Sunday, 15th December 2024

ಉಪಕದನಕ್ಕೆ ಸಿಡಿಕಿಡಿ

ಬೆಳಗಾವಿ ಲೋಕಸಭೆ; ಮಸ್ಕಿ, ಬಸವಕಲ್ಯಾಣ, ವಿಧಾನಸಭೆ ಚುನಾವಣೆ ಏ.17ಕ್ಕೆ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ಬೆಳಗಾವಿ, ತಿರುಪತಿ ಲೋಕಸಭೆ ಮತ್ತು ಬಸವಕಲ್ಯಾಣ, ಮಸ್ಕಿ ಸೇರಿದಂತೆ ದೇಶಾದ್ಯಂತ ಒಟ್ಟು 14 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ.

ಸುರೇಶ ಅಂಗಡಿ ನಿಧನದಿಂದ ರಾಜ್ಯದಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರ ತೆರವಾಗಿದೆ. ಪ್ರತಾಪಗೌಡ ಪಾಟೀಲ ಅವರ ರಾಜೀನಾಮೆ ಯಿಂದ ಮಸ್ಕಿ, ಶಾಸಕ ನಾರಾಯಣರಾವ್ ಅವರ ನಿಧನದಿಂದ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ ತೆರವಾಗಿದೆ. ಶಾಸಕ
ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂಧಗಿ ಕ್ಷೇತ್ರಕ್ಕೆ ಮಾತ್ರ ಉಪಚುನಾವಣೆ ಘೋಷಣೆಯಾಗಿಲ್ಲ.

ಈ ಬಹುನಿರೀಕ್ಷಿತ ಉಪ ಚುನಾವಣೆ ಸಂದರ್ಭದಲ್ಲಿ ಯಾವ್ಯಾವ ಪ್ರಕರಣಗಳು ‘ಸಿಡಿ’ಯಲಿವೆ ಎನ್ನುವ ಬಗ್ಗೆ ಬಿಜೆಪಿ ಮತ್ತು
ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಹೊತ್ತಿ ಉರಿಯುತ್ತಿರುವ ಸಿಡಿ ಪ್ರಕಣರಣವನ್ನು ಹೇಗೆ ಲಾಭವಾಗಿ ಪರಿವರ್ತಿಸಬಹುದು ಎಂಬ ಬಗ್ಗೆ ಕಾಂಗ್ರೆಸ್ ಚಿಂತಿಸಿದರೆ, ಇದರಿಂದ ತಮಗೆ ಅಪಾಯವಾದರೆ ಏನು ಗತಿ ಎಂದು ಬಿಜೆಪಿ ಪಡೆ ಚಿಂತಿಸುತ್ತಿದೆ.

