆಸಿದ ಸಿಇಸಿ ಸುನಿಲ್ ಅರೋರಾ ಅವರು ಕರ್ನಾಟಕ ಹಾಗೂ ಇತರೆ ರಾಜ್ಯಗಳ ಉಪ ಚುನಾವಣೆಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು ಎಂದಿದ್ದಾರೆ.
ಐದು ರಾಜ್ಯಗಳ ಜೊತೆಗೆ ಕರ್ನಾಟಕದ ಒಂದು ಲೋಕಸಭೆ ಹಾಗೂ ಮೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕ ಪ್ರಕಟಿಸಲಾಗುವುದು. ಮಾರ್ಚ್ 27ರಿಂದ ಮೇ 2 ರೊಳಗೆ ಕರ್ನಾಟಕ, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ 18ಕ್ಕೂ ಅಧಿಕ ಉಪ ಚುನಾವಣೆ ಪ್ರಕ್ರಿಯೆ ಮುಗಿಸಬೇಕಿದೆ. ಎಲ್ಲಾ ವಿಧಾನಸಭೆ, ಲೋಕಸಭೆ ಉಪ ಚುನಾವಣೆಗಳ ಫಲಿತಾಂಶವೂ ಮೇ 2ರಂದೇ ಪ್ರಕಟವಾಗಲಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ನಿಧನದಿಂದ ತೆರವಾದ ಕ್ಷೇತ್ರಕ್ಕೆ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಜೊತೆಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧಾನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯಬೇಕಿದೆ.