Saturday, 2nd November 2024

ಉಪಕದನ: ಜನಪ್ರತಿನಿಧಿಗಳಿಗೆ ಆಟ, ಸಾಮಾನ್ಯರಿಗೆ ಪರದಾಟ

ವಿಶೇಷ ವರದಿ: ವಿನಾಯಕ ಮಠಪತಿ 

ಚುನಾವಣಾ ಸಭೆಗಳಲ್ಲಿ ಮಾಯವಾಗುತ್ತಿವೆ ಮಾಸ್ಕ್‌

ಕರೋನಾ ಪಸರಿಸಲು ರಾಜಕೀಯ ನಾಯಕರೇ ಸೂಪರ್ ಸ್ಪೆೆಡರ್ಸ್

ಬೆಳಗಾವಿ: ಒಂದು ಕಡೆ ಕರೋನಾ ಅಟ್ಟಹಾಸ, ಮತ್ತೊಂದು ಕಡೆ ಚುನಾವಣೆ ನೆಪದಲ್ಲಿ ರಾಜಕೀಯ ಪಕ್ಷಗಳ ಚೆಲ್ಲಾಟ.
ಇವೆರಡರ ಮಧ್ಯೆ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ರಾಜ್ಯದಲ್ಲಿ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಕೋವಿಡ್ ನಿಯಮ ಗಾಳಿಗೆ ತೂರಿ ಬಹಿರಂಗ
ಪ್ರಚಾರ ಸಭೆಗಳನ್ನು ನಡೆಸುವ ಮೂಲಕ, ಜನಸಾಮಾನ್ಯರಿಗೆ ಒಂದು ನ್ಯಾಯ ಹಾಗೂ ರಾಜಕಾರಣಿಗಳಿಗೆ ಒಂದು ನ್ಯಾಯ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಗಾವಿ ಲೋಕಸಭಾ ಉಪ ಚುನಾವಣೆ ನಡೆಯುತ್ತಿದ್ದು, ಸಿಎಂ ಆದಿಯಾಗಿ ಪ್ರತಿಪಕ್ಷದ ನಾಯಕರು ಸೇರಿದಂತೆ ಅನೇಕ ಗಣ್ಯರ ದಂಡು ಆಗಮಿಸುತ್ತಿದೆ. ಬಹಿರಂಗ ಪ್ರಚಾರ ಸೇರಿದಂತೆ ರಾಜಕೀಯ ಮುಖಂಡರುಗಳು ಕರೋನಾ ನಿಯಮ ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ವರ್ತನೆ ಮಾಡುತ್ತಿದ್ದು, ಸಾರ್ವಜನಿಕರ ಬಾಳಲ್ಲಿ ಚೆಲ್ಲಾಟ ಆಡುತ್ತಿದ್ದಾರೆ.

ಈಗಾಗಲೇ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದ್ದು, ಬರುವ ದಿನಗಳಲ್ಲಿ ಇದರ ತೀವ್ರತೆ ಹೆಚ್ಚಾಗುವಲ್ಲಿ ಅನುಮಾನವಿಲ್ಲ. ಬಹಿರಂಗ ಪ್ರಚಾರಗಳು ಯಥೇಚ್ಛವಾಗಿ ನಡೆಯುತ್ತಿದ್ದು, ಇದಕ್ಕೆ ಅಂಕುಶ ಹಾಕುವವರು ಯಾರು ಇಲ್ಲವಾ  ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಬೆಂಗಳೂರಿನಿಂದ ನಾಯಕರ ದಂಡು: ಪ್ರತಿದಿನ ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಉಪ ಚುನಾವಣೆ ನೆಪದಲ್ಲಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಇಲ್ಲಿ ನಡೆಯುವ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ವಾಪಸ್ ತಮ್ಮ ಕ್ಷೇತ್ರಗಳಿಗೆ ತೆರಳುತ್ತಾರೆ. ಒಂದು ವೇಳೆ ಕರೋನಾ ಸೋಂಕು ತಗುಲಿದ್ದೇ ಆದರೆ, ಬೇರೆ ಬೇರೆ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುವುದರಲ್ಲಿ ಅನುಮಾನವಿಲ್ಲ. ಅಷ್ಟೇ ಅಲ್ಲದೆ ಬೆಳಗಾವಿ ನಗರ ಪ್ರದೇಶ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಒಂದೇ ದಿನಕ್ಕೆ ಸೋಂಕಿತರ ಸಂಖ್ಯೆ ದುಪ್ಪಟ್ಟು: ಬೆಳಗಾವಿಯಲ್ಲಿ ಕಳೆದ ಒಂದು ವಾರದ ಹಿಂದೆ ಪ್ರತಿದಿನ ಎರಡಂಕಿ ಇದ್ದ ಸೋಂಕಿತರ ಸಂಖ್ಯೆ ಸದ್ಯ ನೂರರ ಗಡಿ ದಾಟಿದೆ. ಏ.5ರಂದು ಕೇವಲ 17 ಜನರಲ್ಲಿ ಸೋಂಕು ಕಂಡುಬಂದಿತ್ತು. ಆದರೆ, ಬುಧ ವಾರ ಆ ಸಂಖ್ಯೆ ನೂರರ ಗಡಿ ದಾಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 398 ಇದ್ದು, ದಿನೇ ದಿನೆ ಏರಿಕೆಯಾಗು ತ್ತಿರುವುದು ಆತಂಕ ಹುಟ್ಟಿಸಿದೆ.