ಬೆಳಗಾವಿಯ ಹೊಣೆ ಸಾಹುಕಾರ್ ಹೊತ್ತರೆ ಕಷ್ಟ: ಸುರೇಶ್ ಅಂಗಡಿ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಅನುಕಂಪದ ಅಲೆ ಸಹಜವಾಗಿ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಇದೆ. ಆದರೆ ಸರಕಾರ ರಚನೆಯ ನಾಯಕತ್ವ ವಹಿಸಿದ್ದ ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿ ಈ ಚುನಾವಣೆ ಹೊಣೆ ಹೊತ್ತರೆ ಏನಾಗುತ್ತದೆ ಎನ್ನುವ ಪ್ರಶ್ನೆಗಳೂ ಶುರುವಾಗಿವೆ. ರಮೇಶ್ ಚುನಾವಣೆ ಹೊಣೆ ಹೊತ್ತರೆ, ಕ್ಷೇತ್ರದಲ್ಲಿ ಸಿಡಿ ಬಾಂಬ್‌ಗಳ ಸ್ಫೋಟವಾಗಲಿವೆ ಎನ್ನುವ ಆತಂಕ ಬಿಜೆಪಿಯಲ್ಲಿದೆ. ಅದರಲ್ಲೂ ಗೋಕಾಕ, ಬೆಳಗಾವಿಯಲ್ಲಿ ಸಿಡಿತ ಹೆಚ್ಚು ಎನ್ನುವ ಭೀತಿ ಇದೆ. ಅಲ್ಲದೆ, ಸಿಡಿಯಲ್ಲಿರುವ ಲೇಡಿ ಯಾವ ಸಮುದಾಯಕ್ಕೆ ಸೇರಿದವರು ಎನ್ನುವ ಪ್ರಸ್ತಾಪಗಳೂ ಚುನಾವಣೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾಂಗ್ರೆಸ್‌ಗೂ ಕಳವಳ: ಸಿಡಿ ಪ್ರಕರಣ ಬೆಳಗಾವಿಯ ಕಾಂಗ್ರೆಸ್ ಕಾರ್ಯಕರ್ತರಿಗೂ ಕಳವಳ ತಂದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ
ಸತೀಶ್ ಜಾರಿಕಿಹೊಳಿ ಅವರು ಅಭ್ಯರ್ಥಿಯಾದರೆ, ಸಿಡಿ ವಿಚಾರವನ್ನು ಚುನಾವಣೆಯಲ್ಲಿ ಪ್ರಸ್ತಾಪಿಸುವುದು ಕಷ್ಟ. ಒಂದು ವೇಳೆ
ಲಕ್ಷ್ಮೀ ಹೆಬ್ಬಾಳ್ಕರ್ ಅಭ್ಯರ್ಥಿಯಾದರೆ, ಸಿಡಿ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಇದರಿಂದ ಮಹಿಳಾ ಮತದಾರರ ಮೇಲೆ ಪರಿಣಾಮ ಬೀರುವುದನ್ನೂ ಅಲ್ಲಗಳೆಯುವಂತಿಲ್ಲ.

ಮಸ್ಕಿ, ಬಸವಕಲ್ಯಾಣದಲ್ಲಿ ಭಾಷೆ, ಜಾತಿ ಪರಿಣಾಮ: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ ಸಚಿವರಾಗುತ್ತಾರೆ ಎನ್ನುವ ಅಂಶಗಳು ಚುನಾವಣೆ ಮೇಲೆ ಪರಿಣಾಮ ಬೀರಿದರೆ, ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಲ್ಲಿ ಕನ್ನಡ, ಮರಾಠಿ ಮತ್ತು ಜಾತಿ-ಧರ್ಮದ ವಿಚಾರಗಳು ಹೆಚ್ಚಿನ ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಕ್ಷೇತ್ರದಲ್ಲಿ ಗಂಗಾಮತಸ್ಥರು, ಕೋಲಿ ಸಮಾಜದವರು ಮತ್ತು ಲಿಂಗಾಯತರು ಹಾಗೂ ದಲಿತರು ಹೆಚ್ಚಾಗಿದ್ದಾರೆ.

ಇದರೊಂದಿಗೆ ಈ ಹಿಂದೆ ಎರಡು ಬಾರಿ ಮರಾಠಿಗರೇ ಶಾಸಕರಾಗಿದ್ದರಿಂದ ಇಲ್ಲಿ ಮರಾಠಿಗರ ಪ್ರಾಬಲ್ಯವೂ ಇದೆ. ಆದರೆ ಲಿಂಗಾ ಯತರಿಗೆ ಟಿಕೆಟ್ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದ್ದು, ಈ ಮಧ್ಯೆ, ಮರಾಠಿಗರನ್ನು ಸೆಳೆಯರು ಎನ್ ಸಿಪಿ ಮತ್ತು ಶಿವಸೇನೆ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ.  ಇದರಿಂದ ಬಿಜೆಪಿಗೆ ನಷ್ಟವಾಗವುದೇ ಎನ್ನುವ ಪ್ರಶ್ನೆಗಳು ಪಕ್ಷದ ನಾಯಕರನ್ನು ಕಾಡುತ್ತಿವೆ.