ಪ್ರಚಾರ ಕಾರ್ಯದಲ್ಲಿ ಮಕ್ಕಳು ಭಾಗಿ
ಕರೋನಾ ಹಿನ್ನೆಲೆಯಲ್ಲಿ ರಾಜ್ಯದ 1ರಿಂದ 9ನೇ ತರಗತಿಗಳಿಗೆ ರಜೆ ನೀಡಲಾಗಿದ್ದು, ಮಕ್ಕಳು ಮನೆಯಲ್ಲಿದ್ದಾರೆ. ಇದೇ ಸಂದರ್ಭ ದಲ್ಲಿ ಉಪ ಚುನಾವಣೆ ಕೂಡಾ ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಶಾಲೆಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಮಕ್ಕಳು ರಾಜಕೀಯ ಪಕ್ಷಗಳ ಕ್ಯಾಂಪೇನ್‌ನಲ್ಲಿ ತೊಡಗಿಕೊಂಡಿದ್ದು, ಒಂದು ವೇಳೆ ಕರೋನಾ ಸೋಂಕು ತಗುಲಿದ್ದೇ ಆದರೆ, ಅಪಾಯ ಕಟ್ಟಿಟ್ಟ ಬುತ್ತಿ.

ನಾಯಕರಿಗೆ ಸದ್ಯ ಹೋಟೆಲ್‌ಗಳೇ ಆಶ್ರಯ ತಾಣ
ಪ್ರಚಾರಕ್ಕೆ ಬೆಂಗಳೂರಿನಿಂದ ಆಗಮಿಸುವ ರಾಜಕೀಯ ಮುಖಂಡರು ಹಾಗೂ ಅವರ ಬೆಂಬಲಿಗರು ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಾರೆ. ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ನಾಯಕರಿಗೆ ಸದ್ಯ ಹೋಟೆಲ್‌ಗಳೇ ಆಶ್ರಯ ತಾಣ. ಅನೇಕ ಹೋಟೆಲ್‌ಗಳಲ್ಲಿ ಕೋವಿಡ್ ನಿಯಮಗಳು ಲೆಕ್ಕಕ್ಕೆ ಇಲ್ಲದಂತಾಗಿದೆ. ಅನೇಕ ಹೋಟೆಲ್‌ಗಳಿಗೆ ಅವರ ನಾಯಕ ರನ್ನು ಭೇಟಿಯಾಗಲು ನೂರಾರು ಸಂಖ್ಯೆಯ ಕಾರ್ಯಕರ್ತರು ಆಗಮಿಸುತ್ತಿದ್ದು, ಮಾಸ್ಕ್‌ ಸೇರಿದಂತೆ ಕರೋನಾ ಎಚ್ಚರಿಕೆ ಕ್ರಮಗಳು ಇವರಿಗೆ ಅನ್ವಯವಾಗುತ್ತಿಲ್ಲ